ADVERTISEMENT

ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮ ಹೊಣೆ: ಜಿಲ್ಲಾ ಸೆಷನ್ಸ್ ನ್ಯಾಯಾಧೀಶ

ಮಕ್ಕಳಿಗೆ ಕಾನೂನು ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 4:03 IST
Last Updated 16 ನವೆಂಬರ್ 2021, 4:03 IST
ಬಿಜಿಎಸ್ ಅಂಧರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಮರುಳಸಿದ್ಧಾರಾಧ್ಯ, ಅನ್ನದಾನೇಶ್ವರನಾಥ ಸ್ವಾಮೀಜಿ, ಸಿ.ವಿ. ರಾಮನ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡರು
ಬಿಜಿಎಸ್ ಅಂಧರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಮರುಳಸಿದ್ಧಾರಾಧ್ಯ, ಅನ್ನದಾನೇಶ್ವರನಾಥ ಸ್ವಾಮೀಜಿ, ಸಿ.ವಿ. ರಾಮನ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡರು   

ರಾಮನಗರ: ಇಂದಿನ ಮಕ್ಕಳು ದೇಶದ ಭವಿಷ್ಯ. ಅವರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಚ್‌.ಜೆ. ಮರುಳಸಿದ್ಧಾರಾಧ್ಯ ಹೇಳಿದರು.

ನಗರದ ಹೊರವಲಯದಲ್ಲಿರುವ ಬಿಜಿಎಸ್ ಅಂಧರ ಶಾಲೆ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಹಕ್ಕುಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಆಶಿರ್ವಚನ ನೀಡಿದ ಅನ್ನದಾನೇಶ್ವರನಾಥ ಸ್ವಾಮೀಜಿ ‘ಮಕ್ಕಳೇ ದೇವರು. ಈ ಮಕ್ಕಳಲ್ಲಿ ದೇವರನ್ನು ನೋಡುತ್ತಿದ್ದೇವೆ. ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಬಂದರೆ ನಮ್ಮ ಮಕ್ಕಳು ದಾರಿ ತಪ್ಪರು. ಪಾಶ್ಚಿಮಾತ್ಯ ಶೈಲಿಯ ಶಿಕ್ಷಣ ಶೈಲಿಯನ್ನು ನಾವು ಹಂತಹಂತವಾಗಿ ಕೈಬಿಡಬೇಕಿದೆ ಎಂದರು.

ADVERTISEMENT

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ, ಕಾನೂನು ಸೇವೆಗಳ ಸಪ್ತಾಹ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರಿ ಬಾಲಮಂದಿರದ ಮಕ್ಕಳು, ಮಕ್ಕಳ ಪಾಲನಾ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ. ರಾಮನ್, ನಾಗವೇಣಿ, ಷಣ್ಮುಗಂ, ಶಿವರಾಮು, ಪರಷುರಾಮ್‌ ಮತ್ತಿತರರು ಇದ್ದರು.

ಕನಕಪುರ: ‘ಮಕ್ಕಳು ಆಟ-ಪಾಟ, ಓದು ಇದೆಲ್ಲದರ ಜತೆಗೆ ಭವಿಷ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಕಾನೂನಿನ ಅರಿವು ಪಡೆದುಕೊಳ್ಳಬೇಕು’ ಎಂದು ಜೆಎಂಎಫ್‌ಸಿ ಕಿರಿಯ ಶ್ರೇಣಿ ಪ್ರಧಾನ ಸಿವಿಲ್‌ ನ್ಯಾಯಾಧೀಶ ಸಂತೋಷ್‌ಕುಮಾರ್‌ ತಿಳಿಸಿದರು.

ಬಸ್‌ನಿಲ್ದಾಣದ ಪಕ್ಕದಲ್ಲಿರುವ ಬ್ಲಾಸಮ್‌ ಶಾಲೆ ಆವರಣದಲ್ಲಿತಾಲ್ಲೂಕು ಕಾನೂನು ಸೇವಾ ಸಮಿತಿ, ಮಕ್ಕಳು ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಸಹಯೋಗದಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದ ಪ್ರತಿಯೊಬ್ಬ ಪ್ರಜೆಯು ಪ್ರಬುದ್ಧವಾಗಿ ಬೆಳೆದಾಗ ಆ ದೇಶ ಅಭಿವೃದ್ಧಿ ರಾಷ್ಟ್ರವಾಗಲಿದೆ. ದೇಶದ ಉನ್ನತಿಗಾಗಿ ನಾವೆಲ್ಲರೂ ನಮ್ಮ ಪರಂಪರೆ, ನಮ್ಮ ಸಂಸ್ಕೃತಿ ಹಾಗೂ ಒಳ್ಳೆಯ ಧ್ಯೇಯೋದ್ದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಸಿಕೊಳ್ಳೋಣ. ನಮ್ಮೊಟ್ಟೆಗೆ ದೇಶವನ್ನು ಬೆಳೆಸೋಣ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಗಂಗಾಂಬಿಕೆ ಮಾತನಾಡಿ, ಶಾಲೆಯ ವತಿಯಿಂದ ನಡೆಯುವಂತಹ ಪಠ್ಯ ಮತ್ತು ಪಠ್ಯೇತರ ಕಾರ್ಯಕ್ರಮ, ಮಕ್ಕಳ ಪಠ್ಯೇತರ ಚಟುವಟಿಕೆಗಳು ನಮ್ಮ ಬೆಳವಣಿಗೆಗೆ ಹೇಗೆ ಉಪಯೋಗ ಆಗುತ್ತವೆ. ಮಕ್ಕಳ ಪ್ರಗತಿಯಲ್ಲಿ ಮಕ್ಕಳ ಪಾತ್ರ ಹಾಗೂ ಪೋಷಕರ ಪಾತ್ರದ ಮಹತ್ವವೇನು ಎಂಬುದರ ಬಗ್ಗೆ ತಿಳಿಸಿಕೊಟ್ಟರು.

ವಕೀಲ ರಾಮಚಂದ್ರ ಮಾತನಾಡಿ, ‘ದೇಶದ ಭವ್ಯ ಭವಿಷ್ಯದ ನಿರ್ಮಾಣ’ದಲ್ಲಿ ಮಕ್ಕಳ ಪಾತ್ರ ಬಹು ಮುಖ್ಯವಾದುದು ಮತ್ತು ಮಕ್ಕಳಿಗೆ ಕಾನೂನಿನ ಅರಿವು ಕೂಡ ಅಷ್ಟೇ ಮುಖ್ಯವಾದುದು ಎಂಬುದನ್ನು ತಿಳಿಸಿದರು.

ವಕೀಲ ಕಾಮೇಶ್ ‘ಮಕ್ಕಳ ಹಕ್ಕುಗಳು’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬ್ಲಾಸಮ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಅನನ್ಯ ಶಾನ್ ಭಾಗ್ ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ವಿದ್ಯಾರ್ಥಿ ರೇಣುಕಾ ಪ್ರಸಾದ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಲಾವಣ್ಯ ವಂದನಾರ್ಪಣೆ ಮಾಡಿದರು. ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಕೆ.ಆರ್.ಸುರೇಶ್, ಸುನಿಲ್ ಕುಮಾರ್, ಶಿಕ್ಷಣ ಇಲಾಖೆಯ ಶಿವಣ್ಣ, ಮಂಜುನಾಥ್‌ ಶಿಕ್ಷಕರಾದ ಜ್ಯೋತಿ, ನಾಗೇಂದ್ರಪ್ಪ, ಮುಕ್ತ, ಧನಶೇಖರ್, ಆಡಳಿತ ಮಂಡಳಿ ಸದಸ್ಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.