ADVERTISEMENT

ಚನ್ನಪಟ್ಟಣ: ರೇಷ್ಮೆಗೂಡು ರೀಲರ್‌ಗಳ ಪ್ರತಿಭಟನೆ

ಪಾಸ್‌ ವಿತರಿಸುವಂತೆ ಆಗ್ರಹ l ಗೂಡು ಹರಾಜು ಪ್ರಕ್ರಿಯೆ ನಿಲ್ಲಿಸಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:54 IST
Last Updated 7 ಏಪ್ರಿಲ್ 2020, 13:54 IST
ಚನ್ನಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್‌ಗಳು ನಡೆಸಿದ ಪ್ರತಿಭಟನೆಯಲ್ಲಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯಿತು
ಚನ್ನಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್‌ಗಳು ನಡೆಸಿದ ಪ್ರತಿಭಟನೆಯಲ್ಲಿ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯಿತು   

ಚನ್ನಪಟ್ಟಣ: ಪಟ್ಟಣದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರೀಲರ್‌ಗಳು ತಮ್ಮ ಸಮಸ್ಯೆಗಳನ್ನು ಆಲಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿ, ಗೂಡು ಹರಾಜು ಪ್ರಕ್ರಿಯೆ ನಿಲ್ಲಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತರಷ್ಟೇ ಅಲ್ಲ, ರೇಷ್ಮೆ ವ್ಯಾಪಾರಸ್ಥರ ಸಮಸ್ಯೆಗಳತ್ತಲೂ ಅಧಿಕಾರಿಗಳು ಗಮನಹರಿಸಬೇಕು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಿಯಾಗಿ ವ್ಯಾಪಾರ ಮಾಡಲು ಆಗುತ್ತಿಲ್ಲ. ಇದರ ಬಗ್ಗೆ ಜನಪ್ರತಿನಿಧಿಗಳು ಸೇರಿದಂತೆ ಯಾರೂ ನಮ್ಮ ಸಮಸ್ಯೆಗಳನ್ನು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾರುಕಟ್ಟೆ ಆರಂಭಿಸಿರುವುದರಿಂದ ರೈತರಿಗೆ ಅನುಕೂಲವಾಗುತ್ತಿದೆ. ನಮಗೂ ಪಾಸ್ ವಿತರಿಸಿ. ನಾವು ಗೂಡು ತೆಗೆದುಕೊಂಡು ಸಂಗ್ರಹ ಮಾಡಿಕೊಳ್ಳಲು ಆಗುವುದಿಲ್ಲ. ನೂಲು ಬಿಚ್ಚಿದರೆ ಮಾರಾಟ ಮಾಡಲು ಆಗುತ್ತಿಲ್ಲ. ನಮ್ಮ ಸಮಸ್ಯೆಯನ್ನು ಆಲಿಸಬೇಕು ಎಂದು ರೀಲರ್‌ ಜಬಿವುಲ್ಲಾಖಾನ್ ಘೋರಿ ಒತ್ತಾಯಿಸಿದರು.

ADVERTISEMENT

ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರು ಸೋಂಕು ನಿವಾರಕ ಟನಲ್ ಉದ್ಘಾಟನೆಗೆ ಸೋಮವಾರ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಆದರೆ, ನಮ್ಮ ಸಮಸ್ಯೆಗಳನ್ನು ಅವರು ಕೇಳಲಿಲ್ಲ. ಕೇವಲ ರೈತರನ್ನು ಮಾತನಾಡಿಸಿ ಹೊರಟರು. ನಮಗೂ ಸಮಸ್ಯೆಗಳಿವೆ. ಅಧಿಕಾರಿಗಳು ಸಹ ನಮ್ಮ ಸಮಸ್ಯೆಯನ್ನು ಶಾಸಕರ ಬಳಿ ಹೇಳಿಕೊಳ್ಳಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾರುಕಟ್ಟೆ ಅಧಿಕಾರಿಗಳಾದ ಬಸವರಾಜು, ಹೊಂಬಾಳೇಗೌಡ ಅವರು, ‘ಹರಾಜು ನಂತರ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈಗ ಹರಾಜು ನಡೆಸಿ’ ಎಂದರೂ ರೀಲರ್ಸ್ ಗಳು ಒಪ್ಪಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ಡಿವೈಎಸ್ಪಿ ಓಂಪ್ರಕಾಶ್ ಸಹ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಈ ನಡುವೆ ಅಧಿಕಾರಿಗಳು ಹಾಗೂ ರೀಲರ್‌ಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನೆಯಿಂದಾಗಿ ಮಾರುಕಟ್ಟೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. 10 ಗಂಟೆಗೆ ಆರಂಭವಾಗಬೇಕಿದ್ದ ರೇಷ್ಮೆಗೂಡಿನ ಹರಾಜು ಪ್ರಕ್ರಿಯೆ, ಮಧ್ಯಾಹ್ನ 12 ಗಂಟೆಯಾದರೂ ಪ್ರಾರಂಭವಾಗಿರಲಿಲ್ಲ. ರೇಷ್ಮೆಗೂಡು ತಂದ ರೈತರು ಈ ವೇಳೆ ಪರಿತಪಿಸುವಂತಾಯಿತು. ನಂತರ ಹಲವು ರೈತ ಮುಖಂಡರ ಒತ್ತಾಯದ ಮೇರೆಗೆ ಪ್ರತಿಭಟನೆ ಕೈಬಿಟ್ಟ ರೀಲರ್‌ಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.