ಹಾರೋಹಳ್ಳಿ: ‘ಇತ್ತೀಚೆಗೆ ರಾಮನಗರ ಕ್ಷೇತ್ರದಲ್ಲಿ ದ್ವೇಷ ರಾಜಕಾರಣ ಹೆಚ್ಚಾಗಿದ್ದು, ಅದನ್ನು ಎಂದಿಗೂ ಸಹಿಸುವುದಿಲ್ಲ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಹಾರೋಹಳ್ಳಿಯ ಅಂಚಿಬಾರೆಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾಗ ಯಾವುದೇ ದ್ವೇಷ ರಾಜಕಾರಣ ಮಾಡುತ್ತಿರಲಿಲ್ಲ. ಇತ್ತೀಚೆಗೆ ಹೆಚ್ಚಾಗಿದೆ ಎಂದರು.
‘ಸರಕಾರಿ ಇಲಾಖೆಯಲ್ಲಿ ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಮ್ಮ ಕಾರ್ಯಕರ್ತರ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿವೆ. ಮುಂದೆ ಕ್ಷೇತ್ರದ ಜನತೆಯೇ ಇದಕ್ಕೆ ಉತ್ತರಿಸುತ್ತಾರೆ’ ಎಂದು ಹೇಳಿದರು.
‘ವಿಧಾನಸಭಾ ಚುನಾವಣೆಯಲ್ಲಿ ಸಣ್ಣ ಪುಟ್ಟ ಲೋಪಗಳೊಂದಿಗೆ ಚುನಾವಣೆಗೆ ನಿಲ್ಲಲಾಯಿತು. ಆದರೆ, ಒಳಸಂಚು ರೂಪಿಸಿ ಚುನಾವಣೆಯಲ್ಲಿ ಸೋಲಿಸಿದರು’ ಎಂದು ಅಳಲು ತೋಡಿಕೊಂಡರು.
‘ಇಂದು ಕಾರ್ಯಕರ್ತರ ಬಳಿ ಮುಕ್ತವಾಗಿ ಮಾತನಾಡಬೇಕು. ಕಾರ್ಯಕರ್ತರ ಭಾವನೆಗಳಿಗೆ ಯಾವುದೇ ರೀತಿ ಚ್ಯುತಿ ಬಾರದಂತೆ ನೋಡಿಕೊಳ್ಳಲಾಗುವುದು’ ಎಂದರು.
‘ನನ್ನ ಮುಂದೆ ಬೆಟ್ಟದಷ್ಟು ಗುರಿ ಇದೆ. ಕಾರ್ಯಕರ್ತರೇ ಚುನಾವಣೆ ನಡೆಸಬೇಕು. ಹಾಗಾಗಿ ಈಗಿನಿಂದಲೇ ಸಂಘಟನೆಗೆ ಒತ್ತು ನೀಡಬೇಕು. ರಾಜ್ಯ ಸುತ್ತುವ ಜವಾಬ್ದಾರಿ ಇರುವುದರಿಂದ ಸಾಮೂಹಿಕ ಜವಾಬ್ದಾರಿ ಅವಶ್ಯಕತೆ ಇದೆ. 2028ಕ್ಕೆ ಸಂಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಮಾತನಾಡಿ, ಹಾರೋಹಳ್ಳಿ ತಾಲ್ಲೂಕಿನೆಲ್ಲೆಡೆ ಪಕ್ಷ ಸಂಘಟನೆ ಅಗತ್ಯ. ಅದಕ್ಕಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಹಲವು ಪಿತೂರಿಗಳಿಂದ ಸೋತಿದ್ದೇವೆ. ಅದು ಮುಂದೆ ಪುನರಾವರ್ತನೆ ಆಗುವುದಿಲ್ಲ ಎಂದರು.
‘ಕುಮಾರಣ್ಣ ಯಾವ ಜಮೀನನ್ನು ಬರೆಸಿಕೊಂಡಿಲ್ಲ. ಆದರೆ, ಈಗಿನ ಶಾಸಕರು ಎಕರೆಗಟ್ಟಲೆ ಜಮೀನನ್ನು ಹೊಡೆದಿದ್ದಾರೆ’ ಎಂದು ಆರೋಪಿಸಿದರು.
ಶಿವಲಿಂಗಪ್ಪ, ಮೇಡಮಾರನಹಳ್ಳಿ ಕುಮಾರ್, ಕೆಂಪಣ್ಣ, ಜಿಸಿಬಿ ಕರಿಯಪ್ಪ, ರಾಮು, ತಮ್ಮಯ್ಯಣ್ಣ, ರಂಗಪ್ಪ, ಸಿದ್ದರಾಜು, ಶಿವರುದ್ರ, ಶೇಷಾದ್ರಿ ರಾಮು, ಪ್ರದೀಪ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.