ADVERTISEMENT

ಲಾವಣಿ ಸಾಹಿತ್ಯದ ಪ್ರಚಾರ ಅಗತ್ಯ: ಬಾಪುಗೌಡ

ತಿಂಗಳ ಕಲಾ ಬೆಳಕು : ಪ್ರದರ್ಶನ, ಸಂವಾದ, ಅಭಿನಂದನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 13:56 IST
Last Updated 2 ಸೆಪ್ಟೆಂಬರ್ 2018, 13:56 IST
‘ತಿಂಗಳ ಕಲಾ ಬೆಳಕು’ ಕಾರ್ಯಕ್ರಮದಲ್ಲಿ ಬಾಪುಗೌಡ ಆರ್. ಪೊಲೀಸ್ ಪಾಟೀಲ ಲಾವಣಿಗಳನ್ನು ಹಾಡಿದರು
‘ತಿಂಗಳ ಕಲಾ ಬೆಳಕು’ ಕಾರ್ಯಕ್ರಮದಲ್ಲಿ ಬಾಪುಗೌಡ ಆರ್. ಪೊಲೀಸ್ ಪಾಟೀಲ ಲಾವಣಿಗಳನ್ನು ಹಾಡಿದರು   

ರಾಮನಗರ: ಪ್ರಸ್ತುತ ಸಮಯದಲ್ಲಿ ಜನಪದ ಸಾಹಿ­ತ್ಯದ ವಿವಿಧ ಪ್ರಕಾರ ಕಣ್ಮರೆಯಾಗು­ತ್ತಿದ್ದು, ಹೀಗಾಗಿ ಲಾವಣಿ ಸಾಹಿತ್ಯ­ವನ್ನು ಶಾಲಾ-ಕಾಲೇಜುಗಳ ವಿದ್ಯಾರ್ಥಿ­ಗಳಿಗೆ ಪರಿಚಯಿಸಿ ಪ್ರಚಾರ ಮಾಡು­ವುದು ಅಗತ್ಯವಾಗಿದೆ ಎಂದು ಲಾವಣಿ ಹಾಡುಗಾರ ಬಾಪುಗೌಡ ಆರ್. ಪೊಲೀಸ್ ಪಾಟೀಲ ಹೇಳಿದರು.

ಇಲ್ಲಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಶನಿವಾರ ನಡೆದ ‘ತಿಂಗಳ ಕಲಾ ಬೆಳಕು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೌಂದರ್ಯ, ವೀರತನ­ಗಳಿಗೆ ಸಂಬಂಧಿಸಿದಂತೆ ಲಾವಣಿ ರಚನೆಯಾಗಿವೆ. ಲಾವಣಿಗಳಲ್ಲಿ ಮೇಳ ಲಾವಣಿ, ಒಂಟಿ ಲಾವಣಿ ಪ್ರಕಾರಗಳಿವೆ. ದೇಶದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ವೀರತನದ ಕಥೆ ಆಧರಿಸಿ ಲಾವಣಿ ಪದ ಹಾಡುವ ಪದ್ಧತಿ ಇತ್ತು. ಇದೇ ಮುಂದೆ ದೇಶಭಕ್ತಿ ಗೀತೆಗಳಾದವು ಎಂದರು.

ADVERTISEMENT

ಲಾವಣಿ ಸಾಹಿತ್ಯ ಮೊದಲು ಪುರುಷರಿಗೆ ಮಾತ್ರ ಸೀಮಿತ­ವಾಗಿತ್ತು. ನಂತರದಲ್ಲಿ ಹೆಣ್ಣು ಮಕ್ಕಳು ಹಾಡಲು ಪ್ರಾರಂಭಿಸಿದರು. ಲಾವಣಿ ಸಾಹಿತ್ಯ ಸಾಮಾನ್ಯ ಜನರಿಗೆ ಅರ್ಥವಾಗುವ ಸಾಹಿತ್ಯ ಎಂದು ತಿಳಿಸಿದರು.

ಜಾನಪದ ಸಾಹಿತ್ಯವಾದ ಲಾವಣಿ, ಜಾನಪದ ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಜೀವಂತವಾಗಿವೆ. ಕನ್ನಡ ಭಾಷೆ ಉಳಿದು ಬಾಳಬೇಕಾದರೆ ರಾಜ್ಯದ ಕಟ್ಟ ಕಡೆಯ ಪ್ರಜೆಗೂ ಕನ್ನಡ ಸಾಹಿತ್ಯ ಹಾಗೂ ಸಂಗೀತ ತಲುಪಿದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು.

ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದೆ. ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಜಾನಪದ ಸಾಹಿತ್ಯ ಕುರಿತು ಕಮ್ಮಟಗಳನ್ನು ಏರ್ಪಡಿಸಿ ವಿವಿಧ ಪ್ರಕಾರಗಳ ಜಾನಪದ ಗೀತೆಗಳನ್ನು ಹಾಡಲು ತರಬೇತಿ ನೀಡಬೇಕು ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ.ರಾಮೇಗೌಡ ಮಾತನಾಡಿ ಕನ್ನಡ ಭಾಷೆ, ಸಾಹಿತ್ಯದ ಮಹತ್ವವನ್ನು ಎಲ್ಲರೂ ತಿಳಿದು, ಇತರರಿಗೂ ತಿಳಿಸುವ ಕಾರ್ಯ ನಡೆಯಬೇಕಿದೆ. ಅನ್ಯಭಾಷೆಗಳ ಹಾವಳಿ ನಡುವೆ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಜೀವಂತವಾಗಿದೆ ಎಂದು ತಿಳಿಸಿದರು.

ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕಿ ಕವಿತಾರಾವ್ ಮಾತನಾಡಿ, 21 ನೆಯ ಶತಮಾನದಲ್ಲಿ ಜಾನಪದ ಸಾಹಿತ್ಯದ ವಿವಿಧ ಪ್ರಕಾರಗಳು ಕಣ್ಮರೆಯಾಗುತ್ತಿವೆ. ವಿಶೇಷವಾಗಿ ಲಾವಣಿ ಸಾಹಿತ್ಯ ಇಂದಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರಿಚಯಿಸಿ ಪ್ರಸಾರ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಕಲಾವಿದರಾದ ಸಲೀಂ ಹನಗಂಡಿ, ಶೈಲ್‌ ಹಲ್ಯಾಳ, ಚನ್ನಪ್ಪ, ಉಪನ್ಯಾಸಕ ಹೊಸದೊಡ್ಡಿ ರಮೇಶ್, ಅರ್ಪಿತಾ ಚಾರಿಟಬಲ್ ಟ್ರಸ್ಟಿನ ಎನ್.ವಿ. ಲೋಕೇಶ್, ಪರಿಸರವಾದಿ ಬಿ.ಟಿ. ರಾಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.