ADVERTISEMENT

ಪ್ರೇಕ್ಷಕರನ್ನು ಹಿಡಿದಿಟ್ಟ ‘ಯಕ್ಷಾಲಾಪ’

ರಂಗಕರ್ಮಿ ಬೈರೇಗೌಡರಿಂದ ಯಶಸ್ವಿ ಏಕವ್ಯಕ್ತಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 12:51 IST
Last Updated 18 ನವೆಂಬರ್ 2019, 12:51 IST
‘ಯಕ್ಷಾಲಾಪ’ ಏಕವ್ಯಕ್ತಿ ನಾಟಕದ ದೃಶ್ಯ
‘ಯಕ್ಷಾಲಾಪ’ ಏಕವ್ಯಕ್ತಿ ನಾಟಕದ ದೃಶ್ಯ   

ರಾಮನಗರ: ‘ಬರೋಬ್ಬರಿ ಅರವತ್ತು ನಿಮಿಷಗಳ ಕಾಲ ಕಣ್ಣು ಮಿಟುಕಿಸದೆ ಪ್ರೇಕ್ಷಕರನ್ನು ಒಬ್ಬನೇ ವ್ಯಕ್ತಿ ತನ್ನ ಅಭಿನಯದ ಮೂಲಕ ಹಿಡಿದಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಅಂತಹದ್ದೊಂದು ಪ್ರಯತ್ನವನ್ನು ನಾಟಕಕಾರ ಡಾ. ಎಂ. ಬೈರೇಗೌಡ ಸಾಧ್ಯವಾಗಿಸಿದರು. ಅಭಿಜಾತ ಕಲಾವಿದರಾದ ಅವರ ಏಕಾಗ್ರತೆಯ ಧ್ಯೋತಕವಾಗಿ ಯಕ್ಷಾಲಾಪ ಮೂಡಿ ಬಂದಿದೆ’ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಎಂ. ಲಿಂಗಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಮುದ್ದುಶ್ರೀ ದಿಬ್ಬದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಕವಿ ಕಾಳಿದಾಸನ ಮೇಘಧೂತ ಆಧಾರಿತ ಕನ್ನಡ ಅವತರಣಿಕೆಯ ರಂಗರೂಪ ‘ಯಕ್ಷಾಲಾಪ’ ಏಕವ್ಯಕ್ತಿ ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು. ಒತ್ತಡಗಳನ್ನು ನಿವಾರಿಸಿ ಮನಸ್ಸನ್ನು ಹಗುರಗೊಳಿಸುವ ಶಕ್ತಿ ಕಲೆಗಿದೆ. ರಂಗಭೂಮಿಯ ಸಾತಥ್ಯ ಪಡೆದವರು ಜೀವನದಲ್ಲಿನ ಏರುಪೇರುಗಳನ್ನು ಸಮಚಿತ್ತದಿಂದ ನಿವಾರಿಸಿಕೊಳ್ಳುವ ಶಕ್ತಿ ನೀಡಬಲ್ಲದು ಎಂದವರು ಹೇಳಿದರು.

ಏನಿದು ಯಕ್ಷಾಲಾಪ: ಮಣಿಕಂಠನೆಂಬ ಯಕ್ಷ ಅಲಕಾಪುರ ನಿವಾಸಿ. ಕುಬೇರನರಮನೆಯ ಸುಂದರ ಪರಿಸರದಲ್ಲಿ ಅವನ ಮನೆ. ಇಂತಿರಲು ಕುಬೇರನಿಗೆ ಪ್ರಿಯವಾದ ಹೂದೋಟವನ್ನು ಇಂದ್ರನ ಐರಾವತ ಹಾಳುಮಾಡಿತ್ತು. ತೋಟದ ಅಧಿಕಾರಿ ಯಕ್ಷ. ಆತನ ಅಜಾಗರೂಕತೆ ಕಾರಣದಿಂದಲೇ ಹೀಗಾಯಿತೆಂದು ಭಾವಿಸಿದ ಕುಬೇರ ಅವನಿಗೆ ಒಂದು ವರ್ಷದ ಗಡಿಪಾರಿನ ಕಠಿಣ ಶಿಕ್ಷೆ ವಿಧಿಸಿದ. ಆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿದ್ದ ಯಕ್ಷ ತನ್ನ ಶಾಪ ವಿಮೋಚನೆಗೆ ವಿಂಧ್ಯಪರ್ವತ ತಪ್ಪಲಿನ ರಾಮಗಿರಿಯನ್ನು ಆಯ್ದುಕೊಂಡ. ನಂತರ ಯಕ್ಷ ಅನುಭವಿಸುವ ವಿರಹದ ತಾಪವೇ ಯಕ್ಷಾಲಾಪ.

ADVERTISEMENT

ಸಂಸ್ಕೃತ ವಿದ್ವಾನ್ ಪ್ರೊ. ನಾರಾಯಣ ಘಟ್ಟ ಕನ್ನಡೀಕರಿಸಿ ರಂಗರೂಪಕ್ಕಿಳಿಸಿದ್ದಾರೆ. ಎಲ್.ಎನ್. ಮುಕುಂದರಾಜ್ ನಿರೂಪಣಾ ಧ್ವನಿ, ಎಂ.ಎಸ್. ಪ್ರಸನ್ನಕುಮಾರ್ ಸಂಗೀತ, ಕಂಗಕರ್ಮಿ ರೇಣುಕಾರೆಡ್ಡಿ ವಸ್ತವಿನ್ಯಾಸ, ಮೌನೇಶ್ ಪ್ರಸಾದನ, ಎಸ್. ಮಹದೇವಸ್ವಾಮಿ ಬೆಳಕು, ಅಶಿತ್‌ಕುಮಾರ್ ಸಂಗೀತ ನಿರ್ವಹಣೆ ಮಾಡಿದರು. ವಿಶ್ವನಾಥಮಂಡಿ ರಮಗಪರಿಕರಗಳನ್ನು ಸಿದ್ಧಪಡಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ನೀನಾಸಂ ಪದವೀಧರ ಜೋಸೆಫ್ ಜಾನ್ ನಿರ್ದೇಶಿಸಿದ್ದಾರೆ. ಲೇಖಕ ಪ್ರೊ. ನಾರಾಯಣಘಟ್ಟ, ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ರಾಜೇಶ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.