ADVERTISEMENT

ರಾಮನಗರ: ಭತ್ತದ ಪೈರುಗಳ ಮಧ್ಯೆ ಹೆಬ್ಬಾವು!

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 13:42 IST
Last Updated 5 ಡಿಸೆಂಬರ್ 2024, 13:42 IST
<div class="paragraphs"><p>ರಾಮನಗರ ತಾಲ್ಲೂಕಿನ ಪಾಲಾಭೋವಿದೊಡ್ಡಿಯ ಗದ್ದೆಯಲ್ಲಿ ಗುರುವಾರ ಭತ್ತದ ಪೈರುಗಳ ಮಧ್ಯೆ ಕಂಡುಬಂದ ಭಾರಿ ಗಾತ್ರದ ಹೆಬ್ಬಾವು </p></div>

ರಾಮನಗರ ತಾಲ್ಲೂಕಿನ ಪಾಲಾಭೋವಿದೊಡ್ಡಿಯ ಗದ್ದೆಯಲ್ಲಿ ಗುರುವಾರ ಭತ್ತದ ಪೈರುಗಳ ಮಧ್ಯೆ ಕಂಡುಬಂದ ಭಾರಿ ಗಾತ್ರದ ಹೆಬ್ಬಾವು

   

ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ

ರಾಮನಗರ: ತಾಲ್ಲೂಕಿನ ಪಾಲಾಭೋವಿದೊಡ್ಡಿಯ ಗದ್ದೆಯಲ್ಲಿ ಗುರುವಾರ ಭಾರಿ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಅರ್ಕಾವತಿ ನದಿಯ ದಂಡೆ ಬಳಿ ಇರುವ ಚಂದ್ರೇಗೌಡ ಎಂಬುವರ ಗದ್ದೆಯಲ್ಲಿ ಬೆಳಿಗ್ಗೆ ಕಾರ್ಮಿಕರು ಭತ್ತದ ಪೈರು ಕೊಯ್ಲು ಮಾಡುವಾಗ ಪೈರುಗಳ ಮಧ್ಯೆ ಮಲಗಿದ್ದ ಹೆಬ್ಬಾವು ಗಮನಿಸಿದ್ದಾರೆ. ನಂತರ ಮಾಲೀಕರ ಗಮನಕ್ಕೆ ತಂದಿದ್ದಾರೆ.

ADVERTISEMENT

ಸ್ಥಳಕ್ಕೆ ಬಂದ ಚಂದ್ರೇಗೌಡ ಅವರು, ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಎ) ಮೊಹಮ್ಮದ್ ಮನ್ಸೂರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನ್ಸೂರ್ ಅವರು ಅರಣ್ಯ ಇಲಾಖೆ ಸಿಬ್ಬಂದಿ ವರದರಾಜು ಜೊತೆಗೆ ಸ್ಥಳೀಯ ಉರಗ ರಕ್ಷಕ ಸ್ನೇಕ್ ಹರೀಶ್ ಅವರನ್ನು ಸ್ಥಳಕ್ಕೆ ಕಳಿಸಿದ್ದಾರೆ. ಪೈರುಗಳ ಮಧ್ಯೆ ಇದ್ದ ಹೆಬ್ಬಾವನ್ನು ಹರೀಶ್ ಅವರು ಹಿಡಿದರು.

ರಾಮನಗರ ತಾಲ್ಲೂಕಿನ ಪಾಲಾಭೋವಿದೊಡ್ಡಿಯ ಗದ್ದೆಯಲ್ಲಿ ಭತ್ತದ ಪೈರುಗಳ ಮಧ್ಯೆ ಕಂಡುಬಂದ ಭಾರಿ ಗಾತ್ರದ ಹೆಬ್ಬಾವು ಹಿಡಿಯಲು ಮುಂದಾದ ಉರಗ ರಕ್ಷಕ ಸ್ನೇಕ್ ಹರೀಶ್ ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ

ಗದ್ದೆಯಲ್ಲಿ ಹೆಬ್ಬಾವು ಇರುವ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದು ಹೆಬ್ಬಾವನ್ನು ಕಣ್ತುಂಬಿಕೊಂಡರು. ಹರೀಶ್ ಅವರು ನಾಜೂಕಾಗಿ ಅದನ್ನು ಹಿಡಿದು ಚೀಲಕ್ಕೆ ತುಂಬಿಸಿ ಬೈಕ್‌ನಲ್ಲಿ ಕಾಡಿಗೆ ತೆಗೆದುಕೊಂಡು ಹೋಗುವ ಮೈ ನವಿರೇಳಿಸುವಂತಹ ದೃಶ್ಯಕ್ಕೆ ಜನ ಸಾಕ್ಷಿಯಾದರು.

ಕಡೆಗೂ ಉರಗ ರಕ್ಷಕ ಸ್ನೇಕ್ ಹರೀಶ್ ಕೈಗೆ ಸಿಕ್ಕ ಹೆಬ್ಬಾವು

‘ಹೆಬ್ಬಾವು ಪತ್ತೆಯಾದ ಗದ್ದೆಯು ನದಿ ಪಕ್ಕದಲ್ಲೇ ಇದೆ. ಅನತಿ ದೂರದಲ್ಲೇ ರಾಮದೇವರ ಬೆಟ್ಟದ ಅರಣ್ಯವಿದೆ. ಹೆಬ್ಬಾವು ರಾತ್ರಿ ಆಹಾರ ಅರಸಿ ಕಾಡಿನಿಂದ ನದಿ ಹಾಗೂ ರಸ್ತೆ ದಾಟಿಕೊಂಡು ಬಂದಿರುವ ಸಾಧ್ಯತೆ ಇದ್ದು, ಗದ್ದೆಯಲ್ಲಿ ಬೀಡು ಬಿಟ್ಟಿದೆ.

ಪೈರುಗಳ ಮಧ್ಯೆ ಇದ್ದ ಹೆಬ್ಬಾವನ್ನು ಕಾರ್ಮಿಕರು ಕೆಣಕದೆ ನಮಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಹೆಬ್ಬಾವನ್ನು ಸ್ನೇಕ್ ಹರೀಶ್ ಅವರಿಂದ ಸುರಕ್ಷಿತವಾಗಿ ಹಿಡಿಸಿ ಮರಳಿ ರಾಮದೇವರ ಬೆಟ್ಟದ ಕಾಡಿಗೆ ಬಿಡಲಾಯಿತು’ ಎಂದು ಆರ್‌ಎಫ್‌ಒ ಮೊಹಮ್ಮದ್ ಮನ್ಸೂರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಉರಗ ರಕ್ಷಕ ಸ್ನೇಕ್ ಹರೀಶ್ ಕೈಯಲ್ಲಿ ಹೆಬ್ಬಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.