ADVERTISEMENT

ಖಾಸಗಿ ಶಾಲೆ ಪ್ರವೇಶಕ್ಕೆ ಎಳ್ಳುನೀರು

ಆರ್‌ಟಿಇ: ಈ ವರ್ಷ ಜಿಲ್ಲೆಯ 26 ಅನುದಾನಿತ ಶಾಲೆಗಳಲ್ಲಷ್ಟೇ ಪ್ರವೇಶ

ಆರ್.ಜಿತೇಂದ್ರ
Published 3 ಮೇ 2019, 19:31 IST
Last Updated 3 ಮೇ 2019, 19:31 IST
   

ರಾಮನಗರ: ಶಿಕ್ಷಣ ಹಕ್ಕು ಕಾಯ್ದೆಯ ಅಡಿ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶಾತಿಗೆ ರಾಜ್ಯ ಸರ್ಕಾರ ಈ ಶೈಕ್ಷಣಿಕ ವರ್ಷದಿಂದ ಕೆಲವು ನಿಬಂಧನೆಗಳನ್ನು ಹೇರಿದೆ. ಪರಿಣಾಮವಾಗಿ ಜಿಲ್ಲೆಯಲ್ಲಿ ಯಾವೊಂದು ಖಾಸಗಿ ಶಾಲೆಯಲ್ಲೂ ಸೀಟು ಲಭ್ಯವಿಲ್ಲದಾಗಿದೆ.

ಈ ವರ್ಷದಿಂದ ಅನ್ವಯವಾಗುವಂತೆ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತಂದಿದೆ. ಅದರ ಅನ್ವಯ ಸರ್ಕಾರಿ ಶಾಲೆ ಇಲ್ಲದಿದ್ದ ಕಡೆ ಮಾತ್ರ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಎಲ್ಲ ಕಡೆ ಸರ್ಕಾರಿ ಶಾಲೆಗಳು ಇರುವ ಕಾರಣ ಯಾವುದೇ ಖಾಸಗಿ ಶಾಲೆಯನ್ನು ಇದರ ವ್ಯಾಪ್ತಿಗೆ ತಂದಿಲ್ಲ.

ಅನುದಾನಿತ ಶಾಲೆಗಳಲ್ಲಿ ಅವಕಾಶ: ಈ ವರ್ಷ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳ ಜೊತೆಗೆ ಅನುದಾನಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಅಡಿ ಪ್ರವೇಶ ಮಾಡಿಕೊಡಲಾಗಿತ್ತು. ಜಿಲ್ಲೆಯಲ್ಲಿ ಅಂತಹ 26 ಶಾಲೆಗಳಲ್ಲಿ ಪ್ರವೇಶಾತಿಗೆ ಅವಕಾಶ ದೊರೆತಿತ್ತು.

ADVERTISEMENT

ನೀರಸ ಪ್ರತಿಕ್ರಿಯೆ: ಆರ್‌ಟಿಇ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಮುಗಿದಿದ್ದು, ಪೋಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಈ ವರ್ಷ ರಾಜ್ಯದಲ್ಲಿ ಆರ್‌ಟಿಇ ಅಡಿ ಸೀಟು ಕೋರಿ ಕೇವಲ 18,180 ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲಾವಾರು ಮಾಹಿತಿ ಇನ್ನೂ ದೊರೆತಿಲ್ಲ. ಒಟ್ಟಾರೆ ಬೇಡಿಕೆಯೇ ಕುಸಿದಿದೆ’ ಎಂದು ಆರ್‌ಟಿಇ ಜಿಲ್ಲಾ ನೋಡಲ್‌ ಅಧಿಕಾರಿ ಸೋಮಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನುದಾನಿತ ಶಾಲೆಗಳಲ್ಲಿ ಈಗಲೂ ಆರ್‌ಟಿಇ ಅಡಿ ಪ್ರವೇಶ ಸಿಗುತ್ತದೆ. ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಯಾರಿಗೂ ಪ್ರವೇಶ ನಿರಾಕರಿಸಲು ಆಗದು’ ಎಂದರು.

ಅನುದಾನ ಉಳಿತಾಯ: ಜಿಲ್ಲೆಯಲ್ಲಿ ಶಿಕ್ಷಣ ಹಕ್ಕಿನಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆಯು ಪ್ರತಿ ವರ್ಷ ₨10–12 ಕೋಟಿ ಶುಲ್ಕ ಪಾವತಿ ಮಾಡುತ್ತಾ ಬಂದಿದೆ. ಮುಂದೆ ಈ ಅನುದಾನ ಹಂತಹಂತವಾಗಿ ಕಡಿಮೆ ಆಗಲಿದೆ. ಇದೇ ಹಣವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಲು ಇಲಾಖೆಯು ನಿರ್ಧರಿಸಿದೆ.

‘ಖಾಸಗಿ ಶಾಲೆಗಳಿಗೆ ಪ್ರತಿಯಾಗಿ ಸರ್ಕಾರವು ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಈ ವರ್ಷ ಇಂತಹ 16 ಶಾಲೆಗಳು ಆರಂಭ ಆಗುತ್ತಿವೆ. ಜೊತೆಗೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗಳ ಸಂಖ್ಯೆಯನ್ನೂ ಸರ್ಕಾರ ಹೆಚ್ಚಿಸಿದೆ. ಇದರಿಂದ ಖಾಸಗಿ ಶಾಲೆಗಳ ಮೋಹ ಕಡಿಮೆ ಆಗಿ ಸರ್ಕಾರಿ ಶಾಲೆಗಳತ್ತ ಜನರು ಮನಸ್ಸು ಮಾಡಲಿದ್ದಾರೆ’ ಎಂದು ಸೋಮಶೇಖರ್ ಹೇಳಿದರು.

ಪೋಷಕರ ಮಿಶ್ರ ಪ್ರತಿಕ್ರಿಯೆ

ಖಾಸಗಿ ಶಾಲೆಗಳಲ್ಲಿ ಆರ್‌ಟಿಸಿ ಸೀಟು ಕಡಿತಗೊಳಿಸಿರುವ ಕ್ರಮಕ್ಕೆ ಪೋಷಕ ವರ್ಗದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಆರ್‌ಟಿಇ ಹೆಸರಿನ ಅಡಿಯಲ್ಲಿ ಸರ್ಕಾರವೇ ಖಾಸಗಿ ಶಾಲೆಗಳಿಗೆ ದೇಣಿಗೆ ನೀಡುವಂತಾಗಿತ್ತು. ಈಗ ಅದು ತಪ್ಪಿದೆ. ಬದಲಿಗೆ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆದಿರುವುದು ಒಳ್ಳೆಯ ನಿರ್ಧಾರ. ಆರ್‌ಟಿಇಗೆ ಮೀಸಲಿಟ್ಟ ಹಣವನ್ನೇ ಬಳಸಿಕೊಂಡು ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕು’ ಎಂದು ಐಜೂರು ನಿವಾಸಿ ಶ್ರೀನಿವಾಸ್‌ ಹೇಳಿದರು.

‘ಬಡವರು ಪ್ರತಿಷ್ಠಿತ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವುದು ಕಷ್ಟ. ಆರ್‌ಟಿಇಯಿಂದ ಅದು ಸಾಧ್ಯವಾಗಿತ್ತು. ಆದರೆ ಸರ್ಕಾರ ಸುಧಾರಣೆ ಹೆಸರಲ್ಲಿ ಆ ಅವಕಾಶ ಕಿತ್ತುಕೊಂಡಿರುವುದು ಖಂಡನೀಯ. ಇದರಿಂದ ಬಡ ಮತ್ತು ಶ್ರೀಮಂತ ವಿದ್ಯಾರ್ಥಿಗಳ ಅಂತರ ಇನ್ನಷ್ಟು ಹೆಚ್ಚಲಿದೆ’ ಎಂದು ವಿವೇಕಾನಂದನಗರ ನಿವಾಸಿ ಶಂಕರ್ ಬೇಸರ ವ್ಯಕ್ತಪಡಿಸಿದರು.

*ಈ ವರ್ಷ ಆರ್‌ಟಿಇ ಅಡಿ ಜಿಲ್ಲೆಯಲ್ಲಿ 26 ಅನುದಾನಿತ ಶಾಲೆಗಳಲ್ಲಿ ಮಾತ್ರ ಪ್ರವೇಶಾತಿಗೆ ಅವಕಾಶ ನೀಡಲಾಗಿತ್ತು. ಕಡಿಮೆ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ
–ಸೋಮಲಿಂಗಯ್ಯ,ಜಿಲ್ಲಾ ನೋಡಲ್‌ ಅಧಿಕಾರಿ, ಆರ್‌ಟಿಇ

ಅಂಕಿ–ಅಂಶ
165–ಕಳೆದ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯಲ್ಲಿ ಆರ್‌ಟಿಇ ಅಡಿ ಪ್ರವೇಶ ನೀಡಿದ ಖಾಸಗಿ ಶಾಲೆಗಳು
2172–ಕಳೆದ ಸಾಲಿನಲ್ಲಿ ಲಭ್ಯವಿದ್ದ ಆರ್‌ಟಿಇ ಸೀಟುಗಳು
1741–ಆರ್‌ಟಿಇ ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳು

ತಾಲ್ಲೂಕುವಾರು ಅನುದಾನಿತ ಶಾಲೆಗಳು
ರಾಮನಗರ–6
ಚನ್ನಪಟ್ಟಣ–4
ಕನಕಪುರ–10
ಮಾಗಡಿ–6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.