ADVERTISEMENT

ಬಸ್ ಏರಲು ಜನರ ಸರದಿ ಸಾಲು

ರಾಮನಗರದಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 19 ಮೇ 2020, 15:34 IST
Last Updated 19 ಮೇ 2020, 15:34 IST
ರಾಮನಗರ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮಂಗಳವಾರ ಸರದಿ ಸಾಲಿನಲ್ಲಿ ನಿಂತ ಪ್ರಯಾಣಿಕರು
ರಾಮನಗರ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮಂಗಳವಾರ ಸರದಿ ಸಾಲಿನಲ್ಲಿ ನಿಂತ ಪ್ರಯಾಣಿಕರು   

ರಾಮನಗರ: ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯಿಂದ ಅಂತರ ಜಿಲ್ಲೆಗೆ ಬಸ್ ಸಂಚಾರ ಆರಂಭಗೊಂಡಿದ್ದು, ಮೊದಲ ದಿನದಂದು ಪ್ರಯಾಣಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆ 7 ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಬಸ್ ಸಂಚಾರ ಆರಂಭವಾಯಿತು. ಬಸ್ ನಿಲ್ದಾಣಕ್ಕೆ ಬಂದ ಪ್ರತಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿ, ಪ್ರತಿಯೊಬ್ಬ ಪ್ರಯಾಣಿಕರು ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದಾರೆ? ಅವರ ಮೊಬೈಲ್‌ ಸಂಖ್ಯೆಗಳ ಮಾಹಿತಿ ಪಡೆದು ನಿಲ್ದಾಣದಲ್ಲಿಯೇ ಟಿಕೆಟ್ ನೀಡಲಾಯಿತು. ಪರಸ್ಪರ ಅಂತರ ಕಾಯ್ದುಕೊಳ್ಳಲಾಗಿದ್ದು, ಮಾಸ್ಕ್‌ ಬಳಕೆ ಕಡ್ಡಾಯ ಮಾಡಲಾಗಿತ್ತು.

ಮೊದಲ ದಿನದಂದು ಕೇವಲ ಬೆಂಗಳೂರಿಗೆ ಮಾತ್ರ ಬಸ್ ಸಂಚಾರದ ವ್ಯವಸ್ಥೆ ಇತ್ತು. ರಾಮನಗರದಿಂದ ಬೆಂಗಳೂರು ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಮೊದಲ ಬಸ್ ಬೆಳಗ್ಗೆ 7.50ರ ವೇಳೆಗೆ ಪ್ರಯಾಣ ಬೆಳೆಸಿದ್ದು, ಕೇವಲ 30 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಲಾಕ್‍ಡೌನ್ ನಂತರ ಪ್ರಥಮ ಬಾರಿಗೆ ಜಿಲ್ಲೆಯಿಂದ ಬೆಂಗಳೂರಿಗೆ ಬಸ್ ಸಂಚಾರ ಆರಂಭಿಸಿದ್ದರಿಂದ ಉದ್ಯೋಗಿಗಳು ನಿಟ್ಟುಸಿರು ಬಿಟ್ಟರು. ಬೆಳಗ್ಗೆಯೇ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿ ಮಾಡಿ ವಾಹನ ಏರಿದರು. ಆದರೆ, ಮಧ್ಯಾಹ್ನದ ವೇಳೆಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದ್ದು, ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಜನರು ಬರಲಿಲ್ಲ.

ADVERTISEMENT

64 ಬಸ್‌: ಇದೇ ತಿಂಗಳ 4ರಂದು ಜಿಲ್ಲೆಯ ಒಳಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಅಲ್ಲಿಂದ ಈವರೆಗೆ ದಿನಕ್ಕೆ 30 ಬಸ್‌ ಗಳು ಸಂಚಾರ ಕೈಗೊಂಡಿದ್ದವು. ಮಂಗಳವಾರ ಇವುಗಳ ಸಂಖ್ಯೆ 64ಕ್ಕೆ ಏರಿಕೆ ಆಗಿತ್ತು.

’ಮೊದಲ ದಿನ ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರಗಳಿಂದ ಬೆಂಗಳೂರಿಗೆ ಬಸ್ ಸಂಚಾರ ಮಾಡಿದೆ. ಅಂತರ ರಾಜ್ಯಗಳಿಗೆ ಬಸ್ ಸಂಚಾರಕ್ಕೆ ನಿರ್ಬಂಧ ಇದ್ದ ಕಾರಣ ಅಲ್ಲಿಗೆ ಸಂಚಾರ ಆರಂಭಿಸಲು ಸಾಧ್ಯವಾಗಿಲ್ಲ. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಉಳಿದ ಜಿಲ್ಲೆಗಳಿಗೆ ಸಂಚಾರ ಆರಂಭಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.