ADVERTISEMENT

ಶೈಕ್ಷಣಿಕ ವರ್ಷ ಆರಂಭಕ್ಕೆ ಸಿದ್ಧತೆ

ಶಾಲೆಗಳಲ್ಲಿ ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಮೊದಲ ಆದ್ಯತೆ: ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ವರದಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:30 IST
Last Updated 5 ಜೂನ್ 2020, 20:30 IST

ರಾಮನಗರ: ಕೋವಿಡ್‌-19 ಭೀತಿ ನಡುವೆಯೂ ಶಿಕ್ಷಣ ಇಲಾಖೆ ಶಾಲೆಗಳ ಆರಂಭಕ್ಕೆ ಸಿದ್ಧತೆ ನಡೆಸಿದೆ. ಈ ಕುರಿತು ಇಲಾಖೆ‌ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿನ 1,769 ಶಾಲೆಗಳನ್ನು ತೆರೆಯಲು ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಈ ವರ್ಷ ಬರೋಬ್ಬರಿ 1.41 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುವ ನಿರೀಕ್ಷೆ ಇದೆ. ಶುಕ್ರವಾರ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ವರದಿ ಮಾಡಿಕೊಂಡಿದ್ದು, ಸೋಮವಾರದಿಂದ ಉಳಿದ ಶಿಕ್ಷಕರೂ ಶಾಲೆಗೆ ಬರಲಿದ್ದಾರೆ.

ಕೋವಿಡ್-19 ಭೀತಿಯಿಂದಾಗಿ ಕಳೆದ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಮುನ್ನವೇ ಶಾಲೆಗಳಿಗೆ ರಜೆ ನೀಡಲಾಗಿತ್ತು. ಬಹುತೇಕ ತರಗತಿಗಳ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆಯೇ ಉತ್ತೀರ್ಣರಾಗಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಸಹ ಇನ್ನೂ ನಡೆದಿಲ್ಲ. ಈ ನಡುವೆಯೇ ಮತ್ತೆ ಶೈಕ್ಷಣಿಕ ವರ್ಷದ ಆರಂಭಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಜುಲೈ 1ರಿಂದ ಆರಂಭಕ್ಕೆ ಸರ್ಕಾರ ಮನಸ್ಸು ಮಾಡಿದೆಯಾದರೂ ಇದಕ್ಕೆ ಸಾಕಷ್ಟು ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲು ಶಾಲೆಗಳನ್ನು ಆರಂಭಿಸಲು ಪೋಷಕರ ಅಭಿಪ್ರಾಯ ಮುಖ್ಯವಾಗಿದೆ. ಪ್ರತಿ ಶಾಲೆಗಳಲ್ಲಿ ಪೋಷಕರ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾವಾರು ಮಾಹಿತಿ ಸರ್ಕಾರಕ್ಕೆ ಕಳುಹಿಸಲಾಗುವುದು. ಈ ಎಲ್ಲ ವರದಿಗಳನ್ನು ಆಧರಿಸಿ ಸರ್ಕಾರ ಶಾಲೆ ಅರಂಭದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ADVERTISEMENT

6,200 ಶಿಕ್ಷಕರಿಗೆ ಸೂಚನೆ: ಇದೇ 8ರಿಂದ ಪ್ರತಿ ಶಿಕ್ಷಕರು ಕಡ್ಡಾಯವಾಗಿ ತಮ್ಮ ಶಾಲೆಗಳಿಗೆ ಹಾಜರಾಗಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಇಲ್ಲಿಯೂ ಅಂತರ ಪಾಲನೆ ಹಾಗೂ ಸುರಕ್ಷತಾ ಕ್ರಮ ಅನುಸರಿಸಲು ಸೂಚಿಸಿದೆ. ಪ್ರತಿ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್ ಬಳಕೆ ಬಗ್ಗೆ ತಿಳಿಹೇಳಲಾಗಿದೆ.

ಇದೇ 8ರ ಬಳಿಕ ಪ್ರತಿ ಶಾಲೆಯಲ್ಲೂ ಸಭೆ ನಡೆಸಿ ಪೋಷಕರ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಲಾಗುವುದು. ಶಾಲೆ ಆರಂಭದ ಕುರಿತು ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎಂದು ಡಿಡಿಪಿಐ ಸೋಮಶೇಖರಯ್ಯ ತಿಳಿಸಿದರು.

ಅಂಕಿ-ಅಂಶ
1,769- ಜಿಲ್ಲೆಯಲ್ಲಿರುವ ಒಟ್ಟು ಶಾಲೆಗಳು
1271- ಸರ್ಕಾರಿ ಪ್ರಾಥಮಿಕ ಶಾಲೆಗಳು
134- ಸರ್ಕಾರಿ ಪ್ರೌಢಶಾಲೆಗಳು
26- ಅನುದಾನಿತ ಪ್ರಾಥಮಿಕ ಶಾಲೆಗಳು
74: ಅನುದಾನಿತ ಪ್ರೌಢಶಾಲೆಗಳು

156- ಅನುದಾನ ರಹಿತ ಪ್ರಾಥಮಿಕ ಶಾಲೆಗಳು
108: ಅನುದಾನ ರಹಿತ ಪ್ರೌಢಶಾಲೆಗಳು


6200- ಜಿಲ್ಲೆಯಲ್ಲಿನ ಒಟ್ಟು ಶಿಕ್ಷಕರು
4080-ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು
572-ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರು
1568- ಅನುದಾನ ರಹಿತ ಶಾಲೆಗಳಲ್ಲಿನ ಶಿಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.