ADVERTISEMENT

ರಾಮದೇವರ ಬೆಟ್ಟದಲ್ಲಿ ರಾಮನ ಪ್ರತಿಮೆ

ಬೆಟ್ಟ ಹತ್ತಿ ಕುಂದುಕೊರತೆಗಳನ್ನು ವೀಕ್ಷಿಸಿದ ಶಾಸಕ ಇಕ್ಬಾಲ್ ಹುಸೇನ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 6:56 IST
Last Updated 1 ಆಗಸ್ಟ್ 2024, 6:56 IST
ರಾಮನಗರದ ಹೊರವಲಯದಲ್ಲಿರುವ ರಾಮದೇವರ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ  ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಬುಧವಾರ ಭೇಟಿ ನೀಡಿದರು. ಅಧಿಕಾರಿಗಳು, ರಾಮಗಿರಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಇದ್ದಾರೆ
ರಾಮನಗರದ ಹೊರವಲಯದಲ್ಲಿರುವ ರಾಮದೇವರ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ  ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಬುಧವಾರ ಭೇಟಿ ನೀಡಿದರು. ಅಧಿಕಾರಿಗಳು, ರಾಮಗಿರಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಇದ್ದಾರೆ   

ರಾಮನಗರ: ‘ಜಿಲ್ಲೆಯ ಮುಕುಟದಂತಿರುವ ರಾಮದೇವರ ಬೆಟ್ಟದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡುವ ಕುರಿತು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಜೊತೆಗೆ, ಭಕ್ತರ ಅನುಕೂಲಕ್ಕಾಗಿ ಬೆಟ್ಟದಲ್ಲಿ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಹೊರವಲಯದಲ್ಲಿರುವ ರಾಮದೇವರ ಬೆಟ್ಟಕ್ಕೆಅಧಿಕಾರಿಗಳು ಮತ್ತು ಬೆಂಬಲಿಗರೊಂದಿಗೆ ಬುಧವಾರ ಹತ್ತಿ ಅಲ್ಲಿನ ಕುಂದುಕೊರತೆಗಳನ್ನು ವೀಕ್ಷಿಸಿದ ಅವರು, ನಂತರ, ಬೆಟ್ಟದಲ್ಲಿರುವ ದೇವಾಲಯದ ರಾಮಗಿರಿ ಸೇವಾ ಟ್ರಸ್ಟ್‌ ಪ್ರಮುಖರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

‘ದೇಶವೇ ರಾಮನಗರದತ್ತ ತಿರುಗಿ ನೋಡುವಂತಹ ಪ್ರತಿಮೆ ನಿರ್ಮಿಸುವುದಕ್ಕಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಪುರಾಣ ಪ್ರಸಿದ್ಧವಾದ ಬೆಟ್ಟದಲ್ಲಿ ಸೌಕರ್ಯಗಳ ಕೊರತೆ ಬಗ್ಗೆ ಸಾರ್ವಜನಿಕರು, ಪ್ರವಾಸಿಗರು ಹಾಗೂ ಭಕ್ತರು ಹಿಂದೆಯೂ ಅಹವಾಲು ಸಲ್ಲಿಸಿ ಬೆಟ್ಟ ಅಭಿವೃದ್ಧಿಗೆ ಮನವಿ ಮಾಡಿದ್ದರು’ ಎಂದರು.

ADVERTISEMENT

‘ಆ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಭೇಟಿ ನೀಡಿ ಇಲ್ಲಿನ ರಸ್ತೆ ಅಭಿವೃದ್ಧಿ, ಶೌಚಾಲಯ ವ್ಯವಸ್ಥೆ ಸೇರಿದಂತೆ ಇಲ್ಲಿಗೆ ಬೇಕಾದ ಅಗತ್ಯ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದ್ದೇನೆ. ಆದಷ್ಟು ಬೇಗ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ. ಬೆಟ್ಟಕ್ಕೆ ತೆರಳಲು ಅರಣ್ಯ ಇಲಾಖೆಯವರು ಪ್ರವೇಶ ಶುಲ್ಕ ಸಂಗ್ರಹಿಸಬಾರದು ಎಂಬ ಬೇಡಿಕೆ ಇದ್ದು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವೆ’ ಎಂದು ತಿಳಿಸಿದರು.

ತಹಶೀಲ್ದಾರ್ ತೇಜಸ್ವಿನಿ, ನಗರಸಭೆ ಪೌರಾಯುಕ್ತ ಜಯಣ್ಣ, ಶ್ರೀ ರಾಮಗಿರಿ ಸೇವಾ ಸಮಿತಿ ಅಧ್ಯಕ್ಷ ಎಸ್. ನರಸಿಂಹಯ್ಯ, ಗೌರವಾಧ್ಯಕ್ಷ ಶೇಷಾದ್ರಿ ಅಯ್ಯರ್, ಖಜಾಂಚಿ ಪದ್ಮನಾಭ್, ಸಹ ಕಾರ್ಯದರ್ಶಿಗಳಾದ ಯತೀಶ್, ಡೇರಿ ವೆಂಕಟೇಶ್, ಜಗದೀಶ್, ಅರ್ಚಕ ನಾಗರಾಜು ಭಟ್, ಹರಿಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಕಾಂಗ್ರೆಸ್ ಮುಖಂಡರಾದ ಸಿಎನ್‌ಆರ್ ವೆಂಕಟೇಶ್, ಸಂತೋಷ್ ಪಿ, ನಾಗರಾಜು, ಗುರುಪ್ರಸಾದ್, ಅನಿಲ್‌ಜೋಗೇಂದರ್, ಗುರುಪ್ರಸಾದ್, ವಾಸು, ಶ್ರೀನಿವಾಸ್, ಪಾದರಹಳ್ಳಿ ಮಹದೇವು, ಪರ್ವೇಜ್ ಪಾಷ, ವಸೀಂ, ಆಯೇಷಾ, ಪವಿತ್ರಾ, ಗಿರಿಜಮ್ಮ ಹಾಗೂ ಇತರರು ಇದ್ದರು.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲು ಮೈಸೂರಿನಲ್ಲಿ ಕೆತ್ತಲಾಗಿದ್ದ ಬಾಲರಾಮನ ಮೂರ್ತಿಯ ಪೈಕಿ ಒಂದನ್ನು ಇಲ್ಲಿಗೆ ತಂದು ರಾಮದೇವರ ಬೆಟ್ಟದಲ್ಲಿ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ.
– ಎಚ್‌.ಎ. ಇಕ್ಬಾಲ್ ಹುಸೇನ್, ಶಾಸಕ ರಾಮನಗರ

‘ಕೋಮು ರಾಜಕೀಯಕ್ಕೆ ಕುತಂತ್ರ’

‘ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗುತ್ತಿದ್ದು ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಇರಲಿದೆ. ಆದರೆ ವಿರೋಧ ಪಕ್ಷಗಳು ಈ ವಿಷಯದಲ್ಲಿ ಕೋಮು ರಾಜಕೀಯ ಮಾಡಲು ಕುತಂತ್ರ ಮಾಡುತ್ತಿದ್ದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಬಾಲ್ಯದಿಂದಲೂ ರಾಮನನ್ನು ಆರಾಧಿಸಿಕೊಂಡೇ ಬೆಳೆದಿರುವ ನನಗೆ ರಾಮನ ಹೆಸರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಇಲ್ಲೇ ಹುಟ್ಟಿದ್ದು ಇಲ್ಲೇ ಮಣ್ಣಾಗುವವರು ನಾವು. ಅಭಿವೃದ್ಧಿ ಹಾಗೂ ಜನರ ಸೇವೆಗಾಗಿ ನಾನು ರಾಜಕೀಯ ಮಾಡುವವನು. ರಾಮಗಿರಿ ಟ್ರಸ್ಟ್ ಸಮಿತಿ ಸೇರಿದಂತೆ ತಾಲ್ಲೂಕಿನ ನಾಗರಿಕರ ಸಲಹೆ ಪಡೆದು ರಾಮೋತ್ಸವ ಆಚರಿಸಲಾಗುವುದು’ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.