ADVERTISEMENT

26ಕ್ಕೆ ಪ್ರೊ. ಎಂಡಿಎನ್ ನೆನಪಿನ ವಿಚಾರಗೋಷ್ಠಿ

ನಮ್ಮ ಭೂಮಿ ನಮ್ಮ ಹಕ್ಕು, ಮೇಕೆದಾಟು ಯೋಜನೆ ಕುರಿತು ವಿಚಾರ ಮಂಡನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 4:50 IST
Last Updated 22 ಫೆಬ್ರುವರಿ 2026, 4:50 IST
   

ರಾಮನಗರ: ‘ಕರ್ನಾಟಕ ರಾಜ್ಯ ರೈತ ಸಂಘವು ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ನೆನಪು ಮತ್ತು ವಿಚಾರಮಂಥನ ಗೋಷ್ಠಿ ಕಾರ್ಯಕ್ರಮವನ್ನು ಫೆ. 26ರಂದು ಕನಕಪುರದ ಕೋಟೆ ಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಂಡಿದೆ’ ಎಂದು ಸಂಘದ ಯುವ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಹೇಳಿದರು.

‘ನಮ್ಮ ಭೂಮಿ ನಮ್ಮ ಹಕ್ಕು ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ನಮ್ಮ ನೀರು ನಮ್ಮ ಹಕ್ಕು ವಿಷಯಗಳ ಕುರಿತು ವಿಚಾರ ಮಂಥನ ಹಾಗೂ ಸಂವಾದ ನಡೆಯಲಿದೆ. ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪಾಧ್ಯಕ್ಷ ಕೆ. ಮಲ್ಲಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಎಪಿಎಂಸಿಯಲ್ಲಿರುವ ರೈತ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಅಂದು ಸಂಘದ ಜಿಲ್ಲಾಧ್ಯಕ್ಷ ಎಚ್.ಸಿ. ಕೃಷರ್ಣಯ್ಯ, ಯುವ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಸೇರಿದಂತೆ ಜಿಲ್ಲಾ, ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

‘ಸಮಾಜವಾದಿ ಚಿಂತಕರಾಗಿದ್ದ ನಂಜುಂಡಸ್ವಾಮಿ ಅವರು ರೈತರಿಗೆ ಸ್ವಾಭಿಮಾನ ತಂದು ಕೊಟ್ಟವರು. ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆ ತೊಲಗಿ ದೇಶ ಸ್ವಾತಂತ್ರ್ಯ ಪಡೆದರೂ, ಆಡಳಿತಾರೂಢ ಸರ್ಕಾರಗಳು ಸಹ ಬ್ರಿಟಿಷ್ ಕಾಲದ ರೈತ ವಿರೋಧಿ ನೀತಿಗಳನ್ನೇ ಮುಂದುವರಿಸುತ್ತಿವೆ ಎಂದು ಗಮನ ಸೆಳೆದರು’ ಎಂದು ನೆನೆದರು.

‘ರೈತರು ಹಾಗೂ ದುಡಿಯುವ ವರ್ಗದ ಪರವಾಗಿ ದಿಟ್ಟ ದನಿ ಎತ್ತಿದ ನಂಜುಂಡಸ್ವಾಮಿ ಅವರು, ಇವೆರಡೂ ವರ್ಗಗಳನ್ನು ದಾಸ್ಯದಿಂದ ಬಿಡುಗಡೆ ಮಾಡಲು ಹೋರಾಟದ ಕಿಚ್ಚು ಹತ್ತಿಸಿದರು. ತಮ್ಮ ಕೊನೆಯ ಉಸಿರು ಇರುವವರೆಗೆ ಹೋರಾಟ ನಡೆಸಿದರು. ಅವರ ನೆನಪಿನಾರ್ಥವಾಗಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ವಿಚಾರಗೋಷ್ಠಿ ಹಮ್ಮಿಕೊಂಡು ರೈತರಿಗೆ ಜಾಗೃತಿ ಮೂಡಿಸಲಾಗುವುದು’ ಎಂದರು.

ಸಂಘದ ರಾಜ್ಯ ಮಹಿಳಾ ಕಾರ್ಯದರ್ಶಿ ರಮ್ಯ ರಾಮಣ್ಣ, ವಿಭಾಗೀಯ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಗೌರವಾಧ್ಯಕ್ಷ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ನಾಗರಾಜು, ಉಪಾಧ್ಯಕ್ಷ ಬುಡಾನ್ ಸಾಬ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ಹಾಗೂ ಇತರರು ಇದ್ದರು.

ಭ್ರಷ್ಟಾಚಾರದ ವಿರುದ್ಧ ಬಾರುಕೋಲು ಚಳವಳಿ

‘ಕಂದಾಯ ಇಲಾಖೆಯಲ್ಲಿ ಒಂದೇ ಕಡೆ ಹಲವು ವರ್ಷಗಳಿಂದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣವಾಗಿರುವ ಇವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕಾರ್ಯಕ್ರಮದ ದಿನವೇ ಬಾರುಕೋಲು ಚಳವಳಿಗೆ ಚಾಲನೆ ನೀಡಲಾಗುವುದು. ಅಲ್ಲದೆ ಸಮಗ್ರ ನೀರಾವರಿ ಸೌಲಭ್ಯಕ್ಕೆ ಒತ್ತಾಯಿಸಿ ಹನೂರು ತಾಲ್ಲೂಕಿನ ರೈತರು ಹಮ್ಮಿಕೊಂಡಿರುವ ವಿಧಾನಸೌಧ ಚಲೋ ಪಾದಯಾತ್ರೆಗೆ ಸಂಘವು ಬೆಂಬಲ ನೀಡಲಿದೆ. ಜಾಥಾ ಜಿಲ್ಲೆ ಪ್ರವೇಶಿಸಿದಾಗ ಅವರೊಂದಿಗೆ ನಾವೂ ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ರೈತ ಸಂಘದ ಉಪಾಧ್ಯಕ್ಷ ಕೆ. ಮಲ್ಲಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.