ಮಾಗಡಿ: ಬಿಜೆಪಿ ಪಕ್ಷದವರು 140 ಶಾಸಕರನ್ನು ಒಳಗೊಂಡಿರುವ ಕಾಂಗ್ರೆಸ್ ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಎಂದು ಕನಸು ಕಾಣುತ್ತಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.
ತಾಲ್ಲೂಕಿನ ಮತ್ತಿಕೆರೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ದಸರಾ ಉದ್ಘಾಟನೆ ಮಾಡಲ್ಲ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಆರ್.ಅಶೋಕ್‌ಗೂ ನಮ್ಮ ಪಕ್ಷಕ್ಕೂ ಸಂಬಂಧ ಇಲ್ಲ. ಯಾವಾಗ ಸರ್ಕಾರ ಬೀಳುತ್ತೋ ಅಂತಾ ಅವರು ಕಾಯುತ್ತಿದ್ದಾರೆ. ನಾವು 140 ಜನ ಇದ್ದೇವೆ. ನಮ್ಮ ಸರ್ಕಾರದ ಆಡಳಿತ ನೋಡಿ ಭ್ರಮನಿರಸನ ಆಗಿದೆ. ಹಾಗಾಗಿ ಬುರುಡೆ ಬಿಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ಹೈಕಮಾಂಡ್ ತೀರ್ಮಾನ. ನಮ್ಮ ಹೈಕಮಾಂಡ್ ಬಲಿಷ್ಟವಾಗಿದೆ. ಅವರು ತೀರ್ಮಾನ ಮಾಡುತ್ತಾರೆ. ಒಂದು ಸಲವಾದರೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ಅಭಿಪ್ರಾಯವೂ ಹೌದು.
ನಾನು ಯಾವತ್ತೂ ಸಚಿವ ಸ್ಥಾನ ನೀಡಿ ಅಂತ ಕೇಳಲ್ಲ. ಹೈಕಮಾಂಡ್ ಸ್ಥಳೀಯ ನಾಯಕರನ್ನು ಗುರುತಿಸಿ ಅವಕಾಶ ಕೊಡಬೇಕು. ಮಂತ್ರಿ ಸ್ಥಾನ ಕೊಟ್ರೆ ನಾನು ಅಕಾಂಕ್ಷಿ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಪಕ್ಷದ ಗೊಂದಲದ ಕುರಿತು ಮಾತನಾಡಲು ಬರುತ್ತಿದ್ದಾರೆ.
ನನ್ನನ್ನು ಇಂದು ಮಾತನಾಡಲು ಕರೆದಿದ್ದಾರೆ. ನಾನು ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಬಗ್ಗೆ ತಿಳಿಸುತ್ತೇನೆ. ಇದು ಅಸಮಾಧಾನಿತರ ಸಭೆ ಅಲ್ಲ. ಸಮಸ್ಯೆ ಬಗೆಹರಿಸುವ ಸಭೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.