ADVERTISEMENT

ಪುತ್ರಿಗೆ ಶಿಕ್ಷಣ ಕೊಡಿಸಲು ಅಧಿಕಾರ ತ್ಯಜಿಸಿದ ಪಂಚಾಯಿತಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 6:30 IST
Last Updated 17 ನವೆಂಬರ್ 2018, 6:30 IST
ಸಾತನೂರು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್‌.ಗಂಗರಾಜು ರಾಜೀನಾಮೆ ಸಲ್ಲಿಸಿದ ಬಗ್ಗೆ ಮಾತನಾಡಿದರು.
ಸಾತನೂರು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್‌.ಗಂಗರಾಜು ರಾಜೀನಾಮೆ ಸಲ್ಲಿಸಿದ ಬಗ್ಗೆ ಮಾತನಾಡಿದರು.   

ಮಾಗಡಿ: ಅಧ್ಯಕ್ಷ ಗಾದಿಗಾಗಿ ಇನ್ನಿಲ್ಲದ ಕಸರತ್ತು ಮಾಡಿ ಅಧಿಕಾರ ಹಿಡಿಯುತ್ತಿರುವ ಈ ಕಾಲದಲ್ಲೂ ಮಗಳ ಶೈಕ್ಷಣಿಕ ಪ್ರಗತಿಗಾಗಿ ಅಧಿಕಾರ ತ್ಯಜಿಸಿರುವ ಪ್ರಕರಣ ಸಾತನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಮೂರೂವರೆ ವರ್ಷಗಳ ಹಿಂದೆ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜನಾಂಗದ ಕೆ.ಎನ್‌.ಗಂಗರಾಜು ಅವರನ್ನು ಶಾಸಕ ಎ.ಮಂಜುನಾಥ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರೆಲ್ಲರ ಒತ್ತಾಸೆಯ ಮೇರೆಗೆ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

‘ಈ ಪಂಚಾಯಿತಿ ವ್ಯಾಪ್ತಿಯಲ್ಲಿ ₹6 ಕೋಟಿ ವೆಚ್ಚದಲ್ಲಿ ಸರ್ವಾಂಗೀಣ ಪ್ರಗತಿ ಸಾಧಿಸಿ, ಎರಡು ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದೇವೆ. ಅಧ್ಯಕ್ಷ ಸ್ಥಾನಕ್ಕೆ ಸ್ವಂತ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ’ ಎಂದು ಕೆ.ಎನ್‌.ಗಂಗರಾಜು ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಪ್ರಕಟಿಸಿದರು.

ADVERTISEMENT

2016ರಲ್ಲಿ ₹20 ಕೋಟಿ ಕ್ರಿಯಾ ಯೋಜನೆ ಮಾಡಿಸಿ, ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆದಿದ್ದೇವೆ. 126 ದನದ ಕೊಟ್ಟಿಗೆ, 16 ಕೃಷಿ ಹೊಂಡ, 85 ಶೌಚಾಲಯ, 167 ಆಶ್ರಯ ಮನೆಗಳು, 64 ಚರಂಡಿ, 52 ಕಾಂಕ್ರೀಟ್‌ ರಸ್ತೆ, 18 ಚೆಕ್‌ ಡ್ಯಾಂ, 6 ಶುದ್ಧನೀರು ಘಟಕ, 7 ಕೆರೆಕಟ್ಟೆ ಅಭಿವೃದ್ಧಿ, 2 ಓವರ್‌ ಹೆಡ್‌ ಟ್ಯಾಂಕ್‌, 2 ಅಂಗನವಾಡಿ ಕೇಂದ್ರ, 9 ಸೇತುವೆಗಳು, 3 ಕೋಳಿಶೆಡ್‌ ನಿರ್ಮಿಸಿರುವುದಾಗಿ ಅವರು ವಿವರಿಸಿದರು. ಸಹಕಾರ ನೀಡಿದ ಸದಸ್ಯರು, ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾಂಗ್ರೆಸ್‌ ಮುಖಂಡರಾದ ರಂಗಹನುಮಯ್ಯ, ಸಿ.ಜಯರಾಮು, ಮಂಜುನಾಥ ಈಡಿಗ, ಮೈಕೇಲ್‌ , ದೊಡ್ಡಸೋಮನ ಹಳ್ಳಿ ರಂಗಸ್ವಾಮಿ ಉಪಸ್ಥಿತರಿದ್ದು, ಸಮಾಜ ಸೇವೆಗೆ ಪ್ರಾಮಾಣಿಕತೆಯ ಮೆರುಗು ತಂದು ಅಭಿವೃದ್ಧಿ ನಡೆಸಿದ್ದ ಕೆ.ಎನ್‌.ಗಂಗರಾಜು ವ್ಯಕ್ತಿತ್ವ ವಿಶೇಷವಾದುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.