ADVERTISEMENT

ಮನಸೂರೆಗೊಂಡ ಪೂಜಾ ಕುಣಿತ, ಒನಕೆ ಕುಣಿತ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 13:42 IST
Last Updated 7 ಜುಲೈ 2019, 13:42 IST
ಕಲಾವಿದರಾದ ಶಿವಮಾದಯ್ಯ, ಪ್ರೀತಂ ಪೂಜಾ ಕುಣಿತ, ಒನಕೆ ಕುಣಿತವನ್ನು ಭಾನುವಾರ ಪ್ರದರ್ಶಿಸಿದರು
ಕಲಾವಿದರಾದ ಶಿವಮಾದಯ್ಯ, ಪ್ರೀತಂ ಪೂಜಾ ಕುಣಿತ, ಒನಕೆ ಕುಣಿತವನ್ನು ಭಾನುವಾರ ಪ್ರದರ್ಶಿಸಿದರು   

ರಾಮನಗರ: ಕನಕಪುರದ ತೋಟಳ್ಳಿಯ ಶಿವಮಾದಯ್ಯ ಹಾಗೂ ಪ್ರೀತಂ ಇಲ್ಲಿನ ಜಾನಪದ ಲೋಕದಲ್ಲಿ ಭಾನುವಾರ ಪ್ರದರ್ಶಿಸಿದ ಪೂಜಾ ಕುಣಿತ, ಒನಕೆ ಕುಣಿತ ಪ್ರೇಕ್ಷಕರ ಮನಸೂರೆಗೊಂಡಿತು.

‘35 ವರ್ಷಗಳಿಂದ ಪೂಜಾ ಕುಣಿತ ಹಾಗೂ ಒನಕೆ ಕುಣಿತವನ್ನು ಪ್ರದರ್ಶಿಸುತ್ತಿದ್ದೇನೆ. ನಮ್ಮ ತಂದೆಯವರು ಕಲಾವಿದರಾಗಿದ್ದರು, ಕರಿಯಪ್ಪನವರಿಂದ ಪೂಜಾ ಕುಣಿತವನ್ನು ಕಲಿತೆ, ಪೂಜಾ ಕುಣಿತ ಪ್ರದರ್ಶನಕ್ಕೆ ಈಗಲೂ ಬೇಡಿಕೆ ಇದೆ’ ಎಂದು ಕಲಾವಿದ ಶಿವಮಾದಯ್ಯ ತಿಳಿಸಿದರು.

‘ಕಲೆಗಳ ಪ್ರದರ್ಶನವನ್ನು ನಂಬಿಕೊಂಡು ಜೀವನ ನಡೆಸಬಹುದು. ಆದರೆ ಕೆಲವೊಮ್ಮೆ ಪ್ರದರ್ಶನಗಳಿಗೆ ಅವಕಾಶ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ನನ್ನ ಮಗ ಪ್ರೀತಂನಿಗೆ ಪೂಜಾ ಕುಣಿತವನ್ನು ಕಲಿಸಿದ್ದೇನೆ. ಹತ್ತು ವರ್ಷದ ಅವನು ಈಗಾಗಲೇ ನೂರಾರು ಪ್ರದರ್ಶನಗಳನ್ನು ನೀಡಿದ್ದಾನೆ’ ಎಂದು ತಿಳಿಸಿದರು.

ADVERTISEMENT

ಬಾಲಕಲಾವಿದ ಪ್ರೀತಂ ಮಾತನಾಡಿ, ‘ಎರಡನೇ ತರಗತಿಯಿಂದ ಪೂಜಾ ಕುಣಿತವನ್ನು ತಂದೆಯಿಂದ ಕಲಿತುಕೊಂಡೆ. ಅವರು ಕುಣಿಯುವುದನ್ನು ನೋಡಿಯೇ ನಾನು ಕಲಿತು ಈಗ ಒನಕೆ ಕುಣಿತ, ಪೂಜಾ ಕುಣಿತ ಹಾಗೂ ನಗಾರಿ ಬಾರಿಸುತ್ತೇನೆ. ಪ್ರದರ್ಶನಗಳನ್ನು ನೀಡಲು ನನಗೆ ಸಂತೋಷವಾಗುತ್ತದೆ. ಜನರೆಲ್ಲರೂ ನಾನು ಪ್ರದರ್ಶನ ನೀಡುವಾಗ ಮೊಬೈಲ್ ಗಳಲ್ಲಿ ಚಿತ್ರ ತೆಗೆಯುವುದನ್ನು ನೋಡಿ ಹೆಚ್ಚಿನ ಖುಷಿಯಾಗುತ್ತದೆ’ ಎಂದು ತಿಳಿಸಿದ.

‘ಈಗ ಶಾರದಾ ಕಾನ್ವೆಂಟಿನಲ್ಲಿ ಐದನೇ ತರಗತಿ ಓದುತ್ತಿದ್ದೇನೆ. ನನಗೆ ಈಗ ಹತ್ತು ವರ್ಷ. ಜನಪದ ಕಲೆಗಳ ಪ್ರದರ್ಶನದಲ್ಲಿಯೆ ತೊಡಗಿಸಿಕೊಂಡು ನಮ್ಮ ಜನಪದ ಸಂಸ್ಕೃತಿಯನ್ನು ಉಳಿಸುತ್ತೇನೆ’ ಎಂದು ಹೇಳಿದ.

ಕಲಾವಿದರಾದ ಅನಿ, ಬಸವಲಿಂಗ, ಅನಿಲ್, ಶಿವ, ಮಂಜುಗೌಡ, ಮಂಜುನಾಥ್, ನಾಗರಾಜು, ಸಿದ್ದು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.