ADVERTISEMENT

ಅತೃಪ್ತ ಶಾಸಕರ ಅಣುಕು ಶವಯಾತ್ರೆ

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 13:51 IST
Last Updated 11 ಜುಲೈ 2019, 13:51 IST
ರಾಜೀನಾಮೆ ನಾಟಕವಾಡುತ್ತಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಅಣುಕು ಶವಯಾತ್ರೆ ನಡೆಸಿದರು
ರಾಜೀನಾಮೆ ನಾಟಕವಾಡುತ್ತಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಅಣುಕು ಶವಯಾತ್ರೆ ನಡೆಸಿದರು   

ಚನ್ನಪಟ್ಟಣ: ಜನಸಾಮಾನ್ಯರ ಆಶೋತ್ತರಗಳಿಗೆ ಬೆಲೆ ನೀಡದೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ರಾಜೀನಾಮೆ ನಾಟಕವಾಡುತ್ತಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಗುರುವಾರ ಶಾಸಕರ ಅಣುಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ರಾಜ್ಯದಲ್ಲಿ ನಾನಾ ರೀತಿ ಸಮಸ್ಯೆಗಳು ತಲೆದೋರಿವೆ. ಅಂತಹ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ರಾಜೀನಾಮೆ ನೀಡಬೇಕಿದ್ದ ಶಾಸಕರು ಸ್ವಾರ್ಥಕ್ಕಾಗಿ ರಾಜೀನಾಮೆ ನಾಟಕವಾಡುತ್ತಿದ್ದಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ವೈಜ್ಞಾನಿಕ ಬೆಲೆ ಸಿಗದೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಮೇಕೆದಾಟು, ಎತ್ತಿನಹೊಳೆ, ಕಳಸ – ಬಂಡೂರಿ ಯೋಜನೆಗಳು ಜಾರಿಯಾಗುತ್ತಿಲ್ಲ. ಇದಕ್ಕೆ ಆಗ್ರಹಿಸಿ ರಾಜೀನಾಮೆ ನೀಡಬೇಕಿದ್ದ ಶಾಸಕರು, ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ. ಇವರು ರಾಜ್ಯದ ಪಾಲಿಗೆ ಸತ್ತು ಹೋಗಿದ್ದಾರೆ. ಹಾಗಾಗಿ ಅತೃಪ್ತ ಶಾಸಕರ ಶವಯಾತ್ರೆ ಮಾಡುತ್ತಿದ್ದೇವೆ ಎಂದು ಕಿಡಿಕಾಡಿದರು.

ADVERTISEMENT

ಕೋಲಾರಕ್ಕೆ ಕೊಳಚೆ ನೀರು ಸಂಸ್ಕರಿಸಿ ಕೊಡುವ ಕೆ.ಸಿ.ವ್ಯಾಲಿ ಯೋಜನೆಗೆ ಸುಪ್ರೀಂ‌ಕೋರ್ಟ್ ಅಡ್ಡಗಾಲು ಹಾಕಿದೆ. ಇದರ ಬಗ್ಗೆ ಸದನದಲ್ಲಿ ದನಿ ಎತ್ತಲಿಲ್ಲ. ರಾಜ್ಯದಲ್ಲಿ ಅನೇಕ ಅಮಾಯಕ ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲು ಆಗ್ರಹಿಸಿ ರಾಜೀನಾಮೆ ನೀಡಲಿಲ್ಲ. ಜನರ ಅಭಿಪ್ರಾಯ ಧಿಕ್ಕರಿಸಿ ರೆಸಾರ್ಟ್ ರಾಜಕಾರಣಕ್ಕೆ, ಕುದುರೆ ವ್ಯಾಪಾರದತ್ತ ಮುಖ ಮಾಡಿದ್ದಾರೆ. ಇವರು ರಾಜ್ಯದ ಪಾಲಿಗೆ ಸತ್ತಂತೆಯೇ ಸರಿ ಎಂದರು.‌

ರಾಜಕಾರಣದ ಗೊಂದಲಗಳಿಗೆ ಮೂರು ಪಕ್ಷಗಳು ಕಾರಣವಾಗಿವೆ. ಮೊದಲು ಕುಟುಂಬ ರಾಜಕಾರಣ ತೊಲಗಬೇಕು. ಜನಪರ ಆಡಳಿತ ನೆಲೆಯಾಗಬೇಕು. ಈ ಕೂಡಲೇ ಅರಾಜಕತೆ ತೊಲಗಿ ಉತ್ತಮ ಸಮಾಜ ನಿರ್ಮಾಣ ಆಗಬೇಕು ಎಂದು ಒತ್ತಾಯಿಸಿದರು.

ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಗೌಡ, ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀಧರ್, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಮಂಗಳಮ್ಮ, ಪದಾಧಿಕಾರಿಗಳಾದ ಜಗದಾಪುರ ಕೃಷ್ಣೇಗೌಡ, ರಂಜಿತ್ ಗೌಡ, ಸಿದ್ದರಾಮು, ರಾಂಬೋ ಸುರೇಶ್, ಎಂ.ಬಿ.ಕೃಷ್ಣ, ಕೃಷ್ಣಪ್ರಸಾದ್, ಮಾಲೂರು ಹರೀಶ್, ಶ್ರೀನಿವಾಸಪುರ ಮಣಿ, ವೆಂಕಟೇಶ್, ಶ್ರೀನಿವಾಸ್, ಮಂಗಳವಾರಪೇಟೆ ಸತೀಶ್, ಮಂಗಳವಾರಪೇಟೆ ಪ್ರಕಾಶ್, ನಾಗೇಶ್, ಮಹಿಳಾ ಪದಾಧಿಕಾರಿ ರೋಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.