ADVERTISEMENT

ಅಲೆಮಾರಿ ಅಭಿವೃದ್ಧಿ ನಿಗಮದ ತಂಡ ಇರುಳಿಗರ ಕಾಲೊನಿಗೆ ಭೇಟಿ

ಇರುಳಿಗರ ಸ್ಥಿತಿಗತಿ ಅಧ್ಯಯನ, ಕುಂದುಕೊರತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 14:24 IST
Last Updated 26 ಜೂನ್ 2025, 14:24 IST
ಕನಕಪುರ ಕಸಬಾ ಹೋಬಳಿ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಬಳಿಯ ಇರುಳಿಗರ ಕಾಲೊನಿಗೆ ಬುಧವಾರ ಅಲೆಮಾರಿ ಅಭಿವೃದ್ಧಿ ನಿಗಮದ ತಂಡ ಭೇಟಿ ನೀಡಿ ಇರುಳಿಗರ ಸ್ಥಿತಿಗತಿ ಅಧ್ಯಯನ ಮತ್ತು ಕುಂದುಕೊರತೆಗಳ ಕುರಿತು ಚರ್ಚಿಸಿದರು. ನಿಗಮದ ಅಧ್ಯಕ್ಷೆ ಪಲ್ಲವಿ ಇತರರು ಇದ್ದರು
ಕನಕಪುರ ಕಸಬಾ ಹೋಬಳಿ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಬಳಿಯ ಇರುಳಿಗರ ಕಾಲೊನಿಗೆ ಬುಧವಾರ ಅಲೆಮಾರಿ ಅಭಿವೃದ್ಧಿ ನಿಗಮದ ತಂಡ ಭೇಟಿ ನೀಡಿ ಇರುಳಿಗರ ಸ್ಥಿತಿಗತಿ ಅಧ್ಯಯನ ಮತ್ತು ಕುಂದುಕೊರತೆಗಳ ಕುರಿತು ಚರ್ಚಿಸಿದರು. ನಿಗಮದ ಅಧ್ಯಕ್ಷೆ ಪಲ್ಲವಿ ಇತರರು ಇದ್ದರು   

ಕನಕಪುರ: ಈ ನೆಲದ ಮೂಲ ನಿವಾಸಿಗಳಿಗೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಮೂಲ ಸೌಕರ್ಯಗಳು ದೊರಕುತ್ತಿಲ್ಲ. ಅದನ್ನು ದೊರಕಿಸಿಕೊಡುವ ಕೆಲಸ ಅಧಿಕಾರಿಗಳು ಮಾಡಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದರು.

ಕಸಬಾ ಹೋಬಳಿ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಬಳಿಯ ಇರುಳಿಗರ ಕಾಲೊನಿಗೆ ಬುಧವಾರ ಅಭಿವೃದ್ಧಿ ನಿಗಮದ ತಂಡ ಭೇಟಿ ನೀಡಿ ಇರುಳಿಗರ ಸ್ಥಿತಿಗತಿ ಅಧ್ಯಯನ ಮತ್ತು ಕುಂದು ಕೊರತೆಗಳ ಕುರಿತು ಚರ್ಚಿಸಿದರು.

ಹಾಡಿಗಳಲ್ಲಿ ಬದುಕುತ್ತಿರುವ ಬುಡಕಟ್ಟು ಜನರಿಗೆ ಸರ್ಕಾರಿ ದಾಖಲೆಗಳೇ ಇಲ್ಲ. ಅದರಿಂದ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಸರ್ಕಾರವು ವಿಶೇಷವಾಗಿ ಪರಿಗಣಿಸಿ ದಾಖಲೆಗಳನ್ನು ನೀಡುವಂತೆ ಸೂಚಿಸಿದೆ. ಆದರೆ, ಈವರೆಗೂ ಯಾರಿಗೂ ದಾಖಲೆಗಳು ದೊರೆತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಬುಡಕಟ್ಟು ಜನರು ಸರ್ಕಾರಿ ದಾಖಲೆಗಳನ್ನು ಪಡೆದು, ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಕಡ್ಡಾಯವಾಗಿ ಶಿಕ್ಷಣ ಪಡೆದು ಸಂವಿಧಾನವನ್ನು ಅರಿತಾಗ ಮಾತ್ರ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ತಿಳಿಸಿದರು.

ತಾಲ್ಲೂಕು ಆಡಳಿತವು ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿ ವಿಶೇಷ ಸಭೆಗಳನ್ನು ನಡೆಸಿ ಅವರ ಸ್ಥಿತಿಗತಿಗಳನ್ನು ಅರಿತು ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕು. ಅವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಗುರಿತಿನ ಚೀಟಿ, ಸರ್ಕಾರಿ ದಾಖಲೆಗಳನ್ನು ತ್ವರಿತವಾಗಿ ನೀಡಬೇಕು ಎಂದು ಹೇಳಿದರು.

ಕಾಲೊನಿಗೆ ನಿಗಮದ ಅಧಿಕಾರಿಗಳು ಭೇಟಿ ನೀಡಿದಾಗ ಮಾತ್ರ ಎಲ್ಲಾ ಅಧಿಕಾರಿಗಳು ಬಂದು ನಮ್ಮ ಸಮಸ್ಯೆಗಳನ್ನು ಕೇಳಿ ಹೋಗುತ್ತಾರೆ. ಆದರೆ ನಮಗೆ ಮತ್ತೆ ಸ್ಪಂದಿಸುತ್ತಿಲ್ಲ ಎಂದು ಹಾಡಿ ಜನರು ಅಳಲು ತೋಡಿಕೊಂಡರು.

ನಾನು ನಿಮ್ಮ ಕಷ್ಟವನ್ನು ದೂರ ಮಾಡಿ, ಸರ್ಕಾರದಿಂದ ನಿಮಗೆ ಮೂಲ ಸೌಕರ್ಯ ಕೊಡಸುವ ಉದ್ದೇಶದಿಂದ ಬಂದಿದ್ದೇನೆ ಎಂದು ತಿಳಿಸಿ ಸ್ಥಳದಲ್ಲಿ ಸಮಿತಿ ರಚಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ತಹಶೀಲ್ದಾರ್ ಮಂಜುನಾಥ್ ಮತ್ತು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಕುಮಾರ್ ಹಾಡಿಯ ಜನರಿಂದ ಅರ್ಜಿ ಸ್ವೀಕರಿಸಿ ಪರಿಶೀಲನೆ ನಡೆಸಿ ತ್ವರಿತವಾಗಿ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡುವಂತೆ ಸೂಚಿಸಿದರು.

ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಕಾನೂನಿನ ನಿಯಮದಂತೆ ನೀವು ಅರ್ಜಿ ಸಲ್ಲಿಸಿದರೆ ಅರಣ್ಯ ಮತ್ತು ಕಂದಾಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ನಿವೇಶನ ಮತ್ತು ಸಾಗುವಳಿ ಹಕ್ಕುಪತ್ರಗಳನ್ನು ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಸಂಗೀತ ನಿರ್ದೇಶಕ ಹಂಸಲೇಖ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದಕುಮಾರ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಯಪ್ರಕಾಶ್, ಪಿಡಿಒ ಮುನಿಮಾರೇಗೌಡ, ಸದಸ್ಯರಾದ ವಿಶ್ವಕಾಂತ್, ಮಂಗಳ ಪುಟ ಸ್ವಾಮಿ, ಹೊಸಕೋಟೆ ಕುಮಾರ್, ಶ್ರೀನಿವಾಸ್, ಶಿವರಾಜು, ವೆಂಕಟರಮಣ, ರಾಜು.ಸಿ.ಎಸ್, ಗೋವಿಂದಸ್ವಾಮಿ, ರವಿ. ಸಿ, ಶಿವಕುಮಾರ್.ಟಿ.ಬಿ, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.