ADVERTISEMENT

ನರೇಗಾ ಕಾಮಗಾರಿ: ಮಹಿಳೆಯರಿಗೆ ತರಬೇತಿ

ಸ್ವಸಹಾಯ ಗುಂಪುಗಳ ಆಯ್ದ ಸದಸ್ಯರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:32 IST
Last Updated 8 ಫೆಬ್ರುವರಿ 2021, 17:32 IST
ತರಬೇತಿ ಕಾರ್ಯಾಗಾರದಲ್ಲಿ ಜಿ.ಪಂ. ಸಿಇಒ ಇಕ್ರಂ ಮಾತನಾಡಿದರು
ತರಬೇತಿ ಕಾರ್ಯಾಗಾರದಲ್ಲಿ ಜಿ.ಪಂ. ಸಿಇಒ ಇಕ್ರಂ ಮಾತನಾಡಿದರು   

ರಾಮನಗರ: ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ನಿರ್ಮಿತಿ ಕೇಂದ್ರದ ಮೂಲಕ ಜಿಲ್ಲೆಯಲ್ಲಿ ಮಹಿಳೆಯರಿಗೆ30 ದಿನಗಳ ಕೌಶಲಾಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ತಿಳಿಸಿದರು.

ಬಿಡದಿಯಲ್ಲಿರುವ ನಿರ್ಮಿತಿ ಕೇಂದ್ರದಲ್ಲಿ ಸೋಮವಾರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮನರೇಗಾ ಯೋಜನೆಗ ಅರ್ಹ ಕುಟುಂಬಗಳನ್ನು ಯೋಜನೆಯಡಿ ನೋಂದಣಿ ಮಾಡಿಕೊಂಡು ಉದ್ಯೋಗ ಚೀಟಿಯನ್ನು ವಿತರಿಸಲು ಮನೆ ಮನೆ ಸರ್ವೆ, ಮಹಿಳಾ ಕಾಯಕೋತ್ಸವ ಕಾರ್ಯಕ್ರಮದಡಿ ಮಹಿಳೆಯರು ಭಾಗವಹಿಸುವಿಕೆ ಹೆಚ್ಚಿಸಲು ಮಹಿಳೆಯರನ್ನು ಗುರುತಿಸಲಾಗುತ್ತಿದೆ.

ಮನರೇಗಾ ಯೋಜನೆಯಡಿ ಮಳೆ ನೀರು ಕೊಯ್ಲು, ಚೆಕ್ ಡ್ಯಾಂ, ಕೃಷಿ ಹೊಂಡ, ಕೆರೆ ಕಟ್ಟೆಗಳ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇವುಗಳ ಕೆಲಸ ನಿರ್ವಹಿಸುವಾಗ ಅಳತೆ, ಸಿಮೆಂಟ್, ಮರಳು ಮಿಶ್ರಣ ಮುಂತಾದ ಜ್ಞಾನ ಹೊಂದಿರುವುದು ಅವಶ್ಯಕವಾಗಿರುತ್ತದೆ. ಆಗ ಮಾತ್ರ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಮೂಡಿಬರಲು ಸಾಧ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಆಯ್ದ ಸ್ವಸಹಾಯ ಗುಂಪಿನ ೩೦ ಮಹಿಳೆಯರಿಗೆ ನಿರ್ಮಿತಿ ಕೇಂದ್ರದ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ADVERTISEMENT

ಇಲ್ಲಿ ತರಬೇತಿ ಪಡೆದ ಮಹಿಳೆಯರು ನಾಯಕತ್ವ ವಹಿಸಿ ಸಮುದಾಯ ಕಾಮಗಾರಿಗಳನ್ನು ಸುಸೂತ್ರವಾಗಿ ಕೈಗೊಳ್ಳಬಹುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹಿಳೆಯರು ತರಬೇತಿ ಪಡೆಯಲು ಇಚ್ಛಿಸಿದಲ್ಲಿ ಅವರಿಗೂ ಸಹ ತರಬೇತಿ ನೀಡಲಾಗುವುದು ಎಂದರು.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗೋವಿಂದರಾಜು, ನರೇಗಾ ಸಂಯೋಜಕರಾದ ವಿನೋದ್ ಮತ್ತು ನಾರಾಯಣ್ ಉಪಸ್ಥಿತರಿದ್ದರು.

**

ಮಹಿಳೆಯರಿಗೆ 30 ದಿನಗಳ ಕೌಶಲ ತರಬೇತಿ ನೀಡಲಿದ್ದು, ಇಲ್ಲಿ ತರಬೇತಿ ಪಡೆದವರು ತಾವೇ ನಾಯಕತ್ವ ವಹಿಸಿ ಕಾಮಗಾರಿ ಕೈಗೊಳ್ಳಬಹುದು.
-ಇಕ್ರಂ,ಸಿಇಒ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.