ADVERTISEMENT

ಒಳ ಮೀಸಲು ವರದಿ ತಿರಸ್ಕರಿಸಲು ಆಗ್ರಹ

ಹೊಲಯ ಸಂಬಂಧಿ ಜಾತಿಗಳಿಗೆ ಅನ್ಯಾಯ ಆರೋಪ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 18:00 IST
Last Updated 14 ಆಗಸ್ಟ್ 2025, 18:00 IST
ಚನ್ನಪಟ್ಟಣದ ತಾಲ್ಲೂಕು ಕಚೇರಿ ಎದುರು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ತಾಲ್ಲೂಕಿನ ಹೊಲಯ ಒಳಮೀಸಲಾತಿ ಹೋರಾಟ ಸಮಿತಿ ಸದಸ್ಯರು ನಂತರ ತಹಶೀಲ್ದಾರ್ ಗೆ ಮನವಿ ಪತ್ರ ನೀಡಿದರು 
ಚನ್ನಪಟ್ಟಣದ ತಾಲ್ಲೂಕು ಕಚೇರಿ ಎದುರು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ತಾಲ್ಲೂಕಿನ ಹೊಲಯ ಒಳಮೀಸಲಾತಿ ಹೋರಾಟ ಸಮಿತಿ ಸದಸ್ಯರು ನಂತರ ತಹಶೀಲ್ದಾರ್ ಗೆ ಮನವಿ ಪತ್ರ ನೀಡಿದರು    

ಚನ್ನಪಟ್ಟಣ: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಒಳ ಮೀಸಲಾತಿ ವರದಿ ಖಂಡಿಸಿ ತಾಲ್ಲೂಕಿನ ಹೊಲಯ ಒಳಮೀಸಲಾತಿ ಹೋರಾಟ ಸಮಿತಿ ಸದಸ್ಯರು ಗುರುವಾರ ನಗರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಾಗಮೋಹನ್ ದಾಸ್ ಆಯೋಗ 2025ನೇ ಆಗಸ್ಟ್ 4ರಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಅವೈಜ್ಞಾನಿಕ, ಅಪೂರ್ಣ ಹಾಗೂ ದುರದ್ದೇಶಪೂರಿತವಾದುದು. ಸರ್ಕಾರದ ನಿಬಂಧನೆ ಉಲ್ಲಂಘನೆ ಹಾಗೂ ಅಧಿಕಾರ ವ್ಯಾಪ್ತಿ ಮೀರಿ ಮಾಡಿರುವ ಶಿಫಾರಸು ಇದಾಗಿದೆ. ಸರ್ಕಾರ ಈ ವರದಿಯನ್ನು ಅಂಗೀಕರಿಸದೆ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ವಿರೋಧಿಯಾಗಿರುವ ಈ ವರದಿಯು ತಮ್ಮ ವ್ಯಾಪ್ತಿ ಮೀರಿ ಮಾಡಿರುವ ಶಿಫಾರಸು ಆಗಿರುವುದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಲಿದೆ. ಹೊಲಯ ಸಂಬಂಧಿತ ಜಾತಿಗಳನ್ನು ವಿವಿಧ ಪ್ರವರ್ಗಯಡಿ ಗುಂಪು ಮಾಡುವ ಮೂಲಕ ರಾಜ್ಯದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಹೊಲಯ, ಛಲವಾದಿ, ಬಲಗೈ ಸಂಬಂಧಿತ ಜಾತಿಗಳಿಗೆ ಘೋರ ಅನ್ಯಾಯ ಮಾಡಲಾಗಿದೆ. ಹೊಲಯ, ಹೊಲಯ ಸಂಬಂಧಿತ ಗುಂಪಿಗೆ ಸೇರಿಸದೆ ಉದ್ದೇಶಪೂರ್ವಕವಾಗಿ ಬೇರೆ ಗುಂಪಿಗೆ ಸೇರಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

ಸರ್ಕಾರ ಈ ವರದಿಯನ್ನು ಕೂಡಲೇ ತಿರಸ್ಕರಿಸಿ ಆಗಿರುವ ಅನ್ಯಾಯ ಸರಿಪಡಿಸಬೇಕು. ಎಲ್ಲ ಸಮುದಾಯಕ್ಕೆ ಸಮಾನವಾದ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಪ್ರತಿಭಟನಾಕಾರರು ತಹಶೀಲ್ದಾರ್ ಬಿ.ಎಸ್.ಗಿರೀಶ್ ಮೂಲಕ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಅಪ್ಪಗೆರೆ ಶ್ರೀನಿವಾಸ್, ಬಿವಿಎಸ್ ಕುಮಾರ್, ಕೋಟೆ ಸಿದ್ದರಾಮಯ್ಯ, ಮತ್ತೀಕೆರೆ ಹನುಮಂತಯ್ಯ, ಮುನಿವೆಂಕಟಪ್ಪ, ಚಕ್ಕಲೂರು ಚೌಡಯ್ಯ, ಕೃಷ್ಣಪ್ಪ, ಲಕ್ಷ್ಮಣ್, ಅಪ್ಪಗೆರೆ ಪ್ರದೀಪ್, ಡಿಎಸ್ಎಸ್ ವೆಂಕಟೇಶ್, ಕೃಷ್ಣಮೂರ್ತಿ, ಪ್ರದೀಪ್ ರಾಂಪುರ, ಪುರುಷೋತ್ತಮ್, ನಾಗರಾಜು, ಸತೀಶ್, ನಾಗರಾಜು, ಶಂಕರ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.