ರಾಮನಗರ: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ತಾಲ್ಲೂಕಿನ ಬಿಡದಿ ಬಳಿಯ ಕರಿಯಪ್ಪನದೊಡ್ಡಿಯಲ್ಲಿ ನಡೆದ ಗುಂಡಿನ ದಾಳಿಯ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ರಿಕ್ಕಿ ಅವರ ಅಂಗರಕ್ಷಕರು ಹಾಗೂ ಮನೆ ಕೆಲಸಗಾರರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.
ಇದರ ನಡುವೆಯೇ ಪ್ರಕರಣದ ಎರಡನೇ ಆರೋಪಿಯಾಗಿರುವ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಘಟನೆಗೆ ಐದು ದಿನ ಮುಂಚೆಯೇ ವಿದೇಶಕ್ಕೆ ಹೋಗಿದ್ದಾರೆ. ಘಟನೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ, ರಾಮನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ತನ್ನ ವಕೀಲರ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡನೇ ಆರೋಪಿ ರಾಕೇಶದ ಮಲ್ಲಿ ಮುಂಬೈನಲ್ಲಿರುವ ಮಾಹಿತಿ ಇದ್ದು, ಉಳಿದಂತೆ ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ ಮತ್ತು ವೈದ್ಯನಾಥನ್ ಪೊಲೀಸರು ಕರೆದಾಗ ವಿಚಾರಣೆಗೆ ಬರುವುದಾಗಿ ತಮ್ಮನ್ನು ಸಂಪರ್ಕಿಸಿದ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಯಲ್ಲಿ ಆರೋಪಿಗಳ ಪಾತ್ರದ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಘಟನೆಯ ಹಿಂದೆ ಭೂಗತ ಜಗತ್ತಿನ ಲಿಂಕ್ ಇರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಹಾಗಾಗಿ, ಸಿಸಿಬಿ ಪೊಲೀಸರು ಸಹ ಪ್ರಕರಣ ದಾಖಲಾದ ಬೆನ್ನಲ್ಲೇ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲಾ ಪೊಲೀಸರು ಎಸ್ಪಿ ಶ್ರೀನಿವಾಸ ಗೌಡ ನಿರ್ದೇಶನದಲ್ಲಿ ಎಎಸ್ಪಿಗಳು, ಡಿವೈಎಸ್ಪಿಗಳು ಹಾಗೂ ಇನ್ಸ್‌ಪೆಕ್ಟರ್ ಗಳನ್ನು ಒಳಗೊಂಡ ತಂಡ ಬಹು ಆಯಾಮದಲ್ಲಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.