ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ; ಮೊದಲ ಹಂತದ ಕಾಮಗಾರಿ ವರ್ಷದಲ್ಲಿ ಪೂರ್ಣ?

ಪ್ರತಿ ಕಿ.ಮೀ.ಗೆ ₹ 32.77 ಕೋಟಿ ವೆಚ್ಚ!

ಆರ್.ಜಿತೇಂದ್ರ
Published 3 ಸೆಪ್ಟೆಂಬರ್ 2019, 20:13 IST
Last Updated 3 ಸೆಪ್ಟೆಂಬರ್ 2019, 20:13 IST

ರಾಮನಗರ: ಬೆಂಗಳೂರು–ಮೈಸೂರು ಹೆದ್ದಾರಿಯನ್ನುದಶಪಥವನ್ನಾಗಿಸುವಕಾಮಗಾರಿಯು ಪ್ರಗತಿಯಲ್ಲಿದ್ದು, ಇನ್ನೊಂದು ವರ್ಷದಲ್ಲಿ ಮೊದಲ ಹಂತದ ಕಾಮಗಾರಿಯು ಮುಕ್ತಾಯದ ಹಂತ ತಲುಪುವ ಸಾಧ್ಯತೆ ಇದೆ.

ಹೆದ್ದಾರಿ ಕಾಮಗಾರಿಯ ಪ್ರಗತಿ ಕುರಿತು ಲೋಕೋಪಯೋಗಿ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಂಗಳವಾರ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ಈಗ ಇರುವ ನಾಲ್ಕು ಪಥದ ರಸ್ತೆಯು ಸುಮಾರು 25ರಿಂದ 30 ಮೀಟರ್‌ ಅಗಲ ಇದ್ದು, ಇದನ್ನು 60 ಮೀಟರ್‌ಗೆ ಹಾಗೂ ಎಲಿವೇಟೆಡ್‌ ಕಾರಿಡಾರ್‌ ಬಳಿ 45 ಮೀಟರ್‌ಗೆ ವಿಸ್ತರಣೆ ಮಾಡಲಾಗುತ್ತಿದೆ.

ಬೆಂಗಳೂರು–ಮೈಸೂರು ನಡುವೆ ಸದ್ಯ 135 ಕಿಲೋಮೀಟರ್‌ ಅಂತರವಿದೆ. ಇದರಲ್ಲಿ ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್‌ ಬಳಿಯ 18ನೇ ಕಿ.ಮೀ. ಮೈಲಿಗಲ್ಲಿನ ಬಳಿ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಕಾರ್ಯ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂಕ್ಷನ್‌ನಲ್ಲಿ ಮುಕ್ತಾಯಗೊಳ್ಳಲಿದೆ. 118ಕಿ.ಮೀ ಉದ್ದಕ್ಕೆ ಹತ್ತು ಪಥಗಳ ರಸ್ತೆ ಬರಲಿದೆ.

ADVERTISEMENT

ಮೈಸೂರು–ಬೆಂಗಳೂರು ನಡುವೆ ಒಟ್ಟು ಎರಡು ಹಂತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಗಿದೆ. ಬೆಂಗಳೂರಿನ ನೈಸ್‌ ಜಂಕ್ಷನ್‌ ರಸ್ತೆ ಸಮೀಪದಿಂದ ಮಂಡ್ಯ ಜಿಲ್ಲೆಯ ನಿಡಘಟ್ಟವರೆಗೆ ಮೊದಲ ಹಂತದ ಕಾಮಗಾರಿಯು ಭರದಿಂದ ಸಾಗಿದೆ. ಇಲ್ಲಿ ಒಟ್ಟಾರೆ 56.2 ಕಿ.ಮೀ ಉದ್ದದ ರಸ್ತೆಯು ವಿಸ್ತರಣೆ ಆಗುತ್ತಿದೆ. ಇದಕ್ಕಾಗಿ ಸರ್ಕಾರ ₹ 3900 ಕೋಟಿ ವೆಚ್ಚ ಅಂದಾಜಿಸಿದೆ.

ಎರಡನೇ ಹಂತದಲ್ಲಿ ನಿಡಘಟ್ಟದಿಂದ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜಂಕ್ಷನ್‌ವರೆಗೆ 61.1 ಉದ್ದದ ರಸ್ತೆ ಅಭಿವೃದ್ಧಿ ಕಾಣಲಿದೆ. ಮಧ್ಯಪ್ರದೇಶ ಮೂಲದ ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿಯು ಈ ಕಾಮಗಾರಿಗಳ ಗುತ್ತಿಗೆ ಪಡೆದಿದೆ. ಇದೇವರ್ಷ ಮೇನಲ್ಲಿ ಕಂಪನಿಯು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಸದ್ಯ ಬೆಂಗಳೂರಿನಿಂದ ನಿಡಘಟ್ಟವರೆ
ಗಿನ ರಸ್ತೆ ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗಿದೆ.

ಎರಡು ಕಡೆ ಬೈಪಾಸ್‌: ಮೊದಲ ಹಂತದಲ್ಲಿ ಬಿಡದಿ, ರಾಮನಗರ- ಚನ್ನಪಟ್ಟಣ ಮಾರ್ಗದಲ್ಲಿ ಒಟ್ಟು 29.33 ಉದ್ದದ ಬೈಪಾಸ್ ರಸ್ತೆ
ಯನ್ನು ಹೊಸತಾಗಿ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಪ್ರಯಾಣಿಸುವವರು ಈ ಪಟ್ಟಣಗಳ ಒಳ ಪ್ರವೇಶಿಸ
ದೆಯೇ ಹೊರ ಮಾರ್ಗವಾಗಿ ಸಾಗಬಹುದು. ಬಿಡದಿಯಲ್ಲಿ ಆರಂಭಗೊಳ್ಳುವ ಬೈಪಾಸ್‌ ರಸ್ತೆಚನ್ನಪಟ್ಟಣದ ಮಳೂರು ಸಮೀಪ
ಮತ್ತೆ ಮುಖ್ಯ ರಸ್ತೆಯನ್ನು ಕೂಡಿಕೊಳ್ಳಲಿದೆ.

ದೊಡ್ಡ ಸೇತುವೆಗಳ ನಿರ್ಮಾಣ: ಮೊದಲ ಹಂತದಲ್ಲಿ ಬೈಪಾಸ್‌ನ ನಾಲ್ಕು ಕಡೆ ಬೃಹತ್‌ ಸೇತುವೆಗಳ ನಿರ್ಮಾಣ ಆಗಲಿದೆ. 17 ಸಣ್ಣ ಸೇತುವೆಗಳೂ ನಿರ್ಮಾಣ ಆಗುತ್ತಿವೆ.

ಎಲಿವೇಟೆಡ್‌ ಕಾರಿಡಾರ್: ಬೆಂಗಳೂರಿನೊಳಗೆ 18.6ಕಿ.ಮೀನಿಂದ 23 ಕಿ.ಮೀ. ಗುರುತಿನವರೆಗೆ ಸುಮಾರು 4.4 ಕಿ.ಮೀ ಉದ್ದದ ಎಲಿವೇಟೆಡ್‌ ಕಾರಿಡಾರ್ಅನ್ನು ಹೆದ್ದಾರಿ ಪ್ರಾಧಿಕಾರವು ನಿರ್ಮಿಸಲಿದೆ.

ಬರಲಿದೆ ಎರಡು ಕಡೆ ಟೋಲ್‌

ರಸ್ತೆ ಸಂಪೂರ್ಣ ಅಭಿವೃದ್ಧಿಗೊಂಡ ಬಳಿಕ ಮೈಸೂರು–ಮಂಡ್ಯ ನಡುವೆ ಪ್ರಯಾಣಿಸುವವರು ರಸ್ತೆ ಬಳಕೆಗೆ ಸುಂಕ ಕಟ್ಟಬೇಕಾಗುತ್ತದೆ. ಎಡಬದಿಯಲ್ಲಿ ಹೆದ್ದಾರಿಯ 23.950 ಕಿ.ಮೀ. ಬಳಿ ಹಾಗೂ ಬಲಬದಿಯಲ್ಲಿ 26.8 ಕಿ.ಮೀ. ಬಳಿ ಟೋಲ್‌ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.

ವೆಚ್ಚವೆಷ್ಟು?

ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಪ್ರತಿ ಕಿ.ಮೀ. ಹೆದ್ದಾರಿ ವಿಸ್ತರಣೆ ಮತ್ತು ನಿರ್ಮಾಣಕ್ಕೆ ವ್ಯಯಿಸುತ್ತಿರುವ ವೆಚ್ಚ ಬರೋಬ್ಬರಿ ಬರೋಬ್ಬರಿ ₹ 32.77 ಕೋಟಿ! ಮೊದಲ ಹಂತದಲ್ಲಿ ಸರ್ಕಾರ 56.2 ಕಿ.ಮೀ ಉದ್ದದ ರಸ್ತೆಗಾಗಿ ₹3,900 ಕೋಟಿ ಖರ್ಚು ಮಾಡುತ್ತಿದೆ. ಇದರಲ್ಲಿ ಭೂಸ್ವಾಧೀನ, ಮೂಲ ಸೌಕರ್ಯಗಳ ಸ್ಥಳಾಂತರ ಕಾರ್ಯಕ್ಕಾಗಿ ₹1,716 ಕೋಟಿ ಖರ್ಚಾಗಿದೆ. ರಸ್ತೆ ಮೇಲಿನ ಕಾಮಗಾರಿಗಳಿಗಾಗಿ ₹1,984 ಕೋಟಿ ಖರ್ಚಾಗಲಿದೆ.

ಸಮಯ ಉಳಿತಾಯ

ಬೆಂಗಳೂರು–ಮೈಸೂರು ನಡುವೆ ಪ್ರಯಾಣಿಸಲು ಸದ್ಯ ಕನಿಷ್ಠ ಮೂರು ಗಂಟೆ ಬೇಕು. ಹೊಸ ರಸ್ತೆ ನಿರ್ಮಾಣ ಆದಲ್ಲಿ ಇದು 90 ನಿಮಿಷಗಳಿಗೆ (ಒಂದೂವರೆ ಗಂಟೆ) ತಗ್ಗಲಿದೆ ಎನ್ನುವುದು ಹೆದ್ದಾರಿ ಪ್ರಾಧಿಕಾರದ ಅಂದಾಜು.ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ಒಟ್ಟು 51.5 ಕಿ.ಮೀ ಉದ್ದದ ಬೈಪಾಸ್ ನಿರ್ಮಾಣ ಆಗಲಿದ್ದು, ಜನರು ಪಟ್ಟಣಗಳನ್ನು ಬಳಸುವುದು ತಪ್ಪುತ್ತದೆ. ಇದರಿಂದ ಸಮಯ, ಇಂಧನ ಉಳಿತಾಯ ಆಗಿ ಸಂಚಾರ ದಟ್ಟಣೆಯ ಕಿರಿಕಿರಿಯೂ ಕಡಿಮೆ ಆಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.