ADVERTISEMENT

ನಿರ್ವಹಣೆ ಇಲ್ಲದೆ ಸೊರಗಿದೆ ಅಮ್ಮನ ಉದ್ಯಾನ

2020-21ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 18:43 IST
Last Updated 1 ಆಗಸ್ಟ್ 2025, 18:43 IST
<div class="paragraphs"><p>ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿರುವ ಅಮ್ಮನ ಪಾರ್ಕ್‌ನ ಕೊಳದಲ್ಲಿ ಗಿಡಗಂಟಿ ಬೆಳೆದಿರುವುದು</p></div>

ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿರುವ ಅಮ್ಮನ ಪಾರ್ಕ್‌ನ ಕೊಳದಲ್ಲಿ ಗಿಡಗಂಟಿ ಬೆಳೆದಿರುವುದು

   

ಚನ್ನಪಟ್ಟಣ: ತಾಲ್ಲೂಕಿನ ಬೇವೂರು ಗ್ರಾಮದ ಹೊರವಲಯದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಅಮ್ಮನ ಪಾರ್ಕ್ ನಿರ್ವಹಣೆ ಇಲ್ಲದೆ ಸೊರಗಿದೆ.

ಜಿಲ್ಲಾ ಪಂಚಾಯಿತಿ ಹಾಗೂ ಬೇವೂರು ಗ್ರಾ.ಪಂ.ವತಿಯಿಂದ ನರೇಗಾ ಯೋಜನೆಯಡಿಯಲ್ಲಿ 2020-21ನೇ ಸಾಲಿನಲ್ಲಿ ₹30 ಲಕ್ಷ ಅಂದಾಜು ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿತ್ತು. ಗ್ರಾಮದ ಹೊರವಲಯದಲ್ಲಿ ಪಾಳುಬಿದ್ದಿದ್ದ ಅಮ್ಮನಕಟ್ಟೆಯನ್ನು ಅಭಿವೃದ್ಧಿಪಡಿಸಿ ಅದರ ಸುತ್ತಲೂ ಉದ್ಯಾನ ನಿರ್ಮಿಸಿ ಅಮ್ಮನ ಪಾರ್ಕ್ ಎಂದು ನಾಮಕರಣ ಮಾಡಲಾಗಿತ್ತು.

ADVERTISEMENT

ಆಕರ್ಷಕ ವಾಕಿಂಗ್ ಪಥ, ಕುಳಿತುಕೊಳ್ಳಲು ಸಿಮೆಂಟ್ ಬೆಂಚ್‌ಗಳು, ಹುಲ್ಲುಹಾಸು, ಪ್ರಯಾಣಿಕರ ತಂಗುದಾಣ, ವಿವಿಧ ಗಿಡಗಳನ್ನು ನೆಟ್ಟು ಉತ್ತಮ ಉದ್ಯಾನವನ ನಿರ್ಮಾಣ ಮಾಡಲಾಗಿತ್ತು. ಜೊತೆಗೆ ಅಮ್ಮನಕಟ್ಟೆಯನ್ನು ಕೊಳದ ರೀತಿ ನಿರ್ಮಿಸಿ ಕಬ್ಬಿಣದ ಬೇಲಿ ಹಾಕಿ, ಕೊಳಕ್ಕೆ ನೀರು ತುಂಬಿಸಿ ಮೆಟ್ಟಿಲು ಇಟ್ಟು ಪಾರ್ಕ್‌ಗೆ ಹೊಸ ರೂಪ ನೀಡಲಾಗಿತ್ತು.

ಚನ್ನಪಟ್ಟಣದಿಂದ ಮಲ್ಲನಕುಪ್ಪೆ ಕುಣಿಗಲ್‌ಗೆ ಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಪಾರ್ಕ್ ನಿರ್ಮಾಣ ಮಾಡಿದ್ದು, ದಾರಿ ಹೋಕರಿಗೆ, ವಾಹನಸವಾರರಿಗೆ ವಿಶ್ರಾಂತಿ ತಾಣವಾಗಿತ್ತು. ಬೇವೂರು ಹಾಗೂ ಅಕ್ಕಪಕ್ಕದ ಗ್ರಾಮದ ಜನರಿಗೆ ವಾಯುವಿಹಾರದ ಸ್ಥಳವಾಗಿ, ಪ್ರಕೃತಿ ಪ್ರಿಯರ ಮನಸೆಳೆಯುವ ಜಾಗವಾಗಿ, ಮಕ್ಕಳ ನೆಚ್ಚಿನ ತಾಣವಾಗಿ ಅಮ್ಮನ ಪಾರ್ಕ್ ಮೆಚ್ಚುಗೆಗೆ ಪಾತ್ರವಾಗಿತ್ತು.

ಆದರೆ, ಇಂದು ಪಾರ್ಕ್‌ನಲ್ಲಿ ಸಂಪೂರ್ಣ ಗಿಡಗಂಟಿ ಬೆಳೆದಿದ್ದು, ಕೊಳದಲ್ಲಿ ಸಹ ಪೊದೆ ಬೆಳೆದಿದೆ. ಜೊತೆಗೆ ಕಲ್ಲು ಬೆಂಚು ಹಾಕಿರುವ ಜಾಗದಲ್ಲಿ ಪಾರ್ಥೇನಿಯಂ  ಬೆಳೆದು ಬೆಂಚುಗಳು ಸಹ ಮರೆಯಾಗಿದೆ. ವಾಕಿಂಗ್ ಪಥದಲ್ಲಿಯೂ ಅಡ್ಡಾದಿಡ್ಡಿಯಾಗಿ ಗಿಡಗಂಟಿಗಳು ಬೆಳೆದುಕೊಂಡಿವೆ.

ಪ್ರವಾಸಿ ತಾಣ: ಬೇವೂರು ಜೈನರ ತಾಣವಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಜೊತೆಗೆ ಇಲ್ಲಿ ನಿರ್ಮಾಣವಾಗುವ ಮಣ್ಣಿನ ಕುಡಿಕೆಗಳಿಗೆ ರಾಜ್ಯವಲ್ಲದೆ ಹೊರರಾಜ್ಯಗಳಿಂದಲೂ ಬೇಡಿಕೆ ಇದೆ. ಈ ಕಾರಣದಿಂದಲೇ ಗ್ರಾಮಕ್ಕೆ ಕುಡಿಕೆ ಬೇವೂರು ಎಂಬ ಹೆಸರು ಬಂದಿದೆ. ಗ್ರಾಮದಲ್ಲಿ ತಿಮ್ಮಪ್ಪಬೆಟ್ಟ, ಮಲ್ಲಿಕಾರ್ಜುನ ಮಠಗಳಿದ್ದು, ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಇದಲ್ಲದೆ ಈ ರಸ್ತೆಯಲ್ಲಿ ಗೌಡಗೆರೆ ಗ್ರಾಮ ಇದೆ. ಇಲ್ಲಿ ವಿಶ್ವದ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹವಿರುವ ಚಾಮುಂಡೇಶ್ವರಿ ಬಸವಪ್ಪ ಕ್ಷೇತ್ರವಿದೆ. ಹಾಗಾಗಿ ಇಲ್ಲಿಗೆ ಪ್ರತಿದಿನ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಗ್ರಾಮಕ್ಕೆ ಬರುವ ಪ್ರವಾಸಿಗರು, ಗೌಡಗೆರೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅಮ್ಮನ ಪಾರ್ಕ್ ವಿಶ್ರಾಂತಿ ತಾಣವಾಗಿತ್ತು. ಆದರೆ, ಪಾರ್ಕ್ ನಿರ್ವಹಣೆ ಇಲ್ಲದೆ ಸೊರಗಿರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ.

ಸ್ಥಳೀಯ ಗ್ರಾ.ಪಂ.ಪಾರ್ಕ್‌ನ ನಿರ್ವಹಣೆ ಹೊತ್ತಿತ್ತು. ಆರಂಭದಲ್ಲಿ ಉತ್ತಮವಾಗಿ ನಿರ್ಹವಣೆ ಮಾಡಲಾಗುತ್ತಿತ್ತು. ಆದರೆ, ಈಗ ಗ್ರಾ.ಪಂ.ಸದಸ್ಯರು ಹಾಗೂ ಗ್ರಾ.ಪಂ. ಅಧಿಕಾರಿಗಳ ನಡುವಿನ ಹೊಂದಾಣಿಕೆ ಕೊರತೆಯಿಂದ ಪಾರ್ಕ್‌ಗೆ ಇಂತಹ ಪರಿಸ್ಥಿತಿ ಎದುರಾಗಿದೆ ಎಂಬುದು ಗ್ರಾಮಸ್ಥರ ಮಾತಾಗಿದೆ.

ವಾಕಿಂಗ್ ಪಥದ ಸ್ಥಿತಿ
ಅಮ್ಮನ ಪಾರ್ಕ್

ಸಿಮೆಂಟ್ ಬೆಂಚುಗಳ ನಡುವಿನ ಜಾಗದಲ್ಲಿ ಬೆಳೆದಿರುವ ಪಾರ್ಥೇನಿಯಂ

ಸರಿಯಾಗಿ ನಿರ್ವಹಣೆ ಮಾಡುತ್ತೇವೆ

ಪಾರ್ಕ್ ನಿರ್ವಹಣೆ ಮಾಡುತ್ತಿದ್ದೆವು. ಕೆಲವು ದಿನಗಳಿಂದ ಅದನ್ನು ಸ್ವಚ್ಛಗೊಳಿಸಲು ಸಾಧ್ಯವಾಗಿಲ್ಲ. ಕೊಳದ ಕಲ್ಲುಗಳು ಕೆಲವು ಕಳಚಿಕೊಂಡಿವೆ. ಅವುಗಳನ್ನು ಸರಿಪಡಿಸಿ ನಂತರ ಪಾರ್ಕ್ ಅನ್ನು ಸ್ವಚ್ಛ ಗೊಳಿಸುತ್ತೇವೆ. ಜೊತೆಗೆ ಅದನ್ನು ಮೊದಲಿನಂತೆ ನಿರ್ವಹಣೆ ಮಾಡುತ್ತೇವೆ.

ಹರ್ಷಗೌಡ ಪಿಡಿಒ ಬೇವೂರು ಗ್ರಾ.ಪಂ

ಉದ್ಯಾನವನ ಸ್ವಚ್ಛಗೊಳಿಸಿ

ಈ ಭಾಗದಲ್ಲಿ ಸಾರ್ವಜನಿಕರ ವಾಯುವಿಹಾರಕ್ಕೆ ಯಾವುದೇ ಸೂಕ್ತ ಜಾಗವಿಲ್ಲ. ವಾಕಿಂಗ್ ಮಾಡುವವರು ರಸ್ತೆಯನ್ನು ಆಶ್ರಯಿಸುವಂತಾಗಿತ್ತು. ಗ್ರಾಮದಲ್ಲಿ ಅಮ್ಮನ ಪಾರ್ಕ್ ನಿರ್ಮಾಣವಾಗಿದ್ದರಿಂದ ಸಾರ್ವಜನಿಕರ ವಾಯುವಿಹಾರ ಹಾಗೂ ಮಕ್ಕಳ ಸಮಯ ಕಳೆಯುವ ಜಾಗದ ಸಮಸ್ಯೆ ನಿವಾರಣೆಯಾಗಿತ್ತು. ಆದರೆ ಈಗ ಪಾರ್ಕ್ ದುಸ್ಥಿತಿ ತಲುಪಿದೆ. ಇದನ್ನು ಮೊದಲಿನಂತೆ ಕಾಪಾಡಲು ಸಂಬಂಧಪಟ್ಟವರು ಮುಂದಾಗಬೇಕು.

ಯೋಗೀಶ್ ಗೌಡ ಹೋರಾಟಗಾರ ಬೇವೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.