ಮಾಗಡಿ: ತಾಲ್ಲೂಕಿನಲ್ಲಿ ಮುಂಗಾರು ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
ತಾಲ್ಲೂಕಿನಲ್ಲಿ ಈಗಾಗಲೇ ಕೆಲವೆಡೆ ರೈತರು ರಾಗಿ ಬಿತ್ತನೆ ಮಾಡಿದ್ದಾರೆ. ಇನ್ನೂ ಕೆಲವರು ಬಿತ್ತನೆಗಾಗಿ ಭೂಮಿಯನ್ನು ಹದ ಮಾಡಿಕೊಂಡಿದ್ದು, ಮಳೆಗಾಗಿ ಕಾಯುತ್ತಿದ್ದು, ಜಿಟಿ ಜಿಟಿ ಮಳೆಯಿಂದ ಬಿತ್ತನೆ ಕಾರ್ಯಕ್ಕೆ ಕೊಂಚ ಬಿಡುವು ಸಿಕ್ಕಿದೆ. ಈಗ ಉತ್ತಮ ಮಳೆಯಾದರೆ ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ. ಈ ಭಾರೀ ರೈತರು ರಾಗಿ ಬೆಳೆವ ನಿರೀಕ್ಷೆಯಲ್ಲಿದ್ದಾರೆ.
ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಒಟ್ಟು 32,908 ಹೆಕ್ಟೇರ್ ಭೂ ಪ್ರದೇಶದಲ್ಲಿ 837 ಹೆಕ್ಟೇರ್ ಬಿತ್ತನೆಯಾಗಿದೆ. 410 ಹೆಕ್ಟೇರ್ ರಾಗಿ, 25 ಹೆಕ್ಟೇರ್ ತೊಗರಿ, 77 ಹೆಕ್ಟೇರ್ ಅಲಸಂದೆ, 145 ಹೆಕ್ಟೇರ್ ಅವರೆ ಬಿತ್ತನೆಯಾಗಿದೆ.
ಜನವರಿಯಿಂದ ಜುಲೈವರೆಗೆ 419 ಮಿ.ಮೀ ಮಳೆಯಾಗಿದೆ. ರೈತರಿಗೆ ಅಗತ್ಯ ಬಿತ್ತನೆ ಬೀಜ ಪೂರೈಕೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದೆ. ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ವಿಜಯ ಶವಣೂರು ತಿಳಿಸಿದ್ದಾರೆ.
ಮುಂಗಾರು ಕ್ಷಿಣಿಸಿದ ಕಾರಣ ರೈತರು ತೊಗರಿ ಬಿತ್ತನೆಗೆ ಹಿಂದೇಟು ಹಾಕಿದ್ದಾರೆ. ಅಲಸಂದೆ ಬಿತ್ತನೆಗೆ ಬೀಜ ಖರೀದಿ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಜೂನ್ ತಿಂಗಳಲ್ಲಿ ಮಳೆ ಬೀಳದ ಕಾರಣ ಕನಿಷ್ಠ ಬಿತ್ತನೆಯಾಗಿದೆ.
ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಜೊತೆಗೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ನೇಗಿಲು, ಕೃಷಿ ಚಟುವಟಿಕೆಗೆ ಪೂರಕ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ. ಅಗತ್ಯ ರಸಗೊಬ್ಬರ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ 28.885 ಹೆಕ್ಟೇರ್ ರಾಗಿ ಬಿತ್ತನೆ ಗುರಿಯಿದೆ. ಕಸಬಾ, ಮಾಡಬಾಳ್, ಕುದೂರು, ತಿಪ್ಪಸಂದ್ರ, ಸೋಲೂರು ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ತಮ್ಮ ಭೂ ದಾಖಲೆ ಸಲ್ಲಿಸಿ ಬಿತ್ತನೆ ಬೀಜ ಪಡೆಯಬಹುದು ಎಂದು ತಿಳಿಸಿದ್ದಾರೆ.
ಶೀಘ್ರ ಕೃಷಿ ಅಭಿಯಾನ
ಶೀಘ್ರ ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಕುದೂರು ಹೋಬಳಿಯಿಂದ ಅಭಿಯಾನ ಆರಂಭವಾಗಲಿದ್ದು ಎಲ್ಲಾ ಹೋಬಳಿ ಕೇಂದ್ರದಲ್ಲೂ ಅಭಿಯಾನ ನಡೆಯಲಿದೆ. ಈ ಮೂಲಕ ರೈತರಿಗೆ ಕೃಷಿ ಚಟುವಟಿಕೆಗಳ ಸಮಗ್ರ ಮಾಹಿತಿ ಹಾಗೂ ಕೀಟನಾಶಕ ಸಿಂಪಡನೆ ಕಳೆ ತೆಗೆಯುವುದು ಯಂತ್ರೋಪಕರಣ ಪ್ರದರ್ಶನ ರೈತರೊಂದಿಗೆ ಸಂವಾದ ಹಾಗೂ ತರಬೇತಿ ನೀಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕಿ ವಿಜಯ ಶವಣೂರು ತಿಳಿಸಿದ್ದಾರೆ.
ರಿಯಾಯಿತಿ ದರದಲ್ಲಿ ಯೂರಿಯಾ ಮಾರಾಟ
ಮಾಗಡಿ ಟಿಎಪಿಸಿಎಂಎಸ್ ವತಿಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೂರಿಯಾ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ರೈತರಿಗೆ ಕೊರತೆ ಬರದಂತೆ 50 ಟನ್ ಯೂರಿಯಾ ತರಿಸಲಾಗಿದ್ದು ಇನ್ನು 100 ಟನ್ ಯೂರಿಯಾ ತರಿಸಲಾಗುತ್ತದೆ ಎಂದು ಮಾಗಡಿ ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.