ADVERTISEMENT

ಕನಕಪುರ: ಮಾಸ್ಕ್‌ ಧರಿಸದವರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:33 IST
Last Updated 23 ಏಪ್ರಿಲ್ 2021, 4:33 IST
ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೊರೊನಾ ವಿರುದ್ಧ ಜಾಗೃತಿ ಮೂಡಿಸಿದರು
ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೊರೊನಾ ವಿರುದ್ಧ ಜಾಗೃತಿ ಮೂಡಿಸಿದರು   

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಕೋವಿಡ್‌‌ ನಿಯಂತ್ರಣಕ್ಕಾಗಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ರಸ್ತೆಗಿಳಿದು ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವುದರ ಜತೆಗೆ ಉಚಿತವಾಗಿ ಮಾಸ್ಕ್‌ ಕೂಡ ವಿತರಿಸಿದರು.

ತಾಲ್ಲೂಕಿನಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದರು. ನಗರ ಪ್ರದೇಶದ ಜತೆಗೆ ಗ್ರಾಮೀಣ ಪ್ರದೇಶದಲ್ಲೂ ಕೋವಿಡ್‌ ಜನಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಜನರು ಗುಂಪು ಸೇರದಂತೆ ಕ್ರಮ ಕೈಗೊಂಡು ಸೋಂಕು ಹರಡುವಿಕೆಯನ್ನು ನಿಯಂತ್ರಿಸಬೇಕೆಂದು ಸೂಚಿಸಿದ್ದರು. ಹಾಗಾಗಿ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್‌ ಬಾಬು, ಕೋಡಿಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್‌.ಎಂ. ಕೃಷ್ಣಮೂರ್ತಿ, ಪಂಚಾಯಿತಿ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಜತೆಗೂಡಿ ಹೋಬಳಿ ಕೇಂದ್ರವಾದ ಕೋಡಿಹಳ್ಳಿಯಲ್ಲಿ ಜನಜಾಗೃತಿ ಜಾಥಾ ನಡೆಸಿದರು.

ADVERTISEMENT

ಜಾಥಾ ನಡೆಸಿದ ಅಧಿಕಾರಿಗಳು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಮಾಸ್ಕ್‌ ಹಾಕದವರಿಗೆ ದಂಡ ವಿಧಿಸಿದರು. ಸುಮಾರು ₹ 1 ಸಾವಿರ ದಂಡ ಸಂಗ್ರಹಿಸಿದರು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮಾಸ್ಕ್‌ ತಪಾಸಣೆ ಕಾರ್ಯವನ್ನು ಪಟ್ಟಣ ಸೇರಿದಂತೆ ಹಳ್ಳಿ ಪ್ರದೇಶದಲ್ಲೂ ನಡೆಸಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಚಂದ್ರಶೇಖರ್‌, ಉಪಾಧ್ಯಕ್ಷ ಷಣ್ಮುಖ, ಸದಸ್ಯೆ ಪಾರ್ವತಮ್ಮ, ಆರ್‌ಐ ಮುನಿರಂಗಸ್ವಾಮಿ, ವಿಎ ದಸ್ತಗೀರ್‌, ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.