ADVERTISEMENT

ಕನಕಪುರ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 7:10 IST
Last Updated 9 ಜುಲೈ 2023, 7:10 IST

ಕನಕಪುರ: ತಾಲ್ಲೂಕಿನ ಹಲಸೂರು ಗ್ರಾಮದ ತೋಟದ ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ, ಆಕೆಯ ಚಿನ್ನದ ಮಾಂಗಲ್ಯ ಸರ ದೋಚಿದ್ದ ಅಪರಾಧಿ ಬೋರಮ್ಮನದೊಡ್ಡಿ ಗ್ರಾಮದ ಚಂದ್ರಕುಮಾರ್‌ಗೆ (26) ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹75 ಸಾವಿರ ದಂಡ ವಿಧಿಸಿದೆ.

ಕದ್ದ ಸರದ ಮಾರಾಟಕ್ಕೆ ಸಹಕರಿಸಿದ ಚಂದ್ರಕುಮಾರ್ ಸಹೋದರ ಸುಂದರ್‌ ಕುಮಾರ್‌ಗೆ (28) ಮೂರು ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

2017ರ ಸೆಪ್ಟೆಂಬರ್‌ 26ರಂದು ಸಾತನೂರು ಹೋಬಳಿ ಹಲಸೂರು ಗ್ರಾಮದ ಪುಟ್ಟಸ್ವಾಮಿಗೌಡರ ಪತ್ನಿ ಕೆಂಪಮ್ಮ ಅವರು ತಮ್ಮ ತೋಟದ ಮನೆಯಲ್ಲಿದ್ದಾಗ ಅಲ್ಲಿಗೆ ಹೋಗಿದ್ದ ಅಪರಾಧಿ ಮಹಿಳೆಯನ್ನು ಕೊಲೆಮಾಡಿ, ಆಕೆಯ ಕುತ್ತಿಗೆಯಲ್ಲಿದ್ದ 80 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದ.

ADVERTISEMENT

ಮನೆಗೆ ಬಂದ ಚಂದ್ರಕುಮಾರ್ ಸಹೋದರ ಸುಂದರ್‌ಕುಮಾರ್‌ಗೆ ಚಿನ್ನದ ಸರ ನೀಡಿ ಅಡವಿಟ್ಟು ಹಣ ತರುವಂತೆ ಕಳಿಸಿದ್ದನು. ಸುಂದರ್‌ಕುಮಾರ್‌ ಚಿನ್ನದ ಸರವನ್ನು ಎರಡು ತುಂಡುಗಳಾಗಿಸಿ ಅಡವಿಟ್ಟು ತಂದ ಹಣವನ್ನು ಇಬ್ಬರು ಹಂಚಿಕೊಂಡಿದ್ದರು.

ಕೆಂಪಮ್ಮ ಅವರ ಪುತ್ರ ಶ್ರೀನಿವಾಸ್‌ ಸಾತನೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅಂದಿನ ಸಿಪಿಐ ಮಲ್ಲೇಶ್‌ ಮೂರು ತಂಡ ರಚಿಸಿ ತನಿಖೆ ಕೈಗೊಂಡಿದ್ದರು.

ಆರೋಪಿ ಚಂದ್ರಕುಮಾರ್‌ ಬೋರಮ್ಮನದೊಡ್ಡಿ ಗ್ರಾಮದ ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು 2017ರ ಅಕ್ಟೋಬರ್‌ 23ರಂದು ದಾಳಿ ನಡೆಸಿದ್ದರು. ಈ ವೇಳೆ ಆರೋಪಿಯು ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಆಗ ಸಿಪಿಐ ಮಲ್ಲೇಶ್‌ ಆರೋಪಿಯ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ವಶಕ್ಕೆ ಪಡೆದಿದ್ದರು.

ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿ ಊರಿಗೆ ಬಂದಾಗ ಹಣದ ಕೊರತೆಯಿಂದಾಗಿ ಕಳ್ಳತನಕ್ಕೆ ಯೋಜಿಸಿದ್ದ. ತೋಟದ ಮನೆಯಲ್ಲಿ ಕೆಂಪಮ್ಮ ಒಂಟಿಯಾಗಿರುವುದನ್ನು ಗಮನಿಸಿ ದರೋಡೆಗೆ ಹೊಂಚು ಹಾಕಿದ್ದ. ಕೆಂಪಮ್ಮ ತೆಂಗಿನ ಕಾಯಿಯನ್ನು ಮನೆಗೆ ಸಾಗಿಸುತ್ತಿದ್ದು, ಅವರಿಗೆ ಸಹಾಯ ಮಾಡುವ ನೆಪದಲ್ಲಿ ಮನೆಗೆ ಹೋಗಿದ್ದ. ಮನೆಯ ಒಳಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿ ಅವರ ತಲೆಗೆ ಮಚ್ಚಿನಿಂದ ಹೊಡೆದಿದ್ದ. ಕೆಳಗೆ ಬಿದ್ದ ನಂತರವೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ ಸರ ಕದ್ದು ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ.

ನ್ಯಾಯಾಧೀಶ ಎಚ್‌.ಎನ್‌. ಕುಮಾರ್‌ ತೀರ್ಪು ನೀಡಿದ್ದು, ವಕೀಲ ಬಿ.ಇ. ಯೋಗೇಶ್ವರ್‌ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.