ADVERTISEMENT

ರಾಮನಗರ: ವಲಸೆ ತಪ್ಪಿಸಲು ‘ದುಡಿಯೋಣ ಬಾ’ ಅಭಿಯಾನ

ಮನರೇಗಾ ಪ್ರಯೋಜನ ಪಡೆಯಲು ಜಿ.ಪಂ. ಸಿಇಒ ಅನ್ಮೋಲ್ ಜೈನ್ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:36 IST
Last Updated 7 ಮೇ 2025, 15:36 IST
ಅನ್ಮೋಲ್ ಜೈನ್, ಸಿಇಒ, ಜಿಲ್ಲಾ ಪಂಚಾಯಿತಿ
ಅನ್ಮೋಲ್ ಜೈನ್, ಸಿಇಒ, ಜಿಲ್ಲಾ ಪಂಚಾಯಿತಿ   

ರಾಮನಗರ: ಗ್ರಾಮೀಣ ಭಾಗದ ಜನರು ನಗರ ಪ್ರದೇಶಗಳಿಗೆ ಕೂಲಿಗಾಗಿ ವಲಸೆ ಹೋಗುವುದನ್ನು ತಪ್ಪಿಸಲು, ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸ್ಥಳೀಯವಾಗಿಯೇ ಗ್ರಾಮೀಣ ಜನರಿಗೆ ನಿರಂತರ ಕೆಲಸ ಒದಗಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಅದಕ್ಕಾಗಿ ಮೇ 1ರಿಂದ ಒಂದು ತಿಂಗಳು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ‘ದುಡಿಯೋಣ ಬಾ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ಅಭಿಯಾನದ ಮೂಲಕ ಅರ್ಹ ಕೂಲಿಕಾರರಿಗೆ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತಿದ್ದು, ನರೇಗಾ ಯೋಜನೆಯಡಿ ಕೂಲಿಕಾರರಿಗೆ 100 ದಿನ ಅಕುಶಲ ಕೆಲಸ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಅಭಿಯಾನವನ್ನು ಈಗಾಗಲೇ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಡೆಸಲಾಗುತ್ತಿದೆ. ಅರ್ಹ ಕೂಲಿಕಾರರರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯಿತಿಗೆ ಕೆಲಸದ ಅರ್ಜಿ ಸಲ್ಲಿಸಿ ಸಾಮೂಹಿಕ ಕೆಲಸ ಪಡೆಯಬೇಕು. ಅಭಿಯಾನದಡಿ ನರೇಗಾ ಯೋಜನೆಯಿಂದ ಹೊರಗಿರುವ ಅರ್ಹ ಕುಟುಂಬ ಮತ್ತು ದುರ್ಬಲ ವರ್ಗಗಳ ಕುಟುಂಬಗಳನ್ನು ಗುರುತಿಸಲಾಗುವುದು. ಜೊತೆಗೆ ಮಹಿಳೆಯರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದು ಹೇಳಿದ್ದಾರೆ.

ADVERTISEMENT

ಸವಲತ್ತುಗಳ ಅರಿವು: ದುಡಿಯೋಣ ಬಾ’ ಅಭಿಯಾನದಡಿ ಜನರಿಗೆ ನರೇಗಾ ಯೋಜನೆಯಡಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಏಪ್ರಿಲ್ 1ರಿಂದ ನರೇಗಾ ದಿನಗೂಲಿ ಮೊತ್ತ ₹370ಕ್ಕೆ ಹೆಚ್ಚಳವಾಗಿರುವುದು, ಉಚಿತ ಸಹಾಯವಾಣಿ, ಜನ್‌ಮನರೇಗಾ ಮೊಬೈಲ್ ಅಪ್ಲಿಕೇಷನ್, ವೈಯುಕ್ತಿಕ ಹಾಗೂ ಸಮುದಾಯ ಕಾಮಗಾರಿಗಳು ಸೇರಿದಂತೆ ಮಹಿಳಾ ಕೂಲಿಕಾರರಿಗೆ, ಗ್ರಾಮಸ್ಥರಿಗೆ ಯೋಜನೆಯಲ್ಲಿ ಸಮಾನ ಕೂಲಿ, ಜಾಬ್ ಕಾರ್ಡ್ ಮಹತ್ವದ ಬಗ್ಗೆಯು ಗ್ರಾಮಗಳ ಮಟ್ಟದಲ್ಲಿ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರಿವು ಮೂಡಿಸುತ್ತಿದ್ದಾರೆ ಎಂದು ಜಿ.ಪಂ. ನರೇಗಾ ವಿಭಾಗದ ಯೋಜನಾ ನಿರ್ದೇಶಕ ಎಚ್.ಎನ್. ಮಂಜುನಾಥ್ ಸ್ವಾಮಿ ಮಾಹಿತಿ ನೀಡಿದ್ದಾರೆ.

ಅಭಿಯಾನಕ್ಕೆ ಚಾಲನೆ: ರಾಮನಗರ ತಾಲ್ಲೂಕಿನ ಬನ್ನಿಕುಪ್ಪೆ ಕೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಕೂಲಿಕಾರರಿಗೆ 100 ದಿನಗಳ ಕೆಲಸವನ್ನು ಒದಗಿಸಲು ಹಮ್ಮಿಕೊಂಡಿದ್ದ ದುಡಿಯೋಣ ಬಾ ಅಭಿಯಾನದ ಆಟೊ ಪ್ರಚಾರಕ್ಕೆ ಪಂಚಾಯಿತಿ ಅಧಿಕಾರಿಗಳು ಚಾಲನೆ ನೀಡಿದರು. ಈ ವೇಳೆ, ಮನೆ-ಮನೆ ಭೇಟಿ ಮೂಲಕ ನರೇಗಾ ಯೋಜನೆಯ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಯಿತು.

ಕನಕಪುರ ತಾಲ್ಲೂಕಿನ ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ದುಡಿಯೋಣ ಬಾ’ ಅಭಿಯಾನ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.