ADVERTISEMENT

ದೇಶ ವಿಭಜನೆಯ ಮನೋಜ್ಞ ಚಿತ್ರಣ: ಸಾಹಿತಿ ಡಾ. ರಾಜಶೇಖರ ಮಠಪತಿ

‘ಬೇಡಿ ಕಳಚಿತು, ದೇಶ ಒಡೆಯಿತು’ ಕಾದಂಬರಿ ಅವಲೋಕನ ಕಾರ್ಯಕ್ರಮದಲ್ಲಿ ಸಾಹಿತಿ ಮಠಪತಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 2:21 IST
Last Updated 26 ಆಗಸ್ಟ್ 2025, 2:21 IST
ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೋ. ಚೆನ್ನಬಸಪ್ಪ ಅವರ ‘ಬೇಡಿ ಕಳಚಿತು, ದೇಶ ಒಡೆಯಿತು’ ಕಾದಂಬರಿ ಅವಲೋಕನ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ರಾಜಶೇಖರ ಮಠಪತಿ ಮಾತನಾಡಿದರು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹಾಗೂ ಇತರರು ಇದ್ದಾರೆ
ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೋ. ಚೆನ್ನಬಸಪ್ಪ ಅವರ ‘ಬೇಡಿ ಕಳಚಿತು, ದೇಶ ಒಡೆಯಿತು’ ಕಾದಂಬರಿ ಅವಲೋಕನ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ರಾಜಶೇಖರ ಮಠಪತಿ ಮಾತನಾಡಿದರು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹಾಗೂ ಇತರರು ಇದ್ದಾರೆ   

ಚನ್ನಪಟ್ಟಣ: ‘ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲೇ ನಡೆದ ದೇಶ ವಿಭಜನೆಯಾದಾಗ ಭಾರತ ಮತ್ತು ಪಾಕಿಸ್ತಾನ ಜನರು ಗಡಿಭಾಗದಲ್ಲಿ ಅನುಭವಿಸಿದ ನೋವನ್ನು ಕೋ. ಚೆನ್ನಬಸಪ್ಪ ಅವರು ತಮ್ಮ ಕೃತಿಯಲ್ಲಿ  ಮನೋಜ್ಞವಾಗಿ ಚಿತ್ರಿಸಿದ್ದಾರೆ’ ಎಂದು ಸಾಹಿತಿ ಡಾ. ರಾಜಶೇಖರ ಮಠಪತಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತ ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ, ಅಂಗಳದಲ್ಲಿ ತಿಂಗಳ ಪುಸ್ತಕ ಯೋಜನೆಯಡಿ ಸೋಮವಾರ ನಡೆದ ಕೋ. ಚೆನ್ನಬಸಪ್ಪ ಅವರ ‘ಬೇಡಿ ಕಳಚಿತು, ದೇಶ ಒಡೆಯಿತು’ ಕಾದಂಬರಿ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಾಂಧೀಜಿ, ಭಗತ್ ಸಿಂಗ್ ಸೇರಿದಂತೆ ನೂರಾರು ಹೋರಾಟಗಾರರ ಪರಿಶ್ರಮದಿಂದಾಗಿ ಭಾರತದ ಮೇಲಿನ ಬ್ರಿಟಿಷರ ಸಂಕೋಲೆಯ ಬೇಡಿ ಕಳಚಿತು. ಆದರೆ, ಅದರ ಬೆನ್ನಿಗೇ ದೇಶ ವಿಭಜನೆಯ ಬರಸಿಡಿಲು ಬಂದೆರಗಿತು. ಸ್ವಾತಂತ್ರ್ಯದ ಸಂಭ್ರಮಕ್ಕೆ ತಣ್ಣಿರೇರಚಿದಂತೆ ಈ ವಿಭಜನೆ ಕೆಲವೆಡೆ ರಕ್ತಪಾತಕ್ಕೂ ಕಾರಣವಾಯಿತು. ಪಂಜಾಬ್‌ನಲ್ಲಿ ಇದು ಅತಿರೇಕಕ್ಕೆ ಹೋಯಿತು’ ಎಂದರು.

ADVERTISEMENT

‘ದೇಶ ವಿಭಜನೆ ಕಾರಣಕ್ಕೆ ಭಾರತ ಮತ್ತು ಪಾಕಿಸ್ತಾನಕ್ಕೆ ಎರಡೂ ಕಡೆಯಿಂದ ಪರಸ್ಪರರು ಬರುವುದು ಮತ್ತು ಹೋಗುವುದು ನಡೆಯುತ್ತಲೇ ಇತ್ತು. ಆದರೆ, ಅದು ಪೂರ್ಣವಾಗಲಿಲ್ಲ. ವಿಭಜನೆ ನೆಪದಲ್ಲಿ ನಡೆದ ಹಿಂಸಾಚಾರದಿಂದಾದಿ ಎರಡೂ ದೇಶದವರು ಅನುಭವಿಸಿದ ಸಾವು–ನೋವು ಮತ್ತು ಅದರ ಪರಿಣಾಮಗಳನ್ನು ಚನ್ನಪಬಸಪ್ಪ ಅವರು ಕಣ್ಣಿಗೆ ಕಟ್ಟಿದಂತೆ ತಮ್ಮ ಕಾದಂಬರಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ‘ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಸಾಹಿತ್ಯದ ಅವಶ್ಯಕತೆ ಬಹಳ ಇದೆ. ಜೀವನದಲ್ಲಿ ಯಶಸ್ಸು ಪಡೆಯಲು ಯಾವುದೇ ಕಾರ್ಯವನ್ನು ಇಷ್ಟಪಟ್ಟು ಮಾಡಬೇಕು. ಆಗ ಮಾತ್ರ ಬದುಕಿನಲ್ಲಿ ಧನಾತ್ಮಕತೆ ಕಾಣಲು ಸಾಧ್ಯ’ ಎಂದರು.

ಕಾಲೇಜಿನ ಪ್ರಾಂಶುಪಾಲೆ ಸುಧಾ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕಿ ಡಾ. ದೀಪ್ತಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಕೆ.ನಾಗೇಂದ್ರ, ಎ.ಪಿ. ಪುಟ್ಟೇಗೌಡ, ಕಾಲೇಜಿನ ಸಹ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.