ADVERTISEMENT

‘ಇರುಳಿಗರಿಗೆ ಸೂರು ಕಲ್ಪಿಸಿ’

Magadi

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 13:31 IST
Last Updated 5 ಆಗಸ್ಟ್ 2019, 13:31 IST
ಮಾಗಡಿ ತಾಲ್ಲೂಕಿನ ಅಜ್ಜನಹಳ್ಳಿ ಇರುಗಳಿಗ ಹಾಡಿಯ ನಿವಾಸಿ ಮುನಿಮಾದಮ್ಮ
ಮಾಗಡಿ ತಾಲ್ಲೂಕಿನ ಅಜ್ಜನಹಳ್ಳಿ ಇರುಗಳಿಗ ಹಾಡಿಯ ನಿವಾಸಿ ಮುನಿಮಾದಮ್ಮ   

ಮಾಗಡಿ: ಅಜ್ಜನಹಳ್ಳಿ ಸಿದ್ದೇದೇವರ ಬೆಟ್ಟದ ತಪ್ಪಲಿನಲ್ಲಿರುವ ಇರುಳಿಗರು ಮನೆ ನಿರ್ಮಿಸಿಕೊಳ್ಳಲು ಸರ್ಕಾರ ನೆರವು ನೀಡಬೇಕೆಂದು ಇರುಗಳಿಗ ಅರಣ್ಯವಾಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ತಲೆಮಾರುಗಳಿಂದ ನೆಲೆಸಿದ್ದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲಾಗಿದೆ. ಸಿದ್ದೇಶ್ವರ ಇರುಳಿಗರ ಹಾಡಿಯಲ್ಲಿ 13 ಗುಡಿಸಲುಗಳಿವೆ. ಭೂಮಾಲೀಕರು ಹಾಡಿ ಗುಡಿಸುತ್ತಲೂ ಬೇಲಿ ಹಾಕಿಕೊಂಡು ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡಿದ್ದಾರೆ. ವನವಾಸಿಗಳಿಗೆ ಪುನರ್‌ ವಸತಿ ಕಾನೂನು ಹಕ್ಕನ್ನು ಸುಪ್ರಿಂಕೋರ್ಟ್‌ ಮಾನ್ಯ ಮಾಡಿದೆ. ಅರಣ್ಯದಿಂದ ಒಕ್ಕಲೆಬ್ಬಿಸಬಾರದು. ಭೂಮಿ ಹಕ್ಕು ನೀಡಬೇಕೆಂದು ಕೋರ್ಟ್‌ ಸೂಚಿಸಿದೆ.

ADVERTISEMENT

ಆದರೆ, ಮೇಲ್ವರ್ಗದವರಿಗೆ ಸಹಾಯ ಮಾಡುವ ಮೂಲಕ ಅರಣ್ಯ ಅಧಿಕಾರಿಗಳು ಇರುಗಳಿಗರಿಗೆ ಅನ್ಯಾಯ ಮಾಡಿದ್ದಾರೆ. ಬುಡಕಟ್ಟು ಇರುಗಳಿಗರನ್ನು ಕಾಡಿನಿಂದ ಭೂಮಿಹಕ್ಕು ನೀಡದೆ ಒಕ್ಕಲೆಬ್ಬಿಸಲಾಗಿದೆ. ಗ್ರಾಮ ಅರಣ್ಯ ಸಮಿತಿಗಳ ನಿರ್ಣಯ ಗಾಳಿಗೆ ತೂರಿ ಘೋರ ಅನ್ಯಾಯ ಮಾಡಲಾಗಿದೆ. ಇರುಗಳಿಗರು ಇಂದಿಗೂ ಗೆಡ್ಡೆಗೆಣಸು, ಇಲಿ ತಿಂದು ಜೀವನ ಸಾಗಿಸುತ್ತಿದ್ದಾರೆ. ಭೂಮಿಹಕ್ಕು ನೀಡುವಂತೆ ಆಗ್ರಹಿಸಿ ಶಾಂತಿಯುತ ಹೋರಾಟ ನಡೆಸಿದ ವನವಾಸಿಗಳನ್ನು ಅರಣ್ಯದಲ್ಲಿ ಶ್ರೀಗಂಧ ಕಳವು ಆರೋಪ ಹೊರೆಸಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಲಿಸಲಾಗುತ್ತಿದೆ.

ಅರಣ್ಯ ಭೂಮಿಗೆ ಸಂಬಂಧಿಸಿದ ಕಾನೂನು ಉಲ್ಲಂಘಿಸಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಮಹದೇವಯ್ಯ, ಕಾರ್ಯದರ್ಶಿ ಶಿವರಾಜು.ಜೆ.ಎಲ್‌ ಮಾತನಾಡಿದರು. ಜೇನುಕಲ್ಲು ಹಾಡಿ, ಜೋಡುಗಟ್ಟೆ ಹಾಡಿ, ರಾಮಕಲ್‌ ಪಾಲ್ಯದ ಹಾಡಿ ಇರುಗಳಿಗ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.