ADVERTISEMENT

ಬಾಷ್‌ ಕಂಪನಿಯಿಂದ ನಿರ್ಮಾಣ: ಅಂಗನವಾಡಿ ಕಟ್ಟಡ ಲೋಕಾರ್ಪಣೆ, ಮಕ್ಕಳಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 4:01 IST
Last Updated 22 ಜೂನ್ 2021, 4:01 IST
ಅಂಗನವಾಡಿ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ಶಾಸಕ ಎ. ಮಂಜುನಾಥ್
ಅಂಗನವಾಡಿ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ಶಾಸಕ ಎ. ಮಂಜುನಾಥ್   

ಬಿಡದಿ: ಪುರಸಭೆ ವ್ಯಾಪ್ತಿಯ ಕೆಂಚನಕುಪ್ಪೆ ಗ್ರಾಮದ ಅಂಗನವಾಡಿ ಕೇಂದ್ರ ಹಾಗೂ ತಮ್ಮಣ್ಣದೊಡ್ಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ತರಬೇತಿ ಕೇಂದ್ರವನ್ನು ಶಾಸಕ ಎ. ಮಂಜುನಾಥ್ ಸೋಮವಾರ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು, ಕಾರ್ಯಕರ್ತೆಯರು, ಸಹಾಯಕಿಯರ ಆರೋಗ್ಯದ ದೃಷ್ಟಿಯಿಂದ ಪ್ರತ್ಯೇಕ ಶೌಚಾಲಯ ಇರಬೇಕೆಂದು ಎರಡು ಶೌಚಾಲಯ ನಿರ್ಮಿಸಲಾಗಿದೆ ಎಂದರು.

ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರದ ಕೊರತೆಯಾಗಬಾರದೆಂದು ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಕೈಗಾರಿಕೆಗಳ ಸಿಎಸ್ಆರ್ ನಿಧಿಯಿಂದ ಸುಸಜ್ಜಿತ ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಅಂಗನವಾಡಿ ಕೇಂದ್ರವನ್ನು ನಿರ್ಮಾಣ ಮಾಡಿಕೊಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಮಕ್ಕಳ ಪೋಷಣೆ ಮಾಡುವ ಕಾರ್ಯಕರ್ತೆಯರ ಆರೋಗ್ಯವೂ ಮುಖ್ಯವಾಗಿರುತ್ತದೆ. ಅವರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಬೇಕಾಗಿದೆ ಎಂದರು.

350 ಅಂಗನವಾಡಿ ಕಾರ್ಯಕರ್ತೆಯರ ಗರ್ಭಕೋಶ ತಪಾಸಣೆ ಮಾಡಿಸಲಾಗಿದೆ. ಅವರಲ್ಲಿ 18 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಿಸಿ ಅವರು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಲಾಗಿದೆ. ಸರ್ಕಾರದ ಜೊತೆ ಸ್ಥಳೀಯ ಜನಪ್ರತಿನಿಧಿಗಳು ಅಂಗನವಾಡಿ ಕೇಂದ್ರದ ಸಬಲತೆಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಬಾಷ್ ಕಂಪನಿಯ ಮುಖ್ಯಸ್ಥ ತೊಂಟೇಶ್ ಮಾತನಾಡಿ, ಬಾಷ್ ಕಂಪನಿಯು 152 ದೇಶಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಬಿಡದಿಯ ಆಸುಪಾಸಿನಲ್ಲಿ ಸುಮಾರು ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೃಷಿ ಶಿಕ್ಷಣ ಕ್ಷೇತ್ರದ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರಗಳ ಸ್ಥಾಪನೆ ಹಾಗೂ ನೆರವು ನೀಡುತ್ತಾ ಬಂದಿದೆ ಎಂದರು.

ಸಿಡಿಪಿಒ ಸಿ.ವಿ. ರಾಮನ್ ಮಾತನಾಡಿ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅಂಗನವಾಡಿ ಕೇಂದ್ರ ಸಹಾಯಕಾರಿಯಾಗಿದೆ. ಮಕ್ಕಳಿಗೆ ಯಾವ ರೀತಿ ಕಲಿಕೆ ಇರಬೇಕು. ಅವರೊಂದಿಗಿನ ಒಡನಾಟ ಮತ್ತಿತರ ಚಟುವಟಿಕೆಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡುವ ಸಲುವಾಗಿ ಬೇರೆ ಯಾವ ರಾಜ್ಯದಲ್ಲೂ ಇಲ್ಲದಂತಹ ತರಬೇತಿ ಕೇಂದ್ರವನ್ನು ತಮ್ಮಣ್ಣನದೊಡ್ಡಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಬಾಷ್ ಕಂಪನಿಯ ಪುಂಡಲಿ ಕಾಮತ್ ಮಾತನಾಡಿ, ಅಂಗನವಾಡಿ ತಾಯಿಯ ಮಡಿಲು ಆಗಿದೆ.ಮಕ್ಕಳಿಗೆ ಶಾಲಾಪೂರ್ವ ಕಲಿಕಾ ಸಾಮರ್ಥ್ಯ ಈ ಕೇಂದ್ರದಲ್ಲಿ ಸಿಗುತ್ತದೆ ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಒತ್ತು ನೀಡಲಾಗುತ್ತಿದೆ ಎಂದು
ಹೇಳಿದರು.

ಅಂಗನವಾಡಿ ತರಬೇತಿ ಕೇಂದ್ರಕ್ಕೆ ಸ್ಥಳ ನೀಡಿದ ದಾನಿ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷೆ ಸರಸ್ವತಿ ರಮೇಶ್, ಮಾಜಿ ಉಪಾಧ್ಯಕ್ಷ ಸಿ. ಲೋಕೇಶ್, ಮಾಜಿ ಸದಸ್ಯ ಕುಮಾರ್, ಅಂಗವಿಕಲರ ಇಲಾಖೆಯ ಅಧಿಕಾರಿ ನಾಗವೇಣಿ, ಮೇಲ್ವಿಚಾರಕಿ ಅಂಬಿಕಾ, ಎಂಜಿನಿಯರ್ ರವಿಕುಮಾರ್, ಮುಖಂಡರಾದ ರಮೇಶ್, ಶಂಕರಣ್ಣ, ಕುಮಾರ್, ರಾಜೇಶ್, ಶಿವರಾಜು, ಶಿವನಂಜಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.