ADVERTISEMENT

ರಾಮನಗರ | ದುಡ್ಡು ಕೊಡಲಿಲ್ಲವೆಂದು ಶಾಸಕರ ಕಚೇರಿಗೆ ಕಲ್ಲು ತೂರಿದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 2:48 IST
Last Updated 25 ಆಗಸ್ಟ್ 2025, 2:48 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ರಾಮನಗರ: ಮದ್ಯದ ಅಮಲಿನಲ್ಲಿ ಶಾಸಕರ ಕಚೇರಿಗೆ ಕಲ್ಲು ತೂರಿ, ಕಿಟಕಿ ಗಾಜು ಒಡೆದು ಹಾಕಿದ ಕಾರ್ಮಿಕನೊಬ್ಬ ಐಜೂರು ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಟ್ರೂಪ್‌ಲೈನ್‌ನ ಮುತ್ತುರಾಜು ಬಂಧಿತ ಕಾರ್ಮಿಕ.

ADVERTISEMENT

ಪೇಂಟಿಂಗ್ ಕೆಲಸ ಮಾಡುವ ಮುತ್ತುರಾಜು ಇತ್ತೀಚೆಗೆ ಶಾಸಕರ ಕಚೇರಿಗೆ ಹೋಗಿ ದುಡ್ಡು ಕೇಳಿದ್ದ. ಆಗ ಅಲ್ಲಿದ್ದವರು ಹಣ ನೀಡಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಆತ ಆ. 22ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿದ್ದ.

ಕಚೇರಿಯ ಎರಡು ಕಿಟಕಿಗಳಿಗೆ ಕಲ್ಲು ತೂರಿ ಗಾಜುಗಳನ್ನು ಒಡೆದು ಹಾಕಿ, ₹4 ಸಾವಿರ ನಷ್ಟ ಉಂಟುಮಾಡಿದ್ದ. ಆತನ ಕೃತ್ಯವನ್ನು ಸ್ಥಳದಲ್ಲಿದ್ದ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದ್ದರು. ಅದನ್ನು ಶಾಸಕರ ಆಪ್ತ ಸಹಾಯಕ ಶಶಿಧರ್ ಅವರಿಗೆ ಕಳಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಚಿತ್ರದಲ್ಲಿ ವ್ಯಕ್ತಿ ಮುತ್ತುರಾಜು ಎಂಬುದು ಗೊತ್ತಾಗುತ್ತಿದ್ದಂತೆ ಆತನ ವಿರುದ್ಧ ಶಶಿಧರ್ ಠಾಣೆಗೆ ದೂರು ಕೊಟ್ಟಿದ್ದರು. ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಿದ ಆರೋಪದ ಮೇಲೆ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.