ADVERTISEMENT

ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 13:39 IST
Last Updated 13 ಫೆಬ್ರುವರಿ 2020, 13:39 IST

ಕನಕಪುರ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆ ಸೇರಿದಂತೆ ಖಾಸಗಿ ಉದ್ಯೋಗಗಳಲ್ಲೂ ಕನ್ನಡಿಗರಿಗೆ ಆದ್ಯತೆ ನೀಡಬೇಕು, ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿದ ಮಾದರಿಯಲ್ಲಿ ರಾಜ್ಯದ ಜನತೆಗೆ ಉದ್ಯೋಗ ಮೀಸಲಾತಿ ನೀಡಬೇಕೆಂದು ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಭಾಸ್ಕರ್‌ ಒತ್ತಾಯಿಸಿದರು.

ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಗುರುವಾರ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸ್ವಕರವೇ ತಾಲ್ಲೂಕು ಘಟಕವು ಕರ್ನಾಟಕ ಯುವಶಕ್ತಿ ಮತ್ತು ಆಸರೆ ಮಹಿಳಾ ಸಂಸ್ಥೆ ಸಹಯೋಗದಲ್ಲಿ ನಡೆಸಿದ ಸಾಂಕೇತಿಕ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ಉದ್ಯೋಗ ನೀಡುವುದರಲ್ಲಿ ಕರ್ನಾಟಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದಾಗ ಪರಭಾಷಿಕರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ದೊಡ್ಡಮಟ್ಟದಲ್ಲಿ ಉಗ್ರ ಹೋರಾಟವಾಗಿತ್ತು. ಆ ಸಂದರ್ಭದಲ್ಲಿ ಸರೋಜಿನಿ ಮಹಿಷಿ ವರದಿಯು ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಆದರೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯು ದೊರೆತಿಲ್ಲವೆಂದರು.

ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಕಂಪನಿಗಳಿಗೆ ನಮ್ಮ ನಾಡಿನ ಎಲ್ಲಾ ಸವಲತ್ತುಗಳು ಮೂಲ ಸೌಕರ್ಯಗಳು ದೊರೆಯುತ್ತಿವೆ. ಆದರೆ ನಮ್ಮ ಜನತೆಗೆ ಮಾತ್ರ ಅವುಗಳಿಂದ ಉದ್ಯೋಗ ದೊರೆಯುತ್ತಿಲ್ಲ. ನಮ್ಮಲ್ಲಿ ಇರುವ ಎಲ್ಲಾ ಖಾಸಗಿ ಕೈಗಾರಿಕೆಗಳು, ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕೊಡಬೇಕೆಂದು ಆಗ್ರಹಿಸಿದರು.

ಪ್ರತಿಭಟನಕಾರರು ಚನ್ನಬಸಪ್ಪ ವೃತ್ತದಲ್ಲಿ ಸ್ವಲ್ಪ ಹೊತ್ತು ಸಾಂಕೇತಿಕ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್‌ ವರ್ಷ ಒಡೆಯರ್‌ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. ಸಂಘಟನೆಯ ರಮೇಶ್‌, ಭರತ್‌ಕುಮಾರ್‌, ಚಾಂದಪಾಷ, ಕೌಸರ್‌, ರಾಜು, ಪುಟ್ಟರಾಮು, ನಂಜುಂಡ, ಆದಿಲ್‌ಪಾಷ, ಅನಂತಲಕ್ಷ್ಮಿ, ದೀಪ.ಎಂ, ವೆಂಕಟಲಕ್ಷ್ಮಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.