ADVERTISEMENT

ಬಿರು ಬಿಸಿಲಿಗೆ ಜನರು ಹೈರಾಣು

ಮಕ್ಕಳು, ಹಿರಿಯರಿಗೆ ಸೆಖೆಯ ಸಂಕಟ; ಎಳನೀರು, ತಂಪು ಪಾನೀಯಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 13:32 IST
Last Updated 15 ಮಾರ್ಚ್ 2019, 13:32 IST
ರಾಮನಗರದಲ್ಲಿ ಶುಕ್ರವಾರ ಎಳನೀರು ವ್ಯಾಪಾರ ನಡೆದಿತ್ತು
ರಾಮನಗರದಲ್ಲಿ ಶುಕ್ರವಾರ ಎಳನೀರು ವ್ಯಾಪಾರ ನಡೆದಿತ್ತು   

ರಾಮನಗರ: ಜಿಲ್ಲೆಯ ಸರಾಸರಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಬಿರು ಬಿಸಿಲಿಗೆ ಜನರು ಹೈರಾಣಾಗುತ್ತಿದ್ದಾರೆ.

ಈ ತಿಂಗಳ ಆರಂಭದಿಂದಲೂ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಒಂದು ವಾರದಿಂದೀಚೆಗೆ ಕೆಂಡದ ರೀತಿಯಲ್ಲಿ ಮಧ್ಯಾಹ್ನದ ಬಿಸಿಲಿನ ತಾಪ ಏರುತ್ತಿದೆ. ಇದರಿಂದಾಗಿ ಜನರು ಮಧ್ಯಾಹ್ನದ ಹೊತ್ತು ಹೊರಗೆ ನಡೆದಾದಲೂ ಹೆದರುವಂತೆ ಆಗಿದೆ.

ರಾಮನಗರದ ಎರಡು ದಿಕ್ಕುಗಳಲ್ಲಿ ಇರುವ ಬೃಹತ್ತಾದ ಕಲ್ಲಿನ ಗುಡ್ಡಗಳು ಧಗಧಗನೆ ಉರಿಯುವ ಸೂರ್ಯನ ಕಿರಣಕ್ಕೆ ಕಾದು ಹೊರಸೂಸುತ್ತಿರುವ ಕಾವು ಜನರನ್ನು ತಲ್ಲಣಗೊಳಿಸಿದೆ. ಬೆಳಿಗ್ಗೆ 9ರ ಸುಮಾರಿಗೆ ಎಳೆ ಬಿಸಿಲು ಚುರುಕು ಮುಟ್ಟಿಸುವಂತಿರುತ್ತದೆ. ಮಧ್ಯಾಹ್ನ 12ರ ನಂತರ ರಸ್ತೆಗಳಲ್ಲಿ ತಿರುಗಾಡಿದರೆ ಜ್ವರ ಬಂದಂತಹ ಅನುಭವವಾಗುತ್ತಿದೆ.

ADVERTISEMENT

ಇಂತಹ ಕಡು ಬೇಸಿಗೆಯಲ್ಲಿ ಸಂಜೆ ವೇಳೆ ನಗರದ ಜನತೆ ವಿಶ್ರಾಂತಿ ಪಡೆಯಲು ಸುವ್ಯವಸ್ಥಿತವಾದ ಒಂದೂ ಉದ್ಯಾನ ಇಲ್ಲ. ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗುತ್ತಿದ್ದು, ರಜೆ ದಿನಗಳನ್ನು ಹೇಗೆ ಕಳೆಯಬೇಕೆಂಬ ಆತಂಕ ವಿದ್ಯಾರ್ಥಿ ಹಾಗೂ ಪೋಷಕರಿಗೆ ಉಂಟಾಗಿದೆ ಎನ್ನುತ್ತಾರೆ ಚಾಮುಂಡೇಶ್ವರಿ ಬಡಾವಣೆಯ ಮಮತಾ.

ಎಳನೀರು, ಹಣ್ಣಿಗೆ ಬೇಡಿಕೆ: ಬಿಸಿಲಿನ ದಾಹ ತಣಿಸಿಕೊಳ್ಳಲು ಜನರು ಐಸ್ ಕ್ರೀಮ್, ಕಲ್ಲಂಗಡಿ, ವಿವಿಧ ಹಣ್ಣಿನ ರಸ ಹಾಗೂ ಎಳನೀರು ಅಂಗಡಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಅಂಗಡಿ ಮಾಲೀಕರುಗಳಿಗೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ‘ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಜಮೀನುಗಳಲ್ಲಿ ಕಾಲ ಕಳೆಯುವುದು ಕಷ್ಟ ಸಾಧ್ಯವಾಗಿದೆ’ ಎನ್ನುತ್ತಾರೆ ಸುಗ್ಗನಹಳ್ಳಿಯ ರೈತ ಚಂದ್ರಶೇಖರ್.

‘ಮನೆಗಳಲ್ಲಿ ಮಧ್ಯಾಹ್ನ ಸಮಯದಲ್ಲಿ ಫ್ಯಾನ್ ಹಾಕಿದರೂ ಬಿಸಿ ಗಾಳಿ ಬೀಸಿದಂತಾಗುತ್ತಿದೆ. ವಿದ್ಯುತ್ ಸಹ ಆಗಾಗ ಕಣ್ಣಾಮುಚ್ಚಾಲೆ ಆಟವಾಡುತ್ತಿರುತ್ತದೆ. ಇದರಿಂದಾಗಿ ಮನೆಗಳಲ್ಲಿ ಫ್ಯಾನ್‌ಗಳಿದ್ದರೂ ಉಪಯೋಗ ಇಲ್ಲ. ರಾತ್ರಿ ಸಮಯದಲ್ಲಿ ವಿದ್ಯುತ್ ಕೈಕೊಟ್ಟರೆ ನಿದ್ದೆಗೆಡುವಂತಹ ಸ್ಥಿತಿ ಉಂಟಾಗಿದೆ’ ಎನ್ನುವುದು ಚಾಮುಂಡಿಪುರ ನಿವಾಸಿ ಪ್ರದೀಪ್‌ ಅಳಲು.
ವ್ಯಾಪಾರಕ್ಕೂ ಹೊಡೆತ: ಈ ವೇಳೆಗೆ ನಗರದಲ್ಲಿ ಸಾಮಾನ್ಯವಾಗಿ 32–34 ಡಿಗ್ರಿ ಉಷ್ಣಾಂಶ ಇರುತಿತ್ತು. ಈಗ 37–38 ಡಿಗ್ರಿಗೆ ಏರಿಕೆ ಆಗಿದೆ. ಬಿಸಿಲು ಹೆಚ್ಚಾಗಿರುವ ಕಾರಣ ನಗರದಲ್ಲಿ ಬೆಳಿಗ್ಗೆ11 ಗಂಟೆಯಿಂದ ಸಂಜೆ5 ಗಂಟೆಯವರೆಗೆ ಬಹುತೇಕ ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.

‘ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬೊಕ್ಕ ತಲೆಯವರಂತೂ ಮನೆ ಬಿಟ್ಟು ಹೊರಗೆ ಬರಲೇಬಾರದು. ನಾನಂತೂ ಇಂತಹ ಬಿಸಿಲು ಕಂಡಿರಲಿಲ್ಲ. ಇದೆಲ್ಲ ಮನುಷ್ಯನ ದುರಾಸೆಯ ಫಲ. ಇನ್ನಾದರೂ ಹಸಿರು ಉಳಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು’ ಎನ್ನುತ್ತಾರೆ ಹಿರಿಯರಾದ ಗುರುಶಾಂತಪ್ಪ.

**
ಎಲ್ಲೆಲ್ಲೂ ಬಿಸಿಲಿನದ್ದೇ ಮಾತು
'ಸರ್ ಟೆಂಪರೇಚರ್ ಎಷ್ಟಿರಬಹುದು, ಸ್ವಲ್ಪ ಮೊಬೈಲ್ ನೋಡಿ ಹೇಳಿ. ಅಬ್ಬಾ! ಬೆಳಿಗ್ಗೆ11 ಗಂಟೆಗೆ35 ಡಿಗ್ರಿ ಇದ್ದರೆ, ಮಧ್ಯಾಹ್ನ ಎಷ್ಟಕ್ಕೆ ಹೋಗಬಹುದು. ಮನೆಗೆ ಹೋಗಿ ಕುತ್ಕೊಳ್ಳೋದೇ ವಾಸಿ'.

ಇಂತಹ ಮಾತುಗಳು ಇಲ್ಲಿನ ಐಜೂರು ವೃತ್ತ, ಮಿನಿವಿಧಾನ ಸೌಧದ ಆವರಣ, ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣ, ಬಸ್ ನಿಲ್ದಾಣದ ಹತ್ತಿರ ನಿಂತರೆ ಕಿವಿಗೆ ಬೀಳುತ್ತದೆ. ಇದೀಗ ಮೊಬೈಲುಗಳಲ್ಲೂ ಹವಾಮಾನ ಮಾಹಿತಿ ಲಭ್ಯವಿದ್ದು, ಜನರು ಅಂಗೈನಲ್ಲೇ ಉಷ್ಣಾಂಶ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.