ADVERTISEMENT

ರಾಮನಗರ | ಬಗರ್‌ಹುಕುಂ ಅರ್ಜಿ ಶೀಘ್ರ ವಿಲೇವಾರಿ: ಶಾಸಕ ಇಕ್ಬಾಲ್ ಹುಸೇನ್

ಅರ್ಜಿದಾರರ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಇಕ್ಬಾಲ್ ಹುಸೇನ್

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 5:47 IST
Last Updated 9 ಅಕ್ಟೋಬರ್ 2024, 5:47 IST
<div class="paragraphs"><p>ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಕೆ.ಜಿ. ಹೊಸಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು, ಬಗರ್‌ ಹುಕುಂ&nbsp; ಸಾಗುವಳಿ ಚೀಟಿ ಅರ್ಜಿದಾರರ ಸ್ಥಳವನ್ನು ಪರಿಶೀಲಿಸಿದರು.</p></div>

ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಕೆ.ಜಿ. ಹೊಸಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು, ಬಗರ್‌ ಹುಕುಂ  ಸಾಗುವಳಿ ಚೀಟಿ ಅರ್ಜಿದಾರರ ಸ್ಥಳವನ್ನು ಪರಿಶೀಲಿಸಿದರು.

   

ರಾಮನಗರ: ‘ಬಗರ್ ಹುಕುಂ ಸಾಗುವಳಿ ಸಕ್ರಮ ಕೋರಿ ತಾಲ್ಲೂಕಿನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇವಾರಿಯಾಗದ ಕಾರಣ, ಯಾವೊಬ್ಬರ ರೈತನಿಗೂ ಜಮೀನು ಮಂಜೂರಾಗಿಲ್ಲ. ಅರ್ಜಿದಾರರ ಮಾಹಿತಿ ಪಡೆದು ಅವರ ಸ್ಥಳ ಪರಿಶೀಲನೆಯನ್ನು ನಾನೇ ಖುದ್ದಾಗಿ ಪರಿಶೀಲಿಸುತ್ತಿದ್ದು, ಬಾಕಿ ಉಳಿದಿರುವ ಅರ್ಜಿಗಳನ್ನು ಸದ್ಯದಲ್ಲೇ ವಿಲೇವಾರಿ ಮಾಡಲಾಗುವುದು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಹೇಳಿದರು.

ತಾಲ್ಲೂಕಿನ ಕೈಲಾಂಚ ಹೋಬಳಿಯ ಕೆ.ಜಿ. ಹೊಸಹಳ್ಳಿ ಗ್ರಾಮದಲ್ಲಿ ಬಗರ್‌ ಹುಕುಂ ಅರ್ಜಿದಾರರ ಸ್ಥಳವನ್ನು ಮಂಗಳವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈತನ ಮಗನಾಗಿರುವ ನನಗೆ ಅವರ ಕಷ್ಟದ ಅರಿವಿದ್ದು, ಆದ್ಯತೆ ಮೇರೆಗೆ ಅವರ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ಅದಕ್ಕಾಗಿ ಬಗರ್ ಹುಕುಂ ಸಾಗುವಳಿ ಅರ್ಜಿದಾರರ ಸ್ಥಳ ಪರಿಶೀಲನೆ ನಡೆಸುತ್ತಿದ್ದೇನೆ’ ಎಂದರು.

ADVERTISEMENT

‘ನಮೂನೆ 50, 53 ಹಾಗೂ 57ರಲ್ಲಿ ಎಷ್ಟು ಅರ್ಜಿಗಳಿವೆ? ಅದರಲ್ಲಿ ಯಾರೆಲ್ಲಾ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. 40 ವರ್ಷಕ್ಕೂ ಮೇಲ್ಪಟ್ಟು ವ್ಯವಸಾಯ ಮಾಡುತ್ತಿರುವ ರೈತರು ತಮಗೆ ಸಿಗಬೇಕಾದ ಹಕ್ಕು ಪಡೆಯದೆ ವಂಚಿತರಾಗಿದ್ದಾರೆ. ಕೆಲ ಅರ್ಜಿದಾರರು ನಿಧನರಾಗಿದ್ದು, ಅವರ ಮಕ್ಕಳು ಅರ್ಜಿ ವಿಲೇವಾರಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಸರಣಿ ಸಭೆ ಮಾಡಲಾಗಿದ್ದು, ಹಂತ ಹಂತವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು’ ಎಂದು ತಿಳಿಸಿದರು.

ಮೂರು ಕೆರೆಗೆ ನೀರು: ‘ತಾಲ್ಲೂಕಿನಲ್ಲಿ ಕೆರೆ ತುಂಬಿಸಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಮೂರು ಕೆರೆಗಳಿಗೆ ನೀರು ತುಂಬಿಸಲಾಗಿದೆ. ಮುಂಗಾರು ಮಳೆ ಸರಿಯಾಗಿ ಸುರಿಯದಿದ್ದರಿಂದ ರೈತರು ಕಷ್ಟದಲ್ಲಿದ್ದಾರೆ. ಅವರಿಗೆ ಸ್ಪಂದಿಸುವ ಸಲುವಾಗಿ, ಕಾಳೇಗೌಡನದೊಡ್ಡಿಯ ಏತ ನೀರಾವರಿ ಭೂಮಿ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ತಹಶೀಲ್ದಾರ್ ತೇಜಸ್ವಿನಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಬಗರ್ ಹುಕುಂ ಸಮಿತಿ ಸದಸ್ಯ ಆರ್. ದೊಡ್ಡವೀರಯ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.