ADVERTISEMENT

ರೋಗಿ ಸಾವು: ಸಂಬಂಧಿಕರ ಪ್ರತಿಭಟನೆ

ಕೋವಿಡ್ ಇಲ್ಲದಿದ್ದರೂ ಸೋಂಕಿತೆಯೆಂದು ತಪ್ಪು ವರದಿ ನೀಡಿ ನಿರ್ಲಕ್ಷ್ಯದ ಆರೋಪ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 20:00 IST
Last Updated 25 ಸೆಪ್ಟೆಂಬರ್ 2020, 20:00 IST
ಹೊನ್ನಮ್ಮರ ಸಂಬಂಧಿಕರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು
ಹೊನ್ನಮ್ಮರ ಸಂಬಂಧಿಕರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು   

ರಾಮನಗರ: "ರೋಗಿಗೆ ಕೋವಿಡ್ ಇಲ್ಲದಿದ್ದರೂ ಇದೆ ಎಂದು ತಪ್ಪು ಮಾಹಿತಿ ನೀಡಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಅವರ ಸಂಬಂಧಿಕರು ಶುಕ್ರವಾರ ಜಿಲ್ಲಾ ಕಚೇರಿ ಸಂಕೀರ್ಣದ ಮುಂಭಾಗ ಪ್ರತಿಭಟನೆ ನಡೆಸಿದರು.

ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಅಂಜನಾಪುರ ನಿವಾಸಿ ಹೊನ್ನಮ್ಮ ಎಂಬುವರು ಇದೇ 24ರಂದು ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ನಿಧನರಾದರು. "ಇದೇ 17ರಂದು ನಮ್ಮ ತಾಯಿಗೆ ಕಫ, ಕೆಮ್ಮು ಕಾಣಿಸಿಕೊಂಡಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿದ್ದೆವು. ಅಂದು ರಾತ್ರಿ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಕರೆ ಮಾಡಿ, ಹೊನ್ನಮ್ಮ ಅವರಿಗೆ ಕೋವಿಡ್ ಇದ್ದು ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸುವುದಾಗಿ ಕರೆ ಮಾಡಿ ತಿಳಿಸಿದರು. ತದ ನಂತರ ರೋಗಿ ಆರೋಗ್ಯ ಸ್ಥಿತಿ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ. ನಮ್ಮ ಮೊಬೈಲ್‌ಗೆ ಯಾವ ಸಂದೇಶವೂ ಬರಲಿಲ್ಲ. ಹೀಗಾಗಿ ನಮಗೆ ಅನುಮಾನ ಬಂದಿತು. ಜಿಲ್ಲಾಸ್ಪತ್ರೆಗೆ ಹೋಗಿ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸಿದೆವು. ಆರಂಭದಲ್ಲಿ ತಾಯಿಯ ಕೋವಿಡ್‌ ವರದಿಯನ್ನು ನೀಡಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದರು. ನಂತರದಲ್ಲಿ ಒತ್ತಾಯ ಮಾಡಿದಾಗ ಇದೇ 23ರಂದು ಕೋವಿಡ್‌ ನೆಗೆಟಿವ್‌ ಎಂದು ವರದಿ ನೀಡಿದರು’ ಎಂದು ಹೊನ್ನಮ್ಮರ ಪುತ್ರ ಎಚ್‌. ಸುರೇಶ್ ಮಾಧ್ಯಮಗಳ ಮುಂದೆ ದೂರಿದರು.

"24ರಂದು ರಾಜರಾಜೇಶ್ವರಿ ಆಸ್ಪತ್ರೆಯಿಂದ ಕರೆ ಬಂದಿದ್ದು. ನಿಮ್ಮ ತಾಯಿ ತೀರಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಆ ಸಂದರ್ಭದಲ್ಲೂ ತಾಯಿಯ ಕೋವಿಡ್‌ ಪರೀಕ್ಷೆ ಮಾಡಿದ್ದು, ವರದಿ ನೆಗೆಟಿವ್ ಆಗಿದೆ. ಹೀಗಿದ್ದೂ ರೋಗಿಯನ್ನು ಕೋವಿಡ್ ಸೋಂಕಿತೆ ಎಂದು ಭಾವಿಸಿ ಆಕೆಯನ್ನು ಅದೇ ರೋಗಿಗಳ ಕೋಣೆಯಲ್ಲಿ ಇರಿಸಲಾಗಿತ್ತು. ಯಾವ ವೈದ್ಯರೂ ಅವರನ್ನು ಪರೀಕ್ಷಿಸಿ ಸೂಕ್ತ ಔಷದೋಪಚಾರ ಮಾಡುವ ಗೋಚಿಗೆ ಹೋಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ನನ್ನ ತಾಯಿ ಮೃತಪಟ್ಟಿದ್ದಾರೆ. ಶವವನ್ನೂ ಕೋವಿಡ್ ಸೋಂಕಿತೆ ಎಂಬಂತೆ ಸುತ್ತಿ ಕೊಟ್ಟಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಆಸ್ಪತ್ರೆ ಎಂಬ ಮೃತ್ಯುಕೂಪ: ಕನ್ನಡ ಜನಮನ ವೇದಿಕೆ ಅಧ್ಯಕ್ಷ ರಾಜು ಮಾತನಾಡಿ " ಕೆಂಗೇರಿಯಲ್ಲಿ ಇರುವ ರಾಜರಾಜೇಶ್ವರಿ ಆಸ್ಪತ್ರೆಯು ಕೋವಿಡ್ ರೋಗಿಗಳ ಪಾಲಿಗೆ ಮೃತ್ಯುಕೂಪವಾಗಿದೆ. ಇಲ್ಲಿ ಚಿಕಿತ್ಸೆಗೆ ದಾಖಲಾದ ಜಿಲ್ಲೆಯ ಸಾಕಷ್ಟು ರೋಗಿಗಳು ಸೂಕ್ತ ಆರೈಕೆ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಇದೆಲ್ಲ ಗೊತ್ತಿದ್ದೂ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ದೂರಿದರು.

"ಆಸ್ಪತ್ರೆ ಹಾಗೂ ಅಧಿಕಾರಿಗಳು ಶಾಮೀಲಾಗಿ ಕೋವಿಡ್ ಇಲ್ಲದವರಿಗೂ ಪಾಸಿಟಿವ್‌ ವರದಿ ನೀಡಿ ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುವ ತಂತ್ರ ಮಾಡುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. "ಹೊನ್ನಮ್ಮ ಅವರ ಕುಟುಂಬದವರಿಗೆ ಆದ ಅನ್ಯಾಯ ಮತ್ತೆ ಯಾರಿಗೂ ಆಗಬಾರದು. ಇದಕ್ಕೆ ಕಾರಣ ಆದವರ ಮೇಲೆ ಜಿಲ್ಲಾಡಳಿತ ಶಿಸ್ತು ಕ್ರಮ ಜರುಗಿಸಬೇಕು. ಜಿಲ್ಲೆಯ ಎಲ್ಲ ರೋಗಿಗಳಿಗೆ ರಾಮನಗರ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕ ರಣಧೀರ ಪಡೆ ಉಪಾಧ್ಯಕ್ಷ ಗೋವಿಂದರಾಜು, ಒಕ್ಕಲಿಗರ ವೇದಿಕೆ ಅಧ್ಯಕ್ಷ ಪ್ರಭಾಕರ್‌, ಕಲಾಸಂಗಮ ಟ್ರಸ್ಟ್‌ ಅಧ್ಯಕ್ಷ ಎಸ್‌.ಬಿ. ಲಿಂಗೇಗೌಡ, ರೈತ ಮುಖಂಡ ಶಿವಕುಮಾರ್‍, ನಾರಾಯಣ, ಹೊನ್ನಮ್ಮರ ಸಂಬಂಧಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಬಾಕ್ಸ್
ಮನವರಿಕೆ
ಹೊನ್ನಮ್ಮ ಅವರ ಸಾವಿಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಸಂಬಂಧಿಕರು ಶವವನ್ನು ಆಂಬುಲೆನ್ಸ್‌ನಲ್ಲಿ ತಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಟ್ಟು ಪ್ರತಿಭಟನೆಗೆ ಮುಂದಾದರು. ಆದರೆ ಶವ ಇಡಲು ಅವಕಾಶ ನೀಡದ ಪೊಲೀಸರು. ಜಾಣ್ಮೆಯಿಂದ ಅವರನ್ನು ಹೊರಗೆ ಸಾಗಿಸಿ ಕೇವಲ ಪ್ರತಿಭಟನೆಗಷ್ಟೇ ಅನುವು ಮಾಡಿಕೊಟ್ಟರು. ಜಿಲ್ಲಾಧಿಕಾರಿಯೇ ಬಳಿ ಬಂದು ಸಮಸ್ಯೆ ಆಲಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಕಡೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಡಿಎಚ್‌ಒ ನಿರಂಜನ್‌ ಹಾಗೂ ಪೊಲೀಸರು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ಮನವೊಲಿಸಿದರು.

ಪ್ರಕರಣದ ತನಿಖೆ: ಡಿಎಚ್‌ಒ

"ಹೊನ್ನಮ್ಮರ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್‌ ಭರವಸೆ ನೀಡಿದರು.

ಈ ಸಂಬಂಧ ಪತ್ರಕರ್ತರ ಜೊತೆ ಮಾತನಾಡಿದ ಅವರು "ಆಂಟಿಜನ್‌, ರ್‍ಯಾಪಿಡ್ ಟೆಸ್ಟ್‌ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಿ ನಂತರದಲ್ಲೂ ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುತ್ತದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಆರೈಕೆ ಸಿಗದೇ ಇರುವ ಬಗ್ಗೆ ಈ ಹಿಂದೆ ದೂರುಗಳು ಬಂದಿದ್ದವು. ಅಲ್ಲಿನ ಸಾವಿನ ಪ್ರಕರಣಗಳ ಸಂಖ್ಯೆ ಕೊಂಚ ಹೆಚ್ಚಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗ ವ್ಯವಸ್ಥೆ ಸುಧಾರಣೆ ಆಗುತ್ತಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಮುಂದುವರಿದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.