ರಾಮನಗರ: ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆರ್.ಕೆ. ಬೈರಲಿಂಗಯ್ಯ, ಖಜಾಂಚಿ ಸ್ಥಾನಕ್ಕೆ ಟಿ. ನರಸಯ್ಯ, ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಕೆ. ಸತೀಶ್ ಅವರು ಚುನಾವಣಾಧಿಕಾರಿ ಕೆ. ಕರೀಗೌಡ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮೂರು ಸ್ಥಾನಗಳಿಗೆ ಇದೇ 11ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಇಲ್ಲಿನ ಸ್ಪೂರ್ತಿ ಭವನದಲ್ಲಿ ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆ ಕಾರ್ಯವು ನಡೆಯಲಿದೆ. ಇದೇ 6 ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕಡೆಯ ದಿನವಾಗಿದೆ. ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ 62 ನಿರ್ದೇಶಕರು ಹಾಗೂ ಮೂರು ತಾಲ್ಲೂಕು ಘಟಕಗಳ ಅಧ್ಯಕ್ಷರು ಸೇರಿ ಚುನಾವಣೆಯಲ್ಲಿ 65 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ.
‘ನಮ್ಮ ಸಿಂಡಿಕೇಟ್ ನ 58ಕ್ಕೂ ಹೆಚ್ಚು ನಿರ್ದೇಶಕರು ಚುನಾವಣೆಯಲ್ಲಿ ಹಾಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಮ್ಮ ತಂಡ ಬಹುಮತದಿಂದ ಆಯ್ಕೆಯಾಗಲಿದೆ’ ಎಂದು ನಾಮಪತ್ರ ಸಲ್ಲಿಕೆ ಸಂದರ್ಭ ಆರ್.ಕೆ. ಬೈರಲಿಂಗಯ್ಯ ತಿಳಿಸಿದರು.
‘ಸರ್ಕಾರಿ ನೌಕರರ ಸಂಘವನ್ನು ಮತ್ತಷ್ಟು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಲಿದ್ದೇವೆ. ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಆದ್ದರಿಂದ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿ ಸಂಘಟನೆಯನ್ನು ಇನ್ನಷ್ಟು ಶಕ್ತಿಗೊಳಿಸಲು ನಿರ್ದೇಶಕರು ಶಕ್ತಿ ತುಂಬಲಿದ್ದಾರೆ’ ಎಂದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ಬಸವರಾಜಪ್ಪ, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಶಿವಸ್ವಾಮಿ, ಎಂ. ರಾಜೇಗೌಡ, ಎಂ. ಪುಟ್ಟಸ್ವಾಮಿ, ಡಿ. ಪುಟ್ಟಸ್ವಾಮಿಗೌಡ, ಕೆ.ವಿ. ಯೋಗೇಶ್ ಗೌಡ, ಸಂಜೀವೇಗೌಡ, ರಾಜಶೇಖರಮೂರ್ತಿ, ಹೊನ್ನಯ್ಯ, ಮಂಜುನಾಥ್, ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.