ADVERTISEMENT

14 ತಿಂಗಳಲ್ಲಿ 70 ಸಾವಿರ ಕಿ.ಮೀ. ಕ್ಷೇತ್ರ ಸಂಚಾರ: ಸಂಸದ ಸಿ.ಎನ್. ಮಂಜುನಾಥ್

ತಾಲ್ಲೂಕಿನ ವಿವಿಧೆಡೆ ಸಂಸದ ಡಾ. ಸಿ.ಎನ್. ಮಂಜುನಾಥ್ ಜನಸಂಪರ್ಕ ಸಭೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 2:21 IST
Last Updated 9 ಜುಲೈ 2025, 2:21 IST
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ವಿವಿಧೆಡೆ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಮಂಗಳವಾರ ಜನಸಂಪರ್ಕ ಸಭೆ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ವಿವಿಧೆಡೆ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಮಂಗಳವಾರ ಜನಸಂಪರ್ಕ ಸಭೆ ನಡೆಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು   

ರಾಮನಗರ: ‘ಸಂಸದನಾಗಿ ಆಯ್ಕೆಯಾದ ಕಳೆದ 14 ತಿಂಗಳಲ್ಲಿ ಕ್ಷೇತ್ರದಾದ್ಯಂತ ಸುಮಾರು 70 ಸಾವಿರ ಕಿ.ಮೀ. ಸಂಚಾರ ಮಾಡಿದ್ದೇನೆ. ಕ್ಷೇತ್ರದ ವಿವಿಧ ಭಾಗಗಳಿಗೆ ಭೇಟಿ, ಜನಸಂಪರ್ಕ ಸಭೆ, ಅಹವಾಲು ಸ್ವೀಕಾರ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.

ತಾಲ್ಲೂಕಿನ ಅವ್ವೇರಹಳ್ಳಿ ಗೇಟ್, ಕೈಲಾಂಚ ಗೇಟ್, ಗುನ್ನೂರಿನ ಮೊರಾರ್ಜಿ ಶಾಲೆ ಅಂಬೇಡ್ಕರ್ ಶಾಲೆ ಬನ್ನಿಕುಪ್ಪೆ ಗ್ರಾಮ ಸೇರಿದಂತೆ ವಿವಿಧೆಡೆ ಮಂಗಳವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದ ಋಣಭಾರವನ್ನು ತೀರಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪರವಾದ ಕೆಲಸಗಳನ್ನು ಮಾಡುತ್ತಿದ್ದೇನೆ’ ಎಂದರು.

‘ಏನೇ ಕೆಲಸ ಮಾಡಿದರೂ ಟೀಕಿಸುವವರ ಮನಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಅಭಿವೃದ್ಧಿ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಶಾಸಕರಾದಿಯಾಗಿ ಯಾರೇ ಕಸಲ ಮಾಡಿದರೂ ಅದಕ್ಕೆ ಸಹಕರಿಸುವೆ. ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಅಭಿವೃದ್ಧಿ ಕೆಲಸಗಳಾಗಬೇಕು ಎಂಬುದಷ್ಟೇ ನನ್ನ ಆದ್ಯತೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಹಾರೋಹಳ್ಳಿಯಲ್ಲಿ ರಾಗಿ ಖರೀದಿ ಕೇಂದ್ರ ಹಾಗೂ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹಲವಾರು ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತಿದ್ದೇವೆ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ಪ್ರಧಾನ ಮಂತ್ರಿ ಫಸಲ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕಿಸಾನ್ ಕ್ರೆಡಿಟ್ ಕಾರ್ಡ್, ಮುದ್ರಾ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮೂಲಕ ಜನಪರ ಕೆಲಸ ಮಾಡುತ್ತಿದೆ. ಇಂದು ಮುದ್ರಾ ಯೋಜನೆ ಅಡಿ ಸರಿಸುಮಾರು 51ಕೋಟಿ ಜನರಿಗೆ 32ಲಕ್ಷ ಕೋಟಿ ವಿತರಿಸಲಾಗಿದೆ ಎಂದರು.

‘ರಾಮನಗರ, ಚನ್ನಪಟ್ಟಣ, ಬಿಡದಿ ರೈಲ್ವೆ ನಿಲ್ದಾಣಗಳು ಉನ್ನತಿಕರಣವಾಗುತ್ತಿದೆ. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಎಕೋ ಯಂತ್ರ ಒದಗಿಸುವ ಜೊತೆಗೆ ಟೆಕ್ನಿಷಿಯನ್ ನೇಮಕಕ್ಕೆ ಕ್ರಮ ಕೈಗೊಂಡಿದ್ದೇನೆ. ಬೆನ್ನಿನ ಮೂಳೆ ಆಪರೇಷನ್ ಮಾಡುವ ಸುಮಾರು ₹20 ಲಕ್ಷ ವೆಚ್ಚದ ಉಪಕರಣಗಳನ್ನು ನೀಡಲಾಗಿದೆ. ಆನೇಕಲ್, ಮಾಗಡಿ, ಕನಕಪುರ, ಚನ್ನಪಟ್ಟಣ, ಕುಣಿಗಲ್ ಸೇರಿದಂತೆ ಆರು ತಾಲ್ಲೂಕುಗಳ ಆಸ್ಪತ್ರೆಗಳಿಗೆ ಹೃದಯ ಎಕೊ ಯಂತ್ರ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.

ಅವ್ವೇರಹಳ್ಳಿ ಕೆಪಿಎಸ್ ಶಾಲೆ, ಗುನ್ನೂರಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿದ ಡಾ. ಮಂಜುನಾಥ್, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆ ಸಂವಾದ ನಡೆಸಿದರು. ವಡ್ಡರಹಳ್ಳಿಯಲ್ಲಿ ನಡೆಯುತ್ತಿದ್ದ ಗ್ರಾಮದೇವರ ಹಬ್ಬದಲ್ಲಿ ಪಾಲ್ಗೊಂಡು, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ತಾಲ್ಲೂಕು ಅಧ್ಯಕ್ಷ ಪಿ.ಎಸ್. ಜಗದೀಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಂದೀಶ್‌ಗೌಡ, ಮುಖಂಡರಾದ ಎಚ್.ಸಿ. ರಾಜಣ್ಣ, ಡಿ. ಗಿರಿಗೌಡ, ದೊರೆಸ್ವಾಮಿ, ಜಯಣ್ಣ, ಬಿ. ಉಮೇಶ್, ಗುನ್ನೂರು ದೇವರಾಜು, ಕೈಲಾಂಚ ಪಾಂಡುರಂಗ, ಗೋಪಾಲನಾಯ್ಕ, ಪದ್ಮನಾಭ್, ಕಾಳುನಾಯ್ಕ, ತಮ್ಮಣ್ಣ, ವೆಂಕಟೇಶ್ ಹಾಗೂ ಇತರರು ಇದ್ದರು.

ತಂಗುದಾಣ ನೀರಿನ ಘಟಕ ನಿರ್ಮಾಣ

‘ಸಂಸದನಾದ ಬಳಿಕ ಜಿಲ್ಲಾ ಪಂಚಾಯಿತಿ ಭವನದಲ್ಲಿರುವ ಕಚೇರಿಯಲ್ಲಿ ಪ್ರತಿ ಮಂಗಳವಾರ ಸಾರ್ವಜನಿಕರ ಅಹವಾಲು ಆಲಿಸಿ ಸ್ಪಂದಿಸುತ್ತಿರುವೆ. ಬೆಂಗಳೂರಿನಲ್ಲಿರುವ ಮನೆಯಲ್ಲೂ ಕಚೇರಿ ತೆರೆದು ಜನರ ಸಮಸ್ಯೆಗಳನ್ನು ಆಲಿಸುತ್ತಿರುವೆ. ಇದುವರೆಗೆ 45ಕ್ಕೂ ಹೆಚ್ಚು ಬಸ್ ತಂಗುದಾಣ 50ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ’ ಎಂದು ಡಾ. ಮಂಜುನಾಥ್ ತಿಳಿಸಿದರು.

‘ನೆನೆಗುದಿಗೆ ಬಿದ್ದಿದ್ದ ಸ್ಯಾಟಲೈಟ್ ವರ್ತುಲ ರಸ್ತೆ ಯೋಜನೆಗೆ ಹನ್ನೊಂದು ವರ್ಷಗಳ ಬಳಿಕ ಚಾಲನೆ ಸಿಕ್ಕಿದೆ. ಇದಕ್ಕಾಗಿ ನಾನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಭೇಟಿ ಮಾಡಿದ್ದೆವು. ಭೂ ಸ್ವಾಧೀನ ಪರಿಹಾರದಲ್ಲಾಗಿದ್ದ ತೊಡಕು ನಿವಾರಿಸಿದೆವು. ಹೆಚ್ಚಿನ ಪರಿಹಾರ ನೀಡಬೇಕೆಂಬ ನಮ್ಮ ಬೇಡಿಕೆಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಂದಿಸಿದ್ದಾರೆ’ ಎಂದರು.

‘ಬದಲಾದ ಜೀವನ ಶೈಲಿ; ಹೆಚ್ಚಿದ ಹೃದಯಾಘಾತ’ ‘ಬದಲಾದ ಜೀವನ ಶೈಲಿಯಿಂದ ಹೃದಯಾಘಾತದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮಾಧ್ಯಮಗಳ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದ ಸಾವುಗಳು ಹೆಚ್ಚು ಗಮನ ಸಳೆಯುತ್ತಿವೆ. 2013ರಿಂದ 2018ರವರೆಗ ನಾನು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಈ ಬಗ್ಗೆ ಅಧ್ಯಯನ ನಡೆಸಿದ್ದೆ. ಈ ಅವಧಿಯಲ್ಲಿ ಚಿಕ್ಕ ವಯಸ್ಸಿನ 5 ಸಾವಿರ ರೋಗಿಗಳು ಹೃದ್ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರು. ವರ್ಷದಿಂದ ವರ್ಷಕ್ಕೆ ಹೃದಯ ಬೇನೆಗೆ ಒಳಗಾಗುವರ ಪ್ರಮಾಣ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಹೃದಯಾಘಾತದ ಪ್ರಮಾಣ 1960ರಲ್ಲಿ ಶೇ 2ರಷ್ಟು ಇದ್ದದ್ದು ಇದೀಗ ಶೇ 6 ದಾಟಿದೆ. ಅಲ್ಲದೆ ರಕ್ತದೊತ್ತಡ ಮದುಮೇಹ ಸೇರಿದಂತೆ ಹಲವು ರೋಗಗಳು ಜನರಲ್ಲಿ ಹೆಚ್ಚುತ್ತಿವೆ. ಒತ್ತಡದ ಜೀವನ ಮದ್ಯಪಾನ ಧೂಮಪಾನ ಆರೋಗ್ಯದ ಕುರಿತು ಮುಂಜಾಗ್ರತೆ ಇಲ್ಲದಿರುವುದು ಸಹ ದಿಢೀರ್ ಸಾವಿಗೆ ಕಾರಣ’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.

ಅಧಿಕಾರಿಗಳ ಗೈರಿಗೆ ಬೇಸರ ಸಂಸದ ಡಾ. ಮಂಜುನಾಥ್ ಅವರು ವಿವಿಧೆಡೆ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿ ಅಭಿವೃದ್ಧಿ ಅಧಿಕಾರಿಗಳನ್ನು ಬಿಟ್ಟರೆ ಬೇರೆ ಇಲಾಖೆಗಳ ತಾಲ್ಲೂಕು ಮಟ್ಟದ ಯಾವ ಅಧಿಕಾರಿಗಳು ಭಾಗವಹಿಸಿರಲಿಲ್ಲ. ಸಭೆ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಗೈರಾಗುವ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.