ರಾಮನಗರ: ತಾಲ್ಲೂಕಿನ ಹರೀಸಂದ್ರ ಗ್ರಾಮದ ಬಳಿ ರಾಮನಗರ ನಗರಸಭೆ ಮತ್ತು ಬಿಡದಿ ಪುರಸಭೆ ವತಿಯಿಂದ ನಿರ್ಮಾಣವಾಗುತ್ತಿರುವ ತ್ಯಾಜ್ಯ ನಿರ್ವಹಣಾ ಘಟಕ ವಿರೋಧಿಸಿ, ಸ್ಥಳೀಯ ರೈತರು, ವಿವಿಧ ಸಂಘಟನೆಗಳು ಹಾಗೂ ಬಿಜೆಪಿ–ಜೆಡಿಎಸ್ ಪಕ್ಷಗಳು ಸಹಯೋಗದಲ್ಲಿ ಭಾನುವಾರ ಕಸಬಾ ಹೋಬಳಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆ ಚಿಕ್ಕೇಗೌಡನದೊಡ್ಡಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬೈಕ್‌ಗಳು, ಆಟೊ ಹಾಗೂ ಕಾರುಗಳಲ್ಲಿ ಹೋಬಳಿ ವ್ಯಾಪ್ತಿಯು ಸುಗ್ಗನಹಳ್ಳಿ, ಹರಿಸಂದ್ರ, ಬಿಳಗುಂಬ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಂಚರಿಸಿ ಘಟಕದ ವಿರುದ್ಧ ಜಾಗೃತಿ ಮೂಡಿಸಿದರು. ‘ಬೇಡ ಬೇಡ ಕಸದ ಘಟಕ ಬೇಡ’ ಎಂದು ಘೋಷಣೆಗಳನ್ನು ಕೂಗಿದರು. ಅಲ್ಲಲ್ಲಿ ರಸ್ತೆ ನಡೆಸಿದ್ದಲ್ಲದೆ, ಸ್ಥಳೀಯ ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಲೆ ಮಾತನಾಡಿದ ಮುಖಂಡ ಚಂದ್ರಶೇಖರ್, ‘ತ್ಯಾಜ್ಯ ಘಟಕ ನಿರ್ಮಾಣವಾದರೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆ ಮೇಲೆ ಪರಿಣಾಮ ಬೀರಲಿದೆ. ತ್ಯಾಜ್ಯ ಗಬ್ಬುನಾತ ಬೀರುವುದರಿಂದ ಗ್ರಾಮಸ್ಥರು ನಿತ್ಯ ದುರ್ನಾತ ಅನುಭವಿಸಬೇಕು. ಸಾಂಕ್ರಾಮಿಕ ರೋಗಳು ಶುರುವಾಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
ಮುಖಂಡ ರಾಮಕೃಷ್ಣಯ್ಯ ಮಾತನಾಡಿ, ‘ಇಪ್ಪತ್ತು ಎಕರೆಯಲ್ಲಿ ನಿರ್ಮಾಣವಾಗಲಿರುವ ತ್ಯಾಜ್ಯ ಘಟಕದಿಂದಾಗಿ ಇಡೀ ಪರಿಸರಕ್ಕೆ ಧಕ್ಕೆಯಾಗಲಿದೆ. ಆರಂಭದಿಂದಲೂ ಸ್ಥಳೀಯರು ಘಟಕ ವಿರೋಧಿಸುತ್ತಲೇ ಇದ್ದಾರೆ. ಈಗಾಗಲೇ ಪಾದಯಾತ್ರೆ ಸಹ ಮಾಡಿದ್ದೇವೆ. ಆದರೂ, ಶಾಸಕರ ಕುಮ್ಮಕ್ಕಿನಿಂದ ಘಟಕ ನಿರ್ಮಾಣ ಕೆಲಸ ನಡೆಯುತ್ತಿದೆ. ಕೂಡಲೇ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ‘ನಗರ ಮತ್ತು ಪಟ್ಟಣದ ಕಸವನ್ನು ಹಳ್ಳಿಗೆ ತಂದು ಹಾಕಿದರೆ, ಈ ಭಾಗದಲ್ಲಿ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ಕೃಷಿ ಚಟುವಟಿಕೆ ಸೇರಿದಂತೆ ಈ ಭಾಗದ ಪರಿಸರಕ್ಕೂ ಧಕ್ಕೆಯಾಗುತ್ತದೆ. ಹಾಗಾಗಿ, ಘಟಕವನ್ನು ಕೈ ಬಿಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರುಗಳಾದ ಶಿವಕುಮಾರ್, ದೊಡ್ಡವೀಯ್ಯ, ಶಿವು, ಯೋಗಾನಂದ್, ರಾಮಣ್ಣ, ಆನಂದ್, ಕೃಷ್ಣಯ್ಯ, ಉಮೇಶ್, ಮಹದೇವ್, ಸ್ವಾಮಿ, ಶಿವಾನಂದ್, ನಾಗರಾಜು, ಸುರೇಂದ್ರನಾಥ ಶರ್ಮ, ಸಂತೋಷ್, ರಾಮು, ಚಂದ್ರು, ಚಂದ್ರಶೇಖರ್, ಪ್ರಕಾಶ್, ಗೋಪಾಲ್, ಕಿಟ್ಟಣ್ಣ, ಶಿವಾನಂದ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.