ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣ: ‘ರಾಜ್ಯ ಸರ್ಕಾರವು ‘ಎಸ್’ ಎಂಬ ತೆರಿಗೆ ನೀತಿಯನ್ನು ಜಾರಿಗೆ ತಂದಿದೆ. ಕಾಮಗಾರಿಗಳಲ್ಲಿ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳ ವರ್ಗಾವಣೆಗೆ ಈ ತೆರಿಗೆ ವಿಧಿಸಲಾಗುತ್ತಿದೆ. ‘ಎಸ್’ ಅಂದರೆ ಏನೆಂದು ನಾನು ಹೇಳುವುದಿಲ್ಲ. ಆದರೆ, ಅದನ್ನು ಕೇಳಿದ ತಕ್ಷಣ ಎಲ್ಲರಿಗೂ ಅರ್ಥವಾಗುತ್ತದೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ತಾಲ್ಲೂಕಿನ ಕೂಡ್ಲೂರಿನಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಸತಿ ಯೋಜನೆಯಡಿ ಮನೆಗಳನ್ನು ಪಡೆಯಲು ಸರ್ಕಾರದ ಭಾಗವಾಗಿರುವವರೇ ಸಚಿವರನ್ನು ಭೇಟಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಮಧ್ಯವರ್ತಿಗಳ ಮೂಲಕ ವಸತಿ ಪಡೆದುಕೊಳ್ಳುವ ಸ್ಥಿತಿ ಎದುರಾಗಿದೆ’ ಎಂದರು.
‘ಸರ್ಕಾರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಅಸಹಾಯಕರಾಗಿರುವ ಆಡಳಿತ ಪಕ್ಷದ ನಾಯಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಸರ್ಕಾರ ಯಾವ ಮಟ್ಟದಲ್ಲಿ ನಡೆಯುತ್ತಿದೆ ಎಂಬುದು ಗೊತ್ತಾಗುತ್ತದೆ. ಮುಂದೆ ಇವರು ರಾಜ್ಯವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಾರೊ’ ಎಂದು ಆತಂಕ ವ್ಯಕ್ತಪಡಿಸಿದರು.
ಅಸ್ತಿತ್ವ ಕಳೆದುಕೊಂಡಿಲ್ಲ: ‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಪಕ್ಷವು ಜಿಲ್ಲೆಯಲ್ಲಿ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ. ಒಂದು ಚುನಾವಣೆಯು ಪಕ್ಷದ ಹಣೆಬರಹ ನಿರ್ಧರಿಸುವುದಿಲ್ಲ. ಜಿಲ್ಲೆ ಪಕ್ಷದ ಭದ್ರಕೋಟೆ. ಇಲ್ಲಿನ ಜನರು ಕಳೆದ ಮೂವತ್ತು ವರ್ಷಗಳಿಂದ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಬೆಳೆಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ನಿಖಿಲ್ ಪ್ರತಿಕ್ರಿಯಿಸಿದರು.
‘ಚುನಾವಣೆಯಲ್ಲಿ ನಾವು ಸೋತರೂ ಮನೆಯಲ್ಲಿ ಕೂರದೆ ಜನರ ಕೆಲಸಗಳನ್ನು ಮಾಡುತ್ತೇವೆ. ಪಕ್ಷ ಸಂಘಟಿಸುತ್ತಾ ಮುಂದಿನ ಚುನಾವಣೆಗೆ ಕಾರ್ಯಕರ್ತರನ್ನು ಅಣಿಗೊಳಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಸದಸ್ಯತ್ವ ನೋಂದಣಿ ಅಭಿಯಾನ ಶುರು ಮಾಡಿದ್ದೇನೆ’ ಎಂದರು.
‘ಡಿ.ಕೆ ಬ್ರದರ್ಸ್ ಆಶೀರ್ವಾದವಿದ್ದರೆ ಅನುದಾನ ಗ್ಯಾರಂಟಿ’ ಎಂಬ ಶಾಸಕ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್, ‘ಆಶೀರ್ವಾದ ಎಲ್ಲಿದೆ? ಹಾಗಿದ್ದರೆ, ಸ್ವಪಕ್ಷದವರೇ ಯಾಕೆ ಅಸಹಾಯಕರಾಗಿದ್ದಾರೆ? ಬಾಲಕೃಷ್ಣ ಅವರು ಡಿ.ಕೆ ಬ್ರದರ್ಸ್ ಆಶೀರ್ವಾದದ ಲಿಸ್ಟ್‌ನಲ್ಲಿದ್ದಾರೊ, ಇಲ್ಲವೊ?
ಬಾಲಕೃಷ್ಣ ಕೂಡ ಬೊಗಳೆ ಭಾಷಣ ಮಾಡುತ್ತಿದ್ದಾರೆಂಬುದು ನನಗೆ ಗೊತ್ತಿಲ್ಲ. ವಿಶೇಷ ಅನುದಾನ ಕೊಡುತ್ತೇವೆ ಅಂತ ಹೇಳುತ್ತಾರೆ. ಆದರೆ, ಯಾವ ಶಾಸಕರಿಗೆ ಸಿಕ್ಕಿದೆ? ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಿದೆ’ ಎಂದು ವ್ಯಂಗ್ಯವಾಡಿದರು.
ಕೆಲವರು ತಮಗೆ ತಾವೇ ಬಲಿಷ್ಠರು ಎಂದುಕೊಂಡು ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಇರುವುದಿಲ್ಲ ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಜನ ಎಲ್ಲರಿಗೂ ಅವಕಾಶ ಕೊಡುತ್ತಾರೆನಿಖಿಲ್ ಕುಮಾರಸ್ವಾಮಿ, ಅಧ್ಯಕ್ಷ, ಜೆಡಿಎಸ್ ಯುವ ಘಟಕ
‘ಅತಿ ಕೆಟ್ಟ ಚುನಾವಣೆ’
‘ಇತ್ತೀಚೆಗೆ ನಡೆದ ಬಮೂಲ್ ಚುನಾವಣೆಯು ರಾಜ್ಯದ ಇತಿಹಾಸದಲ್ಲೇ ಅತಿ ಕೆಟ್ಟದ್ದು. ಚನ್ನಪಟ್ಟಣದಲ್ಲಿ ಜಯಮುತ್ತು ಅವರ ವಿರುದ್ಧವಾಗಿ ಏನೆಲ್ಲಾ ನಡೆಯಿತು ಎಂಬುದನ್ನು ಇಡೀ ರಾಜ್ಯ ಗಮನಿಸಿದೆ. ಪಕ್ಷದ ಹಿಡಿತದಲ್ಲಿದ್ದ ಡೇರಿಗಳನ್ನು ಸೂಪರ್‌ಸೀಡ್ ಮಾಡುವುದು ಸೇರಿದಂತೆ, ಎಲ್ಲಾ ರೀತಿಯ ಅಡ್ಡದಾರಿಗಳನ್ನು ಹಿಡಿದು ಚುನಾವಣೆ ಗೆದ್ದಿದ್ದಾರೆ. ಆಡಳಿತ ಪಕ್ಷವೇ ಚುನಾವಣೆಯಲ್ಲಿ ಅನ್ಯಾಯ ಮಾಡಿದೆ’ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.