ಹಾರೋಹಳ್ಳಿ: ರಾಜ್ಯಮಟ್ಟದ ಅಥ್ಲೆಟಿಕ್ಸ್ ವಿಭಾಗದಲ್ಲಿ 100 ಮೀಟರ್ ಹಾಗೂ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದ ಪವನ್ ಕಲ್ಯಾಣ್ ಅಪ್ಪಟ ಗ್ರಾಮೀಣ ಪ್ರತಿಭೆ.
ತಾಲ್ಲೂಕಿನ ರಾವುಗೊಡ್ಲು ಗ್ರಾಮದ ಈ ಬಾಲಕ ಹಾರೋಹಳ್ಳಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ.
2022ರಲ್ಲಿ ಮೈಸೂರು ಹಾಗೂ 2023ರಲ್ಲಿ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾಗಿ ಉತ್ತಮ ಸಾಧನೆ ತೋರಿದ್ದಾನೆ.
ಬಾಲ್ಯದಲ್ಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಪವನ್, ಶಾಲೆಯಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಮುಂದೆ.ದೈಹಿಕ ಶಿಕ್ಷಣ ಶಿಕ್ಷಕ ಸೂರ್ಯಪ್ರಕಾಶ್ ಮಾರ್ಗದರ್ಶನದಲ್ಲಿ ಅಥ್ಲೆಟಿಕ್ಸ್ ಅಭ್ಯಾಸ ಮಾಡುತ್ತಿದ್ದಾನೆ. ಎರಡು ಬಾರಿ ಜಿಲ್ಲಾಮಟ್ಟದ ಓಟದ ಸ್ಪರ್ಧೆಯಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಪೋಷಕರಾದ ಮಂಜುನಾಥ್ ಮತ್ತು ಲಕ್ಷ್ಮಿದಂಪತಿ ಬೇರೆಯವರ ತೋಟದಲ್ಲಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. ‘ನಾನು ಕೂಡಾ ಇತರ ಕ್ರೀಡಾಪಟುಗಳ ರೀತಿ ಸಾಧನೆ ಮಾಡಬೇಕೆಂಬ ಆಸೆಯಿಂದ ಕ್ರೀಡೆಯತ್ತ ಆಕರ್ಷಿತನಾದೆ. ಮುಂದೆ ಕಬಡ್ಡಿ ಆಟಗಾರನಾಗಬೇಕು ಎಂಬ ಗುರಿ ಇದೆ’ ಎನ್ನುತ್ತಾನೆ ಪವನ್ ಕಲ್ಯಾಣ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.