ADVERTISEMENT

ರಾಮನಗರಕ್ಕೆ ನರೇಗಾ ರಾಷ್ಟ್ರೀಯ ಪುರಸ್ಕಾರ

ಆರ್.ಜಿತೇಂದ್ರ
Published 2 ಸೆಪ್ಟೆಂಬರ್ 2018, 18:30 IST
Last Updated 2 ಸೆಪ್ಟೆಂಬರ್ 2018, 18:30 IST

ರಾಮನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ‌ ಅನುಷ್ಠಾನಕ್ಕಾಗಿ ರಾಮನಗರ ಜಿಲ್ಲೆಯು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾಗಿದೆ.

ದೇಶದ ವಿವಿಧ ರಾಜ್ಯಗಳ ಒಟ್ಟು 18 ಜಿಲ್ಲೆಗಳಿಗೆ ಈ ಪುರಸ್ಕಾರ ದೊರೆತಿದೆ. ಕರ್ನಾಟಕದಿಂದ ರಾಮನಗರದ ಜೊತೆಗೆ ನೆರೆಯ ಮಂಡ್ಯ ಜಿಲ್ಲೆಗೂ ಈ ಗೌರವ ಸಿಕ್ಕಿದೆ. ಇದೇ ತಿಂಗಳ 11ರಂದು ದೆಹಲಿಯಲ್ಲಿ ಪ್ರಶಸ್ತಿ‌ ಪ್ರದಾನ ಕಾರ್ಯಕ್ರಮವು ನಡೆಯಲಿದೆ.

ರಾಮನಗರವು ವಿಸ್ತೀರ್ಣದಲ್ಲಿ ನಾಲ್ಕು ತಾಲ್ಲೂಕುಗಳನ್ನು ಒಳಗೊಂಡ ಪುಟ್ಟ ಜಿಲ್ಲೆಯಾದರೂ ನರೇಗಾ ಅನುದಾನದ ಬಳಕೆಯಲ್ಲಿ‌ ಕಳೆದ ಕೆಲವು‌ ವರ್ಷಗಳಿಂದ ಮುಂಚೂಣಿಯಲ್ಲಿದೆ. 2017-18ನೇ ಸಾಲಿನಲ್ಲಿ ಜಿಲ್ಲೆಯು ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿ ಇತ್ತು.

ADVERTISEMENT

ಚೆಕ್ ಡ್ಯಾಮ್ ಗಳ ನಿರ್ಮಾಣದ ಮೂಲಕ ಮಳೆ ನೀರಿನ ಸದ್ಬಳಕೆ ಹಾಗೂ ಅಂತರ್ಜಲ‌ ಮಟ್ಟ ಸುಧಾರಣೆಯ ಹೆಜ್ಜೆ ಇಟ್ಟದ್ದಕ್ಕೆ ಕೇಂದ್ರ ಸರ್ಕಾರವು ಪ್ರಶಂಸೆ ವ್ಯಕ್ತಪಡಿಸಿದೆ. ಜಿಲ್ಲೆಯಾದ್ಯಂತ ನರೇಗಾ ಅಡಿ‌ ಕಳೆದ ಸಾಲಿನಲ್ಲಿ 1,700 ಚೆಕ್ ಡ್ಯಾಮ್ ಗಳನ್ನು ನಿರ್ಮಾಣ ಮಾಡಲಾಗಿದೆ. ಕನಕಪುರ ತಾಲ್ಲೂಕಿನಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಈ ಕಿರು ಅಣೆಕಟ್ಟೆಗಳು ನಿರ್ಮಾಣವಾಗಿವೆ. ಇದಲ್ಲದೆ ವೈಯಕ್ತಿಕ ಕಾಮಗಾರಿಗಳ ಅಡಿ ಸಾವಿರಾರು ದನದ ಕೊಟ್ಟಿಗೆಗಳು, ಕೃಷಿ ಹೊಂಡಗಳ ನಿರ್ಮಾಣವಾಗಿದ್ದು, ಸಾವಿರಾರು ರೈತರಿಗೆ ಉಪಯೋಗವಾಗಿದೆ.

'ಕಳೆದ ಎರಡು ಸಾಲಿನಲ್ಲಿ ವಿಶೇಷವಾಗಿ ಚೆಕ್ ಡ್ಯಾಮ್ ಗಳ ನಿರ್ಮಾಣಕ್ಕೆ‌ ಒತ್ತು ನೀಡಲಾಗಿತ್ತು. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಗಳನ್ನು ಗುರುತಿಸಿ ಅವುಗಳಿಗೆ ಸಣ್ಣ ಅಣೆಕಟ್ಟೆಗಳ ನಿರ್ಮಾಣ ಮಾಡಲಾಯಿತು. ಕನಕಪುರ ಒಂದ ರಲ್ಲಿಯೇ ಇಂತಹ ಸಾವಿರಕ್ಕೂ ಹೆಚ್ಚು ಚೆಕ್ ಡ್ಯಾಮ್ ಗಳು ನಿರ್ಮಾಣಗೊಂಡವು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿ ಕೃಷಿ‌ ಚಟುವಟಿಕೆಗೆ ಅನುವಾಯಿತು' ಎನ್ನುತ್ತಾರೆ ಹಿಂದಿನ ಸಾಲಿನಲ್ಲಿ ರಾಮನಗರ ಜಿಲ್ಲಾ‌ ಪಂಚಾಯಿತಿಯ ಸಿಇಓ ಆಗಿದ್ದ ಆರ್.‌ ಲತಾ.

ಗ್ರಾ.ಪಂ.ಗೆ ಪುರಸ್ಕಾರ: ನರೇಗಾ ಯೋಜನೆಯಲ್ಲಿ ಉತ್ತಮ‌ ಕಾರ್ಯಕ್ಕಾಗಿ ಇಲಾಖೆ ಈ ಸಾಲಿನ ಉತ್ತಮ‌ ಗ್ರಾಮ‌ ಪಂಚಾಯಿತಿ ಪುರಸ್ಕಾರವು ರಾಮನಗರ ತಾಲ್ಲೂಕಿನ ಬನ್ನಿಕುಪ್ಪೆ ಗ್ರಾ.ಪಂ.ಗೆ ದೊರೆತಿದೆ. ಈ ಪ್ರಶಸ್ತಿಗೆ ಪಾತ್ರವಾದ ರಾಜ್ಯದ ಏಕೈಕ‌ ಪಂಚಾಯಿತಿ ಇದಾಗಿದೆ. ಜಾಬ್ ಕಾರ್ಡುಗಳ ಹಂಚಿಕೆ, ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳಲ್ಲಿನ ಸಾಧನೆಗೆ ಪ್ರಶಂಸೆ ದೊರೆತಿದೆ.

2017-18ರಲ್ಲಿ ಜಿಲ್ಲೆಯ ನರೇಗಾ ಸಾಧನೆ
57.83 ಲಕ್ಷ- ಮಾನವ ದಿನಗಳ‌ ಸೃಜನೆ
228 ಕೋಟಿ ರೂಪಾಯಿ- ಮೊತ್ತದ ಅನುದಾನ ಬಳಕೆ
11,600- ದನದ ಕೊಟ್ಟಿಗೆಗಳ ನಿರ್ಮಾಣ
3174- ಕೃಷಿ ಹೊಂಡಗಳ ನಿರ್ಮಾಣ

2018-19ನೇ ಸಾಲಿನ ಪ್ರಗತಿ
64.71 ಲಕ್ಷ- ಮಾನವ ದಿನಗಳ ಸೃಜನೆಯ ಗುರಿ

5.62 ಲಕ್ಷ- ಈವರೆಗೆ ಸೃಜಿಸಲಾದ ಮಾನವ ದಿನಗಳು

72.31 ಕೋಟಿ ರೂಪಾಯಿ- ಈವರೆಗಿನ ವೆಚ್ಚ

7746- ವೈಯಕ್ತಿಕ ಕಾಮಗಾರಿಗಳ ಆರಂಭ

746- ಕಾಮಗಾರಿಗಳ ಮುಕ್ತಾಯ

538-ಕಾಮಗಾರಿಗಳ ಆರಂಭ

180- ಕಾಮಗಾರಿಗಳ ಮುಕ್ತಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.