ADVERTISEMENT

ಕನಕಪುರ: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 15:57 IST
Last Updated 26 ಮಾರ್ಚ್ 2025, 15:57 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

(ಸಾಂಕೇತಿಕ ಚಿತ್ರ)

ಕನಕಪುರ: ನರೇಗಾ ಕಾಮಗಾರಿ ಸಾಮಗ್ರಿ ವೆಚ್ಚ ಬಿಡುಗಡೆಗೆ ಸಹಿ ಹಾಕಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ADVERTISEMENT

ತಾಲ್ಲೂಕಿನ ಸೊಮೇಂದ್ಯಾಪನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು ಮಂಗಳವಾರ ಸಂಜೆ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಮುನಿರಾಜು ಅವರು ಕಸಬಾ ಹೋಬಳಿ ತುಂಗಣಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ 2021ರಲ್ಲಿ ಮಾಡಿರುವ ಕಾಮಗಾರಿಯ ಸಾಮಗ್ರಿ ವೆಚ್ಚ ₹2.5 ಲಕ್ಷ ಬಿಡುಗಡೆಗೆ ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದನ್ನು ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಸಿಲುಕಿದ್ದಾರೆ.

ಮುನಿರಾಜು ಅವರು ಪ್ರಸ್ತುತ ಸೋಮೆದ್ಯಾಪನಹಳ್ಳಿ ಪಂಚಾಯಿತಿಯಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2021ರಲ್ಲಿ ತುಂಗಣಿ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನರೇಗಾ ಅಡಿಯಲ್ಲಿ ಮಾಡಿರುವ ಕಾಮಗಾರಿಯ ಸಾಮಗ್ರಿ ವೆಚ್ಚ ಬಿಡುಗಡೆಗೆ ಪಿಡಿಓ ಸಹಿ ಬೇಕಿತ್ತು. ಅದಕ್ಕೆ ಸಹಿ ಮಾಡಿ ಎಂದು ಫಲಾನುಭವಿ ಪಿಡಿಓ ಅವರಿಗೆ ಮನವಿ ಮಾಡಿದಾಗ ಅವರು ₹20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ಫಲಾನುಭವಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನನ್ವಯ ಲೋಕಾಯುಕ್ತ ಎಸ್.ಪಿ.ಸ್ನೇಹ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಶಿವಪ್ರಸಾದ್ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಮಂಗಳವಾರ ಸಂಜೆ ಚರ್ಚ್ ರಸ್ತೆಯಲ್ಲಿ ಪಿಡಿಓ ಫಲಾನುಭವಿಯಿಂದ ಲಂಚ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ಮುನಿರಾಜು ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಇಲಾಖೆ ನಿಯಮಾನುಸಾರ ಪರಿಶೀಲನೆ ನಡೆಸಿ, ಬುಧವಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.