ADVERTISEMENT

ಒಳ ಮೀಸಲಾತಿ ವರದಿ ತಿರಸ್ಕರಿಸಲು ಆಗ್ರಹ

ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ನಿಯೋಗದಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 18:06 IST
Last Updated 14 ಆಗಸ್ಟ್ 2025, 18:06 IST
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ನೀಡಿರುವ ವರದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ಬಲಗೈ ಜಾತಿಗಳ ಒಕ್ಕೂಟದ ನಿಯೋಗವು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ನೀಡಿರುವ ವರದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ಬಲಗೈ ಜಾತಿಗಳ ಒಕ್ಕೂಟದ ನಿಯೋಗವು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು   

ರಾಮನಗರ: ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಆಯೋಗವು ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಅವೈಜ್ಞಾನಿಕ ಹಾಗೂ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ, ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿದೆ.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿ ಮಾಡಿದ ಒಕ್ಕೂಟದ ನಿಯೋಗವು, ವರದಿಗೆ ಸಂಬಂಧಿಸಿದಂತೆ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ವರದಿ ಕುರಿತು ನಡೆದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿತು.

ಮನವಿಯಲ್ಲಿ ಏನಿದೆ?: ಆಯೋಗವು ಗಣತಿದಾರರಿಗೆ ಟ್ಯಾಬ್‌ ನೀಡದ ಕಾರಣ ಆಯೋಗ ಬಿಡುಗಡೆ ಮಾಡಿದ ಮೊಬೈಲ್ ಆ್ಯಪ್‌ ಗಣತಿದಾರರ ಮೊಬೈಲ್‌ನಲ್ಲಿ ಡೌನ್‌ಲೋಡ್ ಆಗಿಲ್ಲ. ಇದರಿಂದಾಗಿ ಲಕ್ಷಾಂತರ ಕುಟುಂಬಗಳು ಸಮೀಕ್ಷೆ ನಂತರ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿದ್ದರಿಂದ ಅದಾಗಲೇ ಸರ್ವೆ ಮಾಡಿದ್ದ ಕುಟುಂಬಗಳ ಮಾಹಿತಿ ರದ್ದಾಗಿದೆ.

ADVERTISEMENT

ಗಣತಿದಾರರಿಗೆ ಗುರುತಿನ ಚೀಟಿ ನೀಡದ ಕಾರಣ, ಗಣತಿದಾರರ ಬದಲು ಕುಟುಂಬದ ಇತರ ಸದಸ್ಯರು ತರಬೇತಿ ಇಲ್ಲದೇ ಗಣತಿ ಕೈಗೊಂಡಿದ್ದಾರೆ. ಇದರಿಂದ ಸಾವಿರಾರು ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯುವಂತಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಬೂತ್‍ಗಳನ್ನು ತೆರೆಯದಿದ್ದರಿಂದ ಅಲ್ಲಿನ ಎಲ್ಲಾ ಕುಟುಂಬಗಳು ಸಮೀಕ್ಷೆಗೆ ಒಳಪಟ್ಟಿಲ್ಲ.

ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಸಮೀಕ್ಷೆ ನಡೆಸದಿದ್ದರೂ, ಸಮೀಕ್ಷೆ ನಡೆಸಲಾಗಿದೆ ಎಂಬ ಸ್ಟಿಕ್ಕರ್‌ಗಳನ್ನು ಮನೆಗಳಿಗೆ ಅಂಟಿಸಲಾಗಿದೆ. ಇದರಿಂದಾಗಿ ಪರಿಶಿಷ್ಟ ಸಮುದಾಯದ ಅಂದಾಜು 1.47 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಯಲ್ಲಿ 1.16 ಕೋಟಿಗೆ ಮಿತಿಗೊಳಿಸಿಕೊಂಡಿರುವ ಆಯೋಗವು, ಕೇವಲ 1.05 ಕೋಟಿ ಜನರನ್ನು ಮಾತ್ರ ಸಮೀಕ್ಷೆ ಮಾಡಿದೆ.

ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂಬುದು ಜಾತಿಗಳ ಗುಂಪೇ ಹೊರತು ಜಾತಿಗಳಲ್ಲ. ಆದರೆ, ಈ ಗುಂಪಿನ ಉಪ ಜಾತಿಗಳ ಮೂಲ ಜಾತಿಗಳನ್ನು ಗುರುತಿಸದೆ ದತ್ತಾಂಶ ಸಂಗ್ರಹಿಸಲಾಗಿದೆ. ಆಯೋಗವು ಇಲ್ಲಿರುವ ಎಡ ಮತ್ತು ಬಲ ಸಮುದಾಯದ ಜನಸಂಖ್ಯೆಯನ್ನು ಗುರುತಿಸುವ ಬದಲು, ಜಾತಿಗಳೇ ಅಲ್ಲದ 4.74 ಜನಸಂಖ್ಯೆಯ ಗುಂಪಿಗೆ ಶೇ 1ರಷ್ಟು ಮೀಸಲಾತಿ ನಿಗದಿಪಡಿಸಿದೆ.

ಶೇ 1ರಷ್ಟು ಮೀಸಲಾತಿ ಹಂಚಿಕೆಯಾಗಿರುವ ಗುಂಪಿನ ಜನ ಬಲಗೈ ಸಮುದಾಯಕ್ಕೆ ಸೇರಿದ್ದಾರೆ. ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಿರುವುದರಿಂದ ಬಲಗೈ ಸಮುದಾಯದ ಒಟ್ಟು ಜನಸಂಖ್ಯೆ ಪ್ರಮಾಣ ಕುಗ್ಗಿದೆ. ಬಲಗೈ ಜನಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಾದಿಗ ಸಮುದಾಯದ ಜನಸಂಖ್ಯೆಗೆ ಬಲಗೈ ಜನಸಂಖ್ಯೆಯನ್ನು ಸೇರಿಸಲಾಗಿದೆ. ಹೀಗಾಗ, ಅವೈಜ್ಞಾನಿಕವಾಗಿರುವ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ನಿಯೋಗದಲ್ಲಿ ಮುಖಂಡರಾದ ರಾಂಪುರ ನಾಗೇಶ್, ಶಿವಕುಮಾರಸ್ವಾಮಿ, ಚಲುವರಾಜು, ವೆಂಕಟೇಶ್, ಸಿ. ಶಿವಣ್ಣ, ಗವಿಯಪ್ಪ, ಕೃಷ್ಣ, ಸುರೇಶ್, ಲೋಕೇಶ್, ಪ್ರಕಾಶ್, ಹರೀಶ್ ಬಾಲು, ವೆಂಕಟೇಶ್, ಸಾಗರ್, ಶ್ರೀನಿವಾಸ್, ವಿನಯ್, ಮಿಲಿಟರಿ ವೆಂಕಟೇಶ್, ಶಿವಶಂಕರ್ ಹಾಗೂ ಇತರರು ಇದ್ದರು.

ಒಕ್ಕೂಟದ ನಿರ್ಣಯಗಳು

* ನ್ಯಾ. ನಾಗಮೋಹನ ದಾಸ್ ವರದಿ ಅವೈಜ್ಞಾನಿಕ ಅಪೂರ್ಣ ದುರುದ್ದೇಶಪೂರಿತವಾಗಿದೆ. ಆಯೋಗ ಮಾಡಿರುವ ಶಿಫಾರಸುಗಳು ಅದರ ಅಧಿಕಾರದ ವ್ಯಾಪ್ತಿ ಮೀರಿರುವುದರಿಂದ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು.

* ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವ ರೀತಿಯಲ್ಲಿರುವ ವರದಿಯನ್ನು ಸರ್ಕಾರ ಅಂಗೀಕರಿಸಿದರೆ ಅದರ ಪರಿಣಾಮವನ್ನು ಸರ್ಕಾರ ಸಮುದಾಯದ ಸಚಿವರು ಹಾಗೂ ಶಾಸಕರು ಎದುರಿಸಬೇಕಾಗುತ್ತದೆ.

* ವರದಿ ಅಂಗೀಕಾರವಾದರೆ ರಾಜ್ಯದಾದ್ಯಂತ ಬಲಗೈ ಸಮುದಾಯದಿಂದ ಉಗ್ರ ಹೋರಾಟ ರೂಪಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.