ಖುಷಿ
ಬಿಡದಿ (ರಾಮನಗರ): ಹೋಬಳಿಯ ಭದ್ರಾಪುರದ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ವಾರದ (ಮೇ 12) ಹಿಂದೆ ರೈಲು ಹಳಿ ಬಳಿ ಶವವಾಗಿ ಪತ್ತೆಯಾಗಿದ್ದ ಗ್ರಾಮದ 15 ವರ್ಷದ ಬಾಲಕಿದ್ದು ಕೊಲೆಯಲ್ಲ, ಬದಲಿಗೆ ರೈಲು ಅಪಘಾತ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಇದರೊಂದಿಗೆ ಬಾಲಕಿ ಮೇಲೆ ಅತ್ಯಾಚಾ ಎಸಗಿ ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳಿಗೆ ತೆರೆ ಬಿದ್ದಿದೆ.
ಬಾಲಕಿ ಶವದ ಮರಣೋತ್ತರ ಪರೀಕ್ಷೆಯ ವರದಿ ಸೋಮವಾರ ಪೊಲೀಸರ ಕೈ ಸೇರಿದೆ. ಇದರ ಜೊತೆಗೆ, ಬಾಲಕಿ ರೈಲು ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿದ್ದಾಳೆ ಎಂದು ಖಚಿತಪಡಿಸುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪೊಲೀಸರು ಸಹ ವಿಡಿಯೊ ನಿಜವೆಂದು ಹೇಳಿದ್ದಾರೆ.
ತಲೆಗೆ ಪೆಟ್ಟು ಬಿದ್ದು ಸಾವು: ‘ಬಾಲಕಿ ಶವದ ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂದಿರುವ ಎಫ್‌ಎಸ್‌ಎಲ್ ವರದಿಯಲ್ಲಿ ಅತ್ಯಾಚಾರ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
‘ಬಾಲಕಿ ಸಂಜೆ ರೈಲು ಹಳಿ ಬಳಿ ಹೋಗಿದ್ದಾಗ 6 ಗಂಟೆ 7 ನಿಮಿಷಕ್ಕೆ ಅದೇ ಮಾರ್ಗವಾಗಿ ಸಂಚರಿಸಿದ ರೈಲು ಆಕೆಗೆ ಡಿಕ್ಕಿ ಹೊಡೆದಿದೆ. ಶವ ಪತ್ತೆಯಾದ ಸ್ಥಳಕ್ಕೆ ಹೊಂದಿಕೊಂಡಂತಿರುವ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಲಕಿ ಚಲನವಲನ ಹಾಗೂ ರೈಲು ಡಿಕ್ಕಿ ಹೊಡೆಯುವ ದೃಶ್ಯ ಸೆರೆಯಾಗಿದೆ’ ಎಂದು ಹೇಳಿದರು.
‘ಬಾಲಕಿಗೆ ಡಿಕ್ಕಿ ಹೊಡೆದ ರೈಲನ್ನು ಸಹ ಪರಿಶೀಲಿಸಿ, ಡಿಕ್ಕಿ ಹೊಡೆದ ಭಾಗದ ಮಾದರಿ ಹಾಗೂ ಬಾಲಕಿಯ ದೇಹದ ಮಾದರಿಯನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳಿಸಲಾಗಿತ್ತು. ವರದಿಯಲ್ಲಿ ಎರಡಕ್ಕೂ ಹೋಲಿಕೆಯಾಗಿದೆ. ಕೊಲೆ ಸಾಧ್ಯತೆ ಆಯಾಮದಲ್ಲೂ ತನಿಖೆ ನಡೆಸಲಾಗಿದೆ. ಬಾಲಕಿ ಶವವಿದ್ದ ಸ್ಥಳದ ಮಣ್ಣನ್ನು ಸಹ ಪರಿಶೀಲನೆಗೆ ಒಳಪಡಿಸಲಾಗಿದ್ದು, ದೇಹದಲ್ಲಿ ಘಟನಾ ಸ್ಥಳದ್ದು ಬಿಟ್ಟರೆ ಬೇರೆ ಕಡೆಯ ಮಣ್ಣು ಆಕೆಯ ದೇಹಕ್ಕೆ ಮೆತ್ತಿಕೊಂಡಿಲ್ಲ. ಇದರಿಂದಾಗಿ ಬೇರೆ ಕಡೆ ಕೊಲೆ ಮಾಡಿ ತಂದು ಇಲ್ಲಿಗೆ ಎಸೆದಿದ್ದಾರೆ ಎಂಬ ಆರೋಪವೂ ಸುಳ್ಳಲಾಗಿದೆ’ ಎಂದು ತಿಳಿಸಿದರು.
‘ರೈಲು ಡಿಕ್ಕಿ ಹೊಡೆದ ಎರಡು ತಾಸಿಗೆ ಮುಂಚೆ ಮತ್ತು ನಂತರದ ಅವಧಿಯ ಕ್ಯಾಮೆರಾ ದೃಶ್ಯಾವಳಿಯನ್ನು ಸಹ ಪರಿಶೀಲಿಸಲಾಗಿದೆ. ಬಾಲಕಿ ಶವದ ಬಳಿ ಯಾವುದೇ ಮನುಷ್ಯರ ಚಲನವಲನ ಪತ್ತೆಯಾಗಿಲ್ಲ. ಎಲ್ಲಾ ಆಯಾಮಗಳಿಂದ ನಡೆದ ತನಿಖೆಯಲ್ಲಿ ಬಾಲಕಿ ಸಾವು ರೈಲು ಅಪಘಾತದಿಂದ ಸಂಭವಿಸಿದೆ ಎಂಬುದು ಖಚಿತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿನ ಆರೋಪ ಮತ್ತು ವದಂತಿಗಳು ಸುಳ್ಳೆಂದು ಸಾಬೀತಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.