ADVERTISEMENT

ಮುಳಬಾಗಿಲು: ಗದ್ದೆ ಬಯಲಿನಲ್ಲಿ ಬೆಳೆದು ಜೊಂಬು ಹುಲ್ಲು

ಕೃಷಿಗೆ ಯೋಗ್ಯವಿಲ್ಲದಂತಾದ ಜಮೀನು, ರಾಜ ಕಾಲುವೆ ದುರಸ್ತಿಗೆ ರೈತರ ಮನವಿ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 19 ಮೇ 2025, 7:07 IST
Last Updated 19 ಮೇ 2025, 7:07 IST
ಮುಳಬಾಗಿಲು ತಾಲ್ಲೂಕಿನ ನಂಗಲಿ ಕೆರೆ ಪ್ರದೇಶದಲ್ಲಿ ಬೆಳೆದಿರುವ ಜೊಂಬು ಹುಲ್ಲು ಹಾಗೂ ಜಾಲಿ ಮರಗಳು
ಮುಳಬಾಗಿಲು ತಾಲ್ಲೂಕಿನ ನಂಗಲಿ ಕೆರೆ ಪ್ರದೇಶದಲ್ಲಿ ಬೆಳೆದಿರುವ ಜೊಂಬು ಹುಲ್ಲು ಹಾಗೂ ಜಾಲಿ ಮರಗಳು    

ಮುಳಬಾಗಿಲು: ಕೆರೆ ಕೆಳಗಿನ ಗದ್ದೆ ಬಯಲು ಪ್ರದೇಶದಲ್ಲಿ ಜೊಂಬು ಹುಲ್ಲು ಬೆಳೆದು ಕೃಷಿಗೆ ಯೋಗ್ಯವಿಲ್ಲದಂತಾಗಿವೆ. ಕೆಲವು ಕಡೆ ಮುಳ್ಳು ಗಿಡಗಳು ಬೆಳೆದು ಕೃಷಿ ಚಟುವಟಿಕೆಗೆ ಹಿನ್ನಡೆ ಆಗಿದೆ. ಕೆರೆಗಳ ಕೆಳಗಿನ ರಾಜ ಕಾಲುವೆಗಳನ್ನು ದುರಸ್ತಿಪಡಿಸಲು ರೈತರ ಮನವಿ ಮಾಡಿದ್ದಾರೆ.

ಬರಗಾಲದ ತಾಲ್ಲೂಕು ಎಂಬ ಹಣೆ ಪಟ್ಟಿ ಹೊತ್ತಿರುವ ತಾಲ್ಲೂಕಿನಲ್ಲಿ ಕೆರೆಗಳು ತುಂಬಿ ಸುಮಾರು 17 ವರ್ಷಗಳೇ ಕಳೆದಿತ್ತು. ಆದರೆ, ಐದು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದಿದ್ದವು. ಆದರೆ, ಸುಮಾರು ವರ್ಷಗಳ ನಂತರ ಕೆರೆಗಳು ತುಂಬಿದ ಪರಿಣಾಮ ಪಾತಾಳಕ್ಕೆ ಕುಸಿದಿದ್ದ ಅಂತರ್ಜಲ ಹೆಚ್ಚಿಸುವ ಕಾರಣದಿಂದ ಕೆರೆಗಳ ತೂಬುಗಳನ್ನು ತೆರೆಯದೆ ಮುಚ್ಚಲಾಗಿತ್ತು. ಹೀಗಾಗಿಯೇ ಕೆಲವು ಕೆರೆಗಳಲ್ಲಿ ನೀರು ಅಲ್ಪ ಪ್ರಮಾಣದಲ್ಲಿ ಉಳಿದಿದೆ.

ಕೆರೆಗೆ ಹೊಂದಿಕೊಂಡಂತೆ ಇರುವ ಜಮೀನುಗಳ ಜೌಗು ಪ್ರದೇಶದಲ್ಲಿ ಜೊಂಬು ಹುಲ್ಲು ಬೆಳೆದು ಕೃಷಿಗೆ ಹಿನ್ನಡೆ ಆಗಿದೆ. ಇದಲ್ಲದೆ ಜಾಲಿ ಗಿಡಗಳು ಬೆಳೆದು ಕೆರೆ ಕಟ್ಟೆಗಳ ಕೆಳಗಿನ ಜಮೀನುಗಳು ವ್ಯರ್ಥವಾಗುತ್ತಿವೆ. ಸ್ಥಳೀಯ ಪಂಚಾಯಿತಿಗಳು ಕೆರೆ– ಕಟ್ಟೆಗಳ ಕೆಳಗಿನ ಕಾಲುವೆಗಳನ್ನು ದುರಸ್ತಿಪಡಿಸುವ ಅಥವಾ ನೂತನ ಕಾಲುವೆಗಳನ್ನು ನಿರ್ಮಿಸುವ ಕೆಲಸ ಮಾಡಬೇಕಾಗಿದೆ ಎನ್ನುತ್ತಾರೆ ರೈತರು.

ADVERTISEMENT

ತಾಲ್ಲೂಕಿನಲ್ಲಿ ಒಟ್ಟು 586 ಕೆರೆಗಳಿವೆ. ತೇವಾಂಶ ಕಾರಣದಿಂದಾಗಿ ಜೊಂಬು ಹುಲ್ಲು ಹುಲುಸಾಗಿ ಬೆಳೆದು ಪೊದೆ ರೂಪ ಪಡೆದಿದೆ. ಜಾಲಿ ಗಿಡಗಳು ದೊಡ್ಡ ಮರಗಳಂತೆ ಬೆಳೆದು ಮುಳ್ಳುಗಳನ್ನು ಉದುರಿಸುತ್ತಿವೆ. ಇನ್ನು ಕೆರೆ– ಕಟ್ಟೆಗಳ‌ ಅಡಿಯಿಂದ ಜಿನುಗುವ ನೀರಿನಿಂದಾಗಿ ಜಮೀನುಗಳಲ್ಲಿ ಕಾಲಿಡಲೂ ಆಗದಂತೆ ಕೆಸರುಮಯವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

ಅತಿಯಾದ ತೇವಾಂಶ ಹಾಗೂ ಅಲ್ಪಸ್ವಲ್ಪ ಜಿನುಗುವ ನೀರಿಗೆ ಕೆಲವು ರೈತರು ಭತ್ತ ನಾಟಿ ಮಾಡಿದರೂ ಕೆಲವು ಕಡೆ ಅತಿಯಾದ ನೀರಿನಿಂದಾಗಿ ಭತ್ತದ ಬೆಳೆಯಲ್ಲಿ ಕಳೆ ಕೀಳಲು ಸಾಧ್ಯವಾಗದೆ ಭತ್ತ ಕೃಷಿಯೂ ಹಾಳಾಗುತ್ತಿದೆ. ಒಂದು ಕಡೆ ಅತಿಯಾದ ತೇವಾಂಶ ರೈತರನ್ನು ಕಾಡಿದರೆ ಮತ್ತೊಂದಡೆ ಕೊಳವೆ ಬಾವಿಗಳಿಂದ ಸಿಗುವ ನೀರು ಸಾಕಾಗದೆ ರೈತರ ಅಪಾರ ನಷ್ಟ ಅನುಭವಿಸುವಂತಾಗಿದೆ.

ತಾಲ್ಲೂಕಿನ ನಂಗಲಿ ಕೆರೆ, ಮುಷ್ಟೂರು ಕೆರೆ, ನಗವಾರ, ಮುಳಬಾಗಿಲು ನಗರ, ವಿ.ಗುಟ್ಟಹಳ್ಳಿ ಮತ್ತಿತರರ ಕೆರೆ– ಕಟ್ಟೆಗಳ ಕೆಳಗಿನ ಭೂಮಿ ಜೊಂಬು ಹಾಗೂ ಪೊದೆಗಳಂತಹ ಗಿಡಗಳಿಂದ ಆವೃತವಾಗಿದ್ದು ರೈತರು ನೀರಿದ್ದೂ ಪರದಾಡುವಂತಾಗಿದೆ.

ತಾಲ್ಲೂಕಿನಲ್ಲಿಯೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಂಗಲಿ ಕೆರೆ ಸುಮಾರು ಐದು ವರ್ಷಗಳ ಹಿಂದೆ ಸುರಿದ ಮಳೆಗೆ ಎರಡು ಬಾರಿ ಕೋಡಿ ಹರಿದಿತ್ತು. ರೈತರು ಖುಷಿ ಪಟ್ಟರೂ ನಂಗಲಿ ಹಾಗೂ ಕೆರಸಿಮಂಗಲ ಮಧ್ಯೆ ಇರುವ ಕಟ್ಟೆ ಕೆಳಗಿನ ಭೂಮಿ ಕೃಷಿಗೆ ಯೋಗ್ಯವಲ್ಲದೆ ಜೊಂಬು ಹಾಗೂ ಜಾಲಿ ಮರಗಳಿಂದ ಕೂಡಿದೆ. ಕೆರೆಯಲ್ಲಿ ನೀರಿದೆ ಎನ್ನುವ ಖುಷಿಗಿಂತಲೂ ತಮ್ಮ ಜಮೀನು ನಾಶವಾಗುತ್ತಿದೆ ಎಂಬ ಕೊರಗೆ ಹೆಚ್ಚಾಗಿ ರೈತರನ್ನು ಕಾಡುತ್ತಿದೆ.

ನಂಗಲಿ ಹಾಗೂ ಕೆರಸಿಮಂಗಲ ಗ್ರಾಮದವರೆಗೂ ಇರುವ ಕೆರೆ–ಕಟ್ಟೆ ಕೆಳಗಿನ ಅಥವಾ ಕಟ್ಟೆಗೆ ಹೊಂದಿಕೊಂಡಂತೆ ಇರುವ ಸುಮಾರು 50-60 ಎಕರೆ ಜಮೀನುಗಳಲ್ಲಿ ಕತ್ತರಿಸಿದಷ್ಟೂ ಜೊಂಬು ಬೆಳೆಯುತ್ತಿದ್ದರೆ ಜಾಲಿ ಮರಗಳು ಅತಿಯಾದ ತೇವಾಂಶ ಹಾಗೂ ನೀರಿನಿಂದಾಗಿ ಒಣಗಿ ನಿಂತಿವೆ.

ಜಾಲಿಮರಗಳು ಒಣಗಿ ನಿಂತಿರುವುದು

ಕಾಲುವೆಗಳ ದುರಸ್ತಿಪಡಿಸಿ

ತಾಲ್ಲೂಕಿನಲ್ಲಿ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಂಗಲಿ ಕೆರೆ ತುಂಬಿ ಕೋಡಿ ಹರಿದಿದ್ದರಿಂದ ಖುಷಿಯಾದರೂ ಸುಮಾರು ಐದು ವರ್ಷಗಳಿಂದ ಕಟ್ಟೆ ಕೆಳಗಿನ ಮೂರು ಎಕರೆ ಭೂಮಿ ಕೊಯ್ದಷ್ಟು ಬೆಳೆಯುವ ಜೊಂಬು ಹಾಗೂ ಜಾಲಿ ಗಿಡಗಳಿಂದ ಆವೃತವಾಗಿದೆ. ಪಂಚಾಯಿತಿ ವತಿಯಿಂದ ಕಟ್ಟೆಗಳ ಕೆಳಗಿನ ಕಾಲುವೆಗಳನ್ನು ದುರಸ್ತಿಪಡಿಸಿ ನೀರು ಏಟಿಗಳ ಮೂಲಕ ಸರಾಗವಾಗಿ ಹರಿಯುವಂತೆ ಮಾಡಬೇಕು. ಜೌಗು ಪ್ರದೇಶಕ್ಕೆ ಒಳಗಾಗುವ ಭೂಮಿ ಮಟ್ಟ ಹೆಚ್ಚಿಸಬೇಕಾಗಿದೆ. ರಾಮಯ್ಯ ನಂಗಲಿ ರೈತ ಒತ್ತುವರಿ ತೆರವು ಕಾರ್ಯಾಚರಣೆ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಂದೆ ಹಂತ–ಹಂತವಾಗಿ ಕೆರೆಗಳ ರಾಜಕಾಲುವೆಗಳ ಒತ್ತುವರಿ ತೆರವು ದುರಸ್ತಿ ಹಾಗೂ ನೂತನ ಕಾಲುವೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಆಗ ಸಹಜವಾಗಿಯೇ ಸಮಸ್ಯೆ ನಿವಾರಣೆಯಾಗಲಿದೆ. ವಿ.ಗೀತಾ ತಹಶಿಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.