ADVERTISEMENT

ರೇವಣ್ಣ ನನಗೇನು ಚಡ್ಡಿ ಹೊಲಿಸಿಲ್ಲ: ಪುಟ್ಟಣ್ಣ ಟಾಂಗ್‌

ರಾಮನಗರದ ಶಾಲೆ–ಕಾಲೇಜುಗಳಿಗೆ ಸೌಹಾರ್ದ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 13:53 IST
Last Updated 28 ಜನವರಿ 2020, 13:53 IST
ರಾಮನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರೊಂದಿಗೆ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಮಂಗಳವಾರ ಚರ್ಚಿಸಿದರು
ರಾಮನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರೊಂದಿಗೆ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಮಂಗಳವಾರ ಚರ್ಚಿಸಿದರು   

ರಾಮನಗರ: ‘ಶಾಸಕ ಎಚ್‌.ಡಿ. ರೇವಣ್ಣ ನನಗೇನು ಅವರ ಚಡ್ಡಿ ಕಳೆದು ಹೊಲಿಸಿಕೊಟ್ಟಿಲ್ಲ. ಇನ್ನೊಬ್ಬರ ಬಗ್ಗೆ ಹೇಳುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡುವುದು ಒಳಿತು’ ಎಂದು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ತಿರುಗೇಟು ನೀಡಿದರು.

‘ಚಡ್ಡಿ ಹಾಕದೇ ಜೈಲಿನಲ್ಲಿ ನಿಂತಿದ್ದವರನ್ನು ಕರೆ ತಂದಿದ್ದೆ’ ಎಂಬ ರೇವಣ್ಣರ ಹೇಳಿಕೆ ಕುರಿತು ಅವರು ರಾಮನಗರದಲ್ಲಿ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ‘ನನಗೆ ಎಲ್ಲೆಲ್ಲಿ ಚಡ್ಡಿ ಹೊಲಿಸಿಕೊಟ್ಟಿದ್ದಾರೆ ಎಂದು ಅವರೇ ಹೇಳಬೇಕು. ನನಗೂ ಮಾತನಾಡಲು ಬರುತ್ತದೆ. ಯಾರ ಬಳಿಯೂ ಕೈ ಚಾಚುವ ಪರಿಸ್ಥಿತಿ ಇಲ್ಲ. ಕೂಲಿ ಮಾಡುವವನಿಗೂ ಸ್ವಾಭಿಮಾನ ಇದೆ’ ಎಂದರು.

ಆಂಧ್ರಪ್ರದೇಶದಲ್ಲಿ ವಿಧಾನ ಪರಿಷತ್‌ ವಿಸರ್ಜನೆ ನಿರ್ಣಯದ ಕುರಿತು ಪ್ರತಿಕ್ರಿಯಿಸಿ ‘ಪರಿಷತ್‌ ಹಾಗೂ ರಾಜ್ಯಸಭೆಗೆ ಅದರದ್ದೇ ಆದ ಗೌರವವಿದೆ. ವಿಧಾನಸಭೆಯಲ್ಲಿ ಪಾಸ್‌ ಆದ ಎಷ್ಟೋ ಬಿಲ್‌ಗಳು ಮೇಲ್ಮನೆಯಲ್ಲಿ ಬಿದ್ದು ಹೋದ ಉದಾಹರಣೆಗಳು ಇವೆ. ಬಹುಮತ ಇರುವುದಿಲ್ಲ ಎನ್ನುವ ಕಾರಣಕ್ಕೆ ಪರಿಷತ್‌ ಅನ್ನು ವಿಸರ್ಜಿಸುವ ತೀರ್ಮಾನ ಸರಿಯಲ್ಲ’ ಎಂದರು.

ADVERTISEMENT

‘ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ 36 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಕಳೆದ ಮೂರು ಅವಧಿಯಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೇನೆ. ನನ್ನ ಅನುದಾನವನ್ನು ಶೇ 99ರಷ್ಟು ಬಳಕೆ ಮಾಡಿಕೊಂಡಿದ್ದು, ಶಾಲೆ–ಕಾಲೇಜುಗಳಲ್ಲಿ ಶೌಚಾಲಯ, ಕುಡಿಯುವ ನೀರು, ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ. ಎಲ್ಲಿಯೂ ಶಿಕ್ಷಣದಲ್ಲಿ ರಾಜಕಾರಣ ಬೆರೆಸಿಲ್ಲ. ಸದ್ಯ ಕ್ಷೇತ್ರದಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕ ವರ್ಗದ ಬೆಂಬಲ ಕೋರುತ್ತಿದ್ದು, ಎಲ್ಲರೂ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ಬಾರಿಯೂ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಯೋಗಕ್ಕೆ ದೂರು
‘ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ 38 ಸಾವಿರ ಮತದಾರರು ಇದ್ದರು. ಅಧಿಕಾರಿಗಳ ಎಡವಟ್ಟಿನಿಂದ ಈ ಬಾರಿ ಕೇವಲ 18 ಸಾವಿರ ಮತದಾರರ ನೋಂದಣಿ ಆಗಿದೆ. ಮತದಾರರ ನೋಂದಣಿಗೆ ಪದವಿ ಪ್ರಮಾಣಪತ್ರ, ಅಂಕ ಪಟ್ಟಿ ಕೇಳಲಾಗುತ್ತಿದೆ. ಇದನ್ನು ಸರಿಪಡಿಸಿ ಮತ್ತೆ ನೋಂದಣಿಗೆ ಅವಕಾಶ ನೀಡುವಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ’ ಎಂದು ಪುಟ್ಟಣ್ಣ ತಿಳಿಸಿದರು.

*
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಾನೇ ಬಿಜೆಪಿ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಘೋಷಣೆ ಮಾಡಿದ್ದಾರೆ. ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದೇನೆ.
-ಪುಟ್ಟಣ್ಣ,ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.