ಪಿಂಚಣಿ
ಐ ಸ್ಟಾಕ್ ಚಿತ್ರ
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ, ನಗರ ಪ್ರದೇಶಗಳಲ್ಲಿ ಫೆ. 16ರವರೆಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಫೆ. 16ರಿಂದ ಮಾರ್ಚ್ 15ರವರೆಗೆ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ (ಪಿಎಂ-ಎಸ್‌ವೈಎಂ) ಪಿಂಚಣಿ ಯೋಜನೆಯಡಿ ಕಾರ್ಮಿಕರ ನೋಂದಣಿಗೆ ವಿಶೇಷ ಅಭಿಯಾನ ಶಿಬಿರ ಆಯೋಜಿಸಲಾಗಿದೆ.
ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂ ರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿಯ ಇತರೆ ಉದ್ಯೋಗಗಳ ಕೆಲಸಗಾರರು ಅಸಂಘಟಿತ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಈ ಕಾರ್ಮಿಕರಿಗೆ ಜೀವನದ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ. ಇಂತಹ ಅಸಂಘಟಿತ ವಲಯದ ಕಾರ್ಮಿಕರು ವಯೋವೃದ್ಧರಾದಾಗ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಶ್ರಮ್‌ಯೋಗಿ ಮಾನ್ ಧನ್ (ಪಿಎಂ-ಎಸ್‌ವೈಎಂ) ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣೆ ಯೋಜನೆ ಜಾರಿಗೆ ತಂದಿದೆ.
ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್‌ಗಳಲ್ಲಿ (ಸಿಎಸ್‌ಸಿ-ಕಂಪ್ಯೂಟರ್ ಸೆಂಟರ್) ಯೋಜನೆಯಡಿ ಫಲಾನುಭವಿಗಳಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಸಿಎಸ್‌ಸಿಗಳ ವಿವರವನ್ನು ಹತ್ತಿರದ ಎಲ್‌ಐಸಿ ಶಾಖೆಗಳು, ಕಾರ್ಮಿಕ ಇಲಾಖೆ, ಇಎಸ್‌ಐ ಕಾರ್ಪೋರೇಷನ್ ಹಾಗೂ ಭವಿಷ್ಯನಿಧಿ ಸಂಘಟನೆ ಕಚೇರಿಗಳು ಹಾಗೂ ಇಲಾಖೆಯ ವೆಬ್ ವಿಳಾಸಗಳು ಹಾಗೂ ವೆಬ್ ವಿಳಾಸ: http://locator.csccloud.in ನಲ್ಲಿ ಪಡೆಯಬಹುದಾಗಿದೆ.
ಕಾರ್ಮಿಕರು ತಮ್ಮೊಂದಿಗೆ ಆರಂಭಿಕ ವಂತಿಕೆ ಮೊತ್ತ, ಆಧಾರ್ ಕಾರ್ಡ್, ಖಾತೆ ಹೊಂದಿರುವ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್ ವಿವರಗಳೊಂದಿಗೆ (ಬ್ಯಾಂಕ್ ಪಾಸ್ ಪುಸ್ತಕ, ಚೆಕ್ ಪುಸ್ತಕ, ಬ್ಯಾಂಕ್ ಸ್ಟೇಟ್‌ಮೆಂಟ್) ತಮ್ಮ ನಾಮ ನಿರ್ದೇಶಿತರ ವಿವರ ಮತ್ತು ಮೊಬೈಲ್ ಹ್ಯಾಂಡ್‌ಸೆಟ್‌ನೊಂದಿಗೆ ಕಾಮನ್ ಸರ್ವೀಸ್ ಸೆಂಟರ್‌ಗೆ ಬರುಬೇಕು.
ಮೊದಲ ಕಂತಿನ ವಂತಿಕೆಯನ್ನು ನಗದು ರೂಪದಲ್ಲಿ ಪಾವತಿಸಬೇಕು. ನಂತರದ ಮಾಸಿಕ ವಂತಿಕೆಯನ್ನು ಅವರ ಖಾತೆಯಿಂದ ಆಟೊ ಡೆಬಿಟ್ ಮೂಲಕ ಕಟಾವು ಮಾಡಿಕೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ, 2ನೇ ಮಹಡಿ, ಕಂದಾಯ ಭವನ, ರಾಮನಗರ ಉಪವಿಭಾಗ, ಬೆಂಗಳೂರು ದಕ್ಷಿಣ ಜಿಲ್ಲೆ, ದೂ: 080 27275509 ಅಥವಾ ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.