ಮಾಗಡಿ: ವಿವಿಧ ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ಮಾದಿಗ ಸಮುದಾಯ ಜಾತಿ ಸಮೀಕ್ಷೆಯಲ್ಲಿ ಒಂದೇ ಹೆಸರು ಬರೆಸಬೇಕೆಂದು ಡಾ.ಸಿದ್ದರಾಜ ಶ್ರೀಗಳು ಸಲಹೆ ನೀಡಿದರು.
ತಾಲ್ಲೂಕಿನ ಸೋಲೂರು ಹೋಬಳಿ ಪಾಲನಹಳ್ಳಿ ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿ ಬೇಕು ಬೇಡವೋ ಅವರವರ ವಿವೇಚನೆಗೆ ಬಿಟ್ಟದ್ದು. ಆದರೆ, ಸಮಾಜದ ದೃಷ್ಟಿಯಲ್ಲಿ ಹೇಳಬೇಕಾದರೆ ಮಾದಿಗ ಜಾತಿಯನ್ನು ಆದಿ ಜಾಂಭವ, ಮಾತಂಗ, ಚಮ್ಮಾರ, ಅರುಂಧತಿ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದಾರೆ. ಅವರೆಲ್ಲರೂ ಮಾದಿಗ ಎಂದು 61ನೇ ಕೋಷ್ಟಕದಲ್ಲಿ ನಮೂದಿಸುವ ಅನಿವಾರ್ಯತೆ ಇದೆ ಎಂದರು.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಪೂರ್ವ ಕರ್ನಾಟಕ, ಕರಾವಳಿ ಕರ್ನಾಟಕದಲ್ಲಿ ಮಾದಿಗ ಜನಾಂಗದವರು ವಿವಿಧ ಹೆಸರುಗಳಿಂದ ಜಾತಿಯನ್ನು ಕರೆಸಿಕೊಳ್ಳುತ್ತಿದ್ದಾರೆ. ಎಲ್ಲರೂ ಮಾದಿಗ ಎಂದು ಬರೆಸಿದರೆ ಸಮಾಜ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಆಗಲಿದೆ ಎಂದರು.
ಒಳ ಮೀಸಲಾತಿಗಾಗಿ 30 ವರ್ಷಗಳಿಂದ ಹೋರಾಟ ನಡೆದಿದೆ. ಸದಾಶಿವ ಆಯೋಗ ಕೂಡ ಸಮೀಕ್ಷೆ ಹಾಗೂ ಅಭಿವೃದ್ಧಿಗೆ ಸೂಚಿಸಿತ್ತು. ಈಚೆಗೆ ನ್ಯಾಯಮರ್ತಿ ಡಾ.ನಾಗಮೋಹನ್ ದಾಸ್ ವರದಿಯಂತೆ ಜಾತಿ ಸಮೀಕ್ಷೆ ನಡೆಯುತ್ತಿದ್ದು ಸಮೀಕ್ಷೆಯಲ್ಲಿ ನಿಖರವಾಗಿ ಜಾತಿ ನೋಂದಾಯಿಸಿಕೊಂಡಾಗ ಮಾತ್ರ ಸರ್ಕಾರದ ಒಳ ಮೀಸಲಾತಿಗೆ ಅರ್ಹತೆ ಸಿಗಲಿದೆ ಎಂದರು.
ಪುರಸಭೆ ರಂಗಹನುಮಯ್ಯ, ತಾ.ಪಂ.ಮಾಜಿ ಸದಸ್ಯ ಜಯರಾಂ, ಗ್ರಾ.ಪಂ.ಸದಸ್ಯರಾದ ಬೆಳಗುಂಬ ವಿಶ್ವನಾಥ್, ತಟವಾಳ್ ಪ್ರಕಾಶ್, ದೊಡ್ಡೇರಿ ವೆಂಕಟೇಶ್, ವೀರಪ್ಪ, ಮಿಲಿಟರಿ ವೆಂಕಟೇಶ್, ಹನುಮಂತರಾಯಪ್ಪ, ನಾಗರತ್ನಮ್ಮ, ಕನಸಂದ್ರ, ರವಿಕುಮಾರ್, ಕನಕೆನಳ್ಳಿ ಕೃಷ್ಣಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.