ADVERTISEMENT

ಹೈಟೆಕ್ ಆದ ತುಂಗಣಿ ಪ್ರಾಥಮಿಕ ಆರೋಗ್ಯ ಕೇಂದ್ರ; ಮೆರುಗು ತಂದ ಉದ್ಯಾನ

ಬರಡನಹಳ್ಳಿ ಕೃಷ್ಣಮೂರ್ತಿ
Published 12 ಮೇ 2019, 20:00 IST
Last Updated 12 ಮೇ 2019, 20:00 IST
ತುಂಗಣಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸುಂದರ ಉದ್ಯಾನವದೊಂದಿಗೆ ಹೊಸ ರೂಪ ಪಡೆದಿರುವುದು
ತುಂಗಣಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸುಂದರ ಉದ್ಯಾನವದೊಂದಿಗೆ ಹೊಸ ರೂಪ ಪಡೆದಿರುವುದು   

ಕನಕಪುರ: ಸೌಲಭ್ಯ ಕೊರತೆಯಿಂದ ನಿರಂತರ ಟೀಕೆಗೆ ಗುರಿಯಾಗುತ್ತಿದ್ದ ತಾಲ್ಲೂಕಿನತುಂಗಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಈಗ ಆಧುನಿಕ ಸವಲತ್ತುಗಳಿಂದ ಕೂಡಿ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಸುಂದರವಾದ ಉದ್ಯಾನ, ವಾಕಿಂಗ್‌ ಟ್ರಾಕ್‌, ಕುಳಿತು ವಿಶ್ರಮಿಸಲು ಕಲ್ಲಿನ ಬೆಂಚುಗಳನ್ನು ಒಳಗೊಂಡು ಕಂಗೊಳಿಸುತ್ತಿದೆ.

ಎರಡು ವರ್ಷಗಳ ಹಿಂದೆ ಇದೇ ಆಸ್ಪತ್ರೆ ಯಾವುದೆ ಅಭಿವೃದ್ಧಿ ಇಲ್ಲದೆ ಭಣಗುಡುತ್ತಿತ್ತು. ಒಳಗೆ ಸುಡುವ ವಾತಾವರಣ. ಬಿಸಿಲಿನ ಬೇಗೆ ಹಾಗೂ ತಾಪಕ್ಕೆ ರೋಗಿಗಳು ಬೇಸರಪಡುವಂತಾಗಿತ್ತು.

ಜಿಲ್ಲಾ ಪಂಚಾಯಿತಿಯು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಪಂಚಾಯಿತಿ ಸಹಭಾಗಿತ್ವದಲ್ಲಿ ಆಸ್ಪತ್ರೆ ಅಭಿವೃದ್ಧಿ, ಸುಂದರ ಉದ್ಯಾನ ನಿರ್ಮಿಸಬೇಕೆಂದು ತಿಳಿಸಿತ್ತು. ಅದರ ನಿರ್ದೇಶನದಂತೆ ಪ್ರಪ್ರಥಮವಾಗಿ ತುಂಗಣಿ ಗ್ರಾಮ ಪಂಚಾಯಿತಿಯು ಉದ್ಯಾನ ನಿರ್ಮಾಣಕ್ಕೆ ಮುಂದಾಯಿತು.

ADVERTISEMENT

ನರೇಗಾ ಯೋಜನೆಯಡಿ ಆಸ್ಪತ್ರೆ ಸುತ್ತಲೂ ಇದ್ದಂತಹ ಜಾಗವನ್ನು ಉದ್ಯಾನವನ್ನಾಗಿ ಮಾರ್ಪಡಿಸಲು ₹ 10 ಲಕ್ಷದ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಆರಂಭಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ರವಿ ಅದರ ಜವಾಬ್ದಾರಿ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಉಷಾ ರವಿ ಮತ್ತು ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ರವಿ ಅವರ ಸಹಕಾರಕ್ಕೆ ನಿಂತರು.

ಕಟ್ಟಡದ ಸುತ್ತಲೂ ಕಾಂಪೌಂಡ್‌ ನಿರ್ಮಿಸಲಾಗಿದೆ. ವಾಕಿಂಗ್‌ ಟ್ರ್ಯಾಕ್‌ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ವಾಹನಗಳ ನಿಲುಗಡೆಗೆ ಟೈಲ್ಸ್‌ ಹಾಕಲಾಗಿದೆ.

ಔಷಧ ಗುಣವುಳ್ಳ ಸುಮಾರು 15 ವಿವಿಧ ಜಾತಿಯ ಗಿಡಗಳನ್ನು ಪಾರ್ಕಿನಲ್ಲಿ ಬೆಳೆಸಿ ಸಸ್ಯತೋಟ ನಿರ್ಮಿಸಲಾಗಿದೆ. ಉದ್ಯಾನದಲ್ಲಿನ ಗಿಡಗಳ ಆರೈಕೆಗೆ ಅನುಕೂಲವಾಗುವ ರೀತಿ ನೀರಿನ ವ್ಯವಸ್ಥೆ ಒದಗಿಸಲಾಗಿದೆ. ಉದ್ಯಾನವನ ನಿರ್ವಹಣೆಗೆ ಮಹೇಶ್‌ ಎಂಬುವರನ್ನು ನೇಮಕ ಮಾಡಲಾಗಿದೆ.

ಇದರಿಂದ ಪ್ರೇರೇಪಣೆಗೊಂಡ ಇತರ ಗ್ರಾಮ ಪಂಚಾಯಿತಿಯವರು ತಮ್ಮ ವ್ಯಾಪ್ತಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉದ್ಯಾನ ನಿರ್ಮಿಸಲು ಮುಂದಾಗಿದ್ದಾರೆ.

‘ಪಂಚಾಯಿತಿ ವತಿಯಿಂದ ಆಸ್ಪತ್ರೆಯ ಆವರಣದಲ್ಲಿ ಪಾರ್ಕ್ ನಿರ್ಮಾಣ ಮಾಡಬೇಕೆಂದಾಗ ಇದು ಸಾಧ್ಯವೇ ಎನಿಸಿತ್ತು. ನಿರ್ಮಾಣ ಮಾಡಿದರೆ ಅದರ ನಿರ್ವಹಣೆ ಹೇಗೆ, ಜನತೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಾರೆಯೆ ಎಂಬ ಪ್ರಶ್ನೆ ಕಾಡಿತ್ತು. ಅವನ್ನೆಲ್ಲ ಬದಿಗೆ ಸರಿಸಿನಿರ್ಮಾಣ ಕಾರ್ಯ ಕೈಗೊಂಡೆವು. ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಳ್ಳೆಯ ರೀತಿಯಲ್ಲಿ ಬಳಕೆ ಆಗುತ್ತಿರುವುದರಿಂದ ನಮ್ಮ ಶ್ರಮ ಸಾರ್ಥಕವಾಗಿದೆ. ಪಂಚಾಯಿತಿಯಿಂದಲೇ ಅದರ ನಿರ್ವಹಣೆ ಮಾಡಿಸುತ್ತಿದ್ದೇವೆ’ ಎಂದುತುಂಗಣಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.