ADVERTISEMENT

ರಾಮನಗರ|ಓಬವ್ವನ ಹೋರಾಟ ಸ್ಫೂರ್ತಿದಾಯಕ: ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:26 IST
Last Updated 12 ನವೆಂಬರ್ 2025, 2:26 IST
<div class="paragraphs"><p>ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮಂಗಳವಾರ ಹಮ್ಮಿಕೊಂಡಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಓಬವ್ವನ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು</p></div>

ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮಂಗಳವಾರ ಹಮ್ಮಿಕೊಂಡಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಓಬವ್ವನ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು

   

ರಾಮನಗರ: ‘ಚಿತ್ರದುರ್ಗದ ಏಳು ಸುತ್ತಿನ ಕೋಟೆ ಹಾಗೂ ಆ ಸಂಸ್ಥಾನದ ರಕ್ಷಣೆಗೆ ಪ್ರಾಣದ ಹಂಗು ತೊರೆದು ಹೋರಾಡಿದ ವೀರ ನಾರಿ ಒನಕೆ ಓಬವ್ವನ ಕೆಚ್ಚೆದೆಯ ಹೋರಾಟ ಪ್ರೇರಣದಾಯಕವಾಗಿದೆ. ಹೆಣ್ಣು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಶತ್ರುಗಳ ವಿರುದ್ಧ ಹೋರಾಡಬಲ್ಲರು ಎಂಬುದಕ್ಕೆ ಓಬವ್ವನಿಗಿಂತ ದೊಡ್ಡ ನಿದರ್ಶನ ಮತ್ತೊಂದಿಲ್ಲ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಬಣ್ಣಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಫಾಟಿಸಿ, ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ADVERTISEMENT

‘ಕೆಲವರ ಒಳ ಸಂಚಿನಿಂದಾಗಿ ಕೋಟೆಯ ಹಿಂಭಾಗದಿಂದ ಚಿತ್ರದುರ್ಗವನ್ನು ವಶಪಡಿಸಿಕೊಳ್ಳಲು ಹೈದರ್‌ ಅಲಿ ದಾಳಿ ಮಾಡುತ್ತಾನೆ. ಶತ್ರುಗಳು ಕೋಟೆ ಒಳಕ್ಕೆ ನುಸುಳುತ್ತಿರುವುದನ್ನು ಗಮನಿಸಿದ ಓಬವ್ವ, ಕೋಟೆಯ ಕಿಂಡಿಯಿಂದ ನುಸುಳಿದ ಸೈನಿರನ್ನು ಕೊಂದು ನಾಯಕರ ಸಂಸ್ಥಾನವನ್ನು ರಕ್ಷಿಸಿದಳು’ ಎಂದು ಹೇಳಿದರು.

‘ಹಿಂದೆ ಹೆಣ್ಣನ್ನು ತೀರಾ ಕಡೆಗಣಿಸುತ್ತಿದ್ದ ಕಾಲವೀಗ ಬದಲಾಗಿದೆ. ಹೆಣ್ಣು ಈಗ ತೊಟ್ಟಿಲು ತೂಗುವುದರಿಂದಿಡಿದು ದೇಶ ಆಳುವವರೆಗೆ ಬೆಳೆದಿದ್ದಾರೆ. ಹೆಣ್ಣು ಮತ್ತು ಗಂಡಿನ ನಡುವೆ ಇದ್ದ ತಾರತಮ್ಯದ ಗೆರೆಗಳು ಇದೀಗ ಅಳಿಸಿವೆ. ಗಂಡಿನಂತೆ ಹೆಣ್ಣು ಕೂಡ ಸರಿಸಮಾನಳು ಎಂಬುದಕ್ಕೆ ಎಲ್ಲಾ ಕ್ಷೇತ್ರಗಳಲ್ಲೂ ಅವರು ಮಾಡಿರುವ ಸಾಧನೆಯೇ ಸಾಕ್ಷಿ’ ಎಂದು ತಿಳಿಸಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಡಾ. ಲೋಕೇಶ್ ಮೌರ್ಯ ಮಾತನಾಡಿ, ‘ಬ್ರಿಟಿಷರನ್ನೇ ಸೋಲಿಸಿದ್ದ ಹೈದರ್‌ ಅಲಿ ಪಡೆಯನ್ನೇ ಎದುರಿಸಿದ ದಿಟ್ಟ ಮಹಿಳೆ ಒನಕೆ ಓಬವ್ವ. ಅಂದು ತನ್ನ ಸಂಸ್ಥಾನವನ್ನು ಕಾಪಾಡಲು ಟೊಂಕ ಕಟ್ಟಿ ನಿಂತಿದ್ದಳು. ಆಕೆಯ ಹೋರಾಟದಿಂದಾಗಿ ಕೋಟೆಯುವ ಹೈದರ್ ಅಲಿ ಕೈವಶವಾಗುವುದು ತಪ್ಪಿತು’ ಎಂದರು.

‘ಮದಕರಿ ನಾಯಕ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೈದರಾಲಿ ಚಿತ್ರದುರ್ಗದ ಕೋಟೆ ವಶಪಡಿಸಿಕೊಳ್ಳಲು ಯತ್ನಿಸಿದ. ಬ್ರಿಟಿಷರಿಗೆ ಸೋಲುಣಿಸಿದ್ದ ಹೈದರ್‌ ಅಲಿ 1766ರಲ್ಲಿ ಮದಕರಿ ನಾಯಕರ ಮೇಲೆ 4 ಬಾರಿ ಯುದ್ಧಕ್ಕೆ ಯತ್ನಿಸಿದ. ಚಿತ್ರದುರ್ಗದ ಕೋಟೆ 203 ಬಾಗಿಲುಗಳನ್ನು ಒಳಗೊಂಡಿದ್ದು, 101 ಕಳ್ಳ ಬಾಗಿಲನ್ನು ಹೊಂದಿತ್ತು. ಅದನ್ನು ವಶಪಡಿಸಿಕೊಳ್ಳಲು ವಿಫಲನಾದ ಹೈದರ್ 4 ತಿಂಗಳು ಕೋಟೆಯ ಮುಂದೆಯೇ ಬೀಡು ಬಿಟ್ಟಿದ್ದ’ ಎಂದು ಹೇಳಿದರು.

‘ಕೋಟೆ ಬೇಧಿಸಲು ರಾಯದುರ್ಗ ಹಾಗೂ ಹರಪನಹಳ್ಳಿ ಸಂಸ್ಥಾನದ ನೆರವು ಪಡೆದಿದ್ದ. ಹೀಗಿರುವಾಗ ಕಳ್ಳಗಿಂಡಿಯ ಮೂಲಕ ಮಹಿಳೆಯೊಬ್ಬಳು ಹಾಲು ತೆಗೆದುಕೊಂಡು ಹೋದದ್ದನ್ನು ಗಮನಿಸಿದ ಹೈದರ್‌ ಸೈನಿಕರು ಕಳ್ಳದಾರಿಯನ್ನು ಕಂಡುಕೊಂಡು ದಾಳಿ ನಡೆಸಲು ಯತ್ನಿಸಿದರು. ಆಗ ಓಬವ್ವನ ಪತಿ ಕಹಳೆ ಮುದ್ದು ಹನುಮಪ್ಪ ಮಧ್ಯಾಹ್ನಊಟಕ್ಕೆ ಮನೆಗೆ ಬಂದಿದ್ದ. ಪತಿಗೆ ಊಟ ಬಡಿಸಿದ ಓಬವ್ವ ನೀರು ತರಲೆಂದು ಕೊಳಕ್ಕೆ ಹೋಗುವಾಗ ಹೈದರ್‌ನ ಸೈನಿಕರನ್ನು ಗಮನಿಸಿದಳು’ ಎಂದು ಚರಿತ್ರೆಯನ್ನು ನೆನೆದರು.

‘ಸೈನಿಕರು ನುಸುಳುತ್ತಿರುವ ವಿಷಯವನ್ನು ಗಂಡನಿಗೆ ಹೇಳಬೇಕು ಅಂದುಕೊಂಡ ಓಬವ್ವ, ಊಟ ಮಾಡುತ್ತಿದ್ದ ಪತಿಗೆ ತೊಂದರೆ ಕೊಡಬಾರದೆಂದು ಯೋಚಿಸಿದಳು. ಮನೆ ಬಳಿ ಇದ್ದ ಒನಕೆ ಹಿಡಿದು ಕಾಳಿಯಂತೆ ಹೈದರ್‌ನ ಸೈನಿಕರನ್ನು ಚೆಂಡಾಡಿದಳು. ಯಾವುದೇ ಯುದ್ಧ ಕೌಶಲ್ಯವಿಲ್ಲದ ಓಬವ್ವ, ತನ್ನ ಸಂಸ್ಥಾನದ ರಕ್ಷಣೆಗೆ ಏಕಾಂಗಿ ಹೋರಾಟ ಮಾಡಿ ಶತ್ರುಗಳನ್ನು ಹಿಮ್ಮೆಟ್ಟಿಸಿದಳು’ ಎಂದು ಕೊಂಡಾಡಿದರು.

ಮುಖಂಡ ಶಿವಶಂಕರ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಸತೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಲಾವಿದ ಶ್ರೀನಿವಾಸ್ ಗಣ್ಯರನ್ನು ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪೌರಾಯುಕ್ತ ಡಾ. ಜಯಣ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಕೌಶಲಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಪುಷ್ಪಲತಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಎಸ್. ಕುಮಾರ್, ಹಿಂದುಳಿದ ವರ್ಗಗಳ ಮುಖಂಡರಾದ ಆರ್. ರಂಗಪ್ಪ, ಎಸ್‌ಡಿಎಂಸಿ ಜಿಲ್ಲಾಧ್ಯಕ್ಷ ವೆಂಕಟೇಶ್, ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ಮುಖಂಡರಾದ ಚಲುವರಾಜು, ಶಿವಕುಮಾರ ಸ್ವಾಮಿ, ಹರೀಶ್ ಬಾಲು, ಚಂದ್ರಪ್ಪ, ಶಿವಪ್ರಕಾಶ್, ಸೈಯದ್, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರು ಇದ್ದರು.

‘ಕೋಟೆ ರಕ್ಷಣೆ ತನ್ನ ಕರ್ತವ್ಯ ಎಂದಿದ್ದ ಓಬವ್ವ’

‘ಎಷ್ಟು ಹೊತ್ತಾದರೂ ಪತ್ನಿ ಬಾರದಿದ್ದರಿಂದ ಹೊರಕ್ಕೆ ಬಂದ ಹನುಮಪ್ಪ ಕೋಟೆ ರಕ್ಷಣೆಗೆ ರಣಚಂಡಿಯಂತೆ ಹೋರಾಡುತ್ತಿದ್ದ ಪತ್ನಿಯನ್ನು ನೋಡಿದ. ಕೂಡಲೇ ಸೈನಿಕರು ನುಸುಳಿರುವ ಕುರಿತು ಸೇನೆಗೆ ವಿಷಯ ಮುಟ್ಟಿಸಿದ. ನಂತರ ನಡೆದ ಕಾಳಗದಲ್ಲಿ ಮದಕರಿ ನಾಯಕ ಗೆಲುತ್ತಾನೆ. ಸಿನಿಮಾದಲ್ಲಿ ತೋರಿಸಿರುವಂತೆ ಓಬವ್ವನ ಅಂತ್ಯ ಅದೇ ಕಾಳಗದಲ್ಲಿ ಆಗಿರಲಿಲ್ಲ. ಕೋಟೆ ರಕ್ಷಿಸಿದ್ದಕ್ಕಾಗಿ ಏನು ಉಡುಗೊರೆ ಬೇಕು ಎಂದು ಮದಕರಿ ನಾಯಕ ಕೇಳಿದಾಗ ಓಬವ್ವ ಏನನ್ನೂ ಕೇಳಿರಲಿಲ್ಲ. ಬದಲಿಗೆ ಕೋಟೆ ರಕ್ಷಣೆ ತನ್ನ ಕರ್ತವ್ಯ ಎಂದು ಹೇಳಿದ್ದಳು’ ಎಂದು ಡಾ. ಲೋಕೇಶ್ ಮೌರ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.