ADVERTISEMENT

ಕಣ ಮಾಯ, ರಸ್ತೆ ಮೇಲೆ ಒಕ್ಕಣೆ

ಪೆಟ್ರೋಲ್‌, ಡೀಸೆಲ್‌, ಆಯಿಲ್‌ನಿಂದ ರಾಗಿ ವಿಷಪೂರಿತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 4:07 IST
Last Updated 21 ಡಿಸೆಂಬರ್ 2020, 4:07 IST
ರಸ್ತೆ ಮೇಲೆ ಒಕ್ಕಣೆ ಮಾಡುತ್ತಿರುವ ರೈತರು
ರಸ್ತೆ ಮೇಲೆ ಒಕ್ಕಣೆ ಮಾಡುತ್ತಿರುವ ರೈತರು   

ಬಿಡದಿ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕಣಗಳು ಮಾಯವಾಗಿದ್ದು, ರಸ್ತೆಯ ಮೇಲೆಯೇ ಒಕ್ಕಣೆ ಕೆಲಸವಾಗುತ್ತಿದೆ. ಇದು ಬೆಳೆ ಕಲ್ಮಶವಾಗಲೂ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಉತ್ತಮ ರಾಗಿ ಫಸಲು ಬಂದಿದ್ದು ಒಕ್ಕಣೆ ಕೆಲಸವು ಆರಂಭವಾಗಿದೆ. ಪೂರ್ವಜರ ಕಾಲದಿಂದಲೂ ಹಳ್ಳಿಗಳಲ್ಲಿ ಕಣಗಳ ಮೂಲಕ ಒಕ್ಕಣೆಯನ್ನು ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರಸ್ತೆ ಮೇಲೆ ರಾಗಿ ಒಕ್ಕಣೆ ಮಾಡುತ್ತಿರುವ ಹಿನ್ನೆಲೆ ವಾಹನಗಳಿಂದ ಸೋರುವ ಪೆಟ್ರೋಲ್, ಡೀಸೆಲ್, ಆಯಿಲ್ ಎಲ್ಲವೂ ಸಹ ರಾಗಿಯ ಮೇಲೆ ಬೀಳುತ್ತದೆ.

ರೈತರು ರಾಗಿ ಒಕ್ಕಣೆಯನ್ನು ಕಣದಲ್ಲಿ ಮಾಡುವ ಬದಲಾಗಿ ರಸ್ತೆಯಲ್ಲಿ ಹಾಕುತ್ತಿದ್ದಾರೆ. ಇದರಿಂದಾಗಿ ವಾಹನ ಸವಾರರಿಗೂ ತೊಂದರೆಯಾಗುವ ಜೊತೆಗೆ ರಾಗಿಯೂ ಸಹ ವಿಷಪೂರಿತವಾಗಿ ಬದಲಾಗುತ್ತಿದೆ. ಆದರೆ ಈ ಬಗ್ಗೆ ರೈತರು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ರಾಗಿಯ ಫಸಲು ಈ ಬಾರಿ ಉತ್ತಮವಾಗಿ ರೈತರ ಕೈಸೇರಿದೆ. ಆದರೆ ಕಣದ ಬದಲಿಗೆ ರಸ್ತೆಯಲ್ಲಿಯೇ ರಾಗಿಯನ್ನು ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡುವ ಜನರಿಗೂ ತೊಂದರೆಯಾಗುತ್ತಿದೆ.

ADVERTISEMENT

ಪೊಲೀಸರ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 5 ವರ್ಷದಲ್ಲಿ ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುವುದರಿಂದ ಅಪಘಾತಕ್ಕೊಳಗಾಗಿ ಹೆಚ್ಚಿನ ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಅಪಘಾತಗಳು ಒಂದು ಕಡೆಯಾದರೆ ರಸ್ತೆ ಮೇಲೆ ರಾಗಿ ಒಕ್ಕಣೆ ಮಾಡುವುದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ರಸ್ತೆ ಮೇಲೆ ರಾಗಿ ಒಕ್ಕಣೆ ಮಾಡುತ್ತಿರುವ ಹಿನ್ನೆಲೆ ವಾಹನಗಳಿಂದ ಸೋರುವ ಪೆಟ್ರೋಲ್, ಡೀಸೆಲ್, ಆಯಿಲ್ ಎಲ್ಲವೂ ಸಹ ರಾಗಿಯ ಮೇಲೆ ಬೀಳುತ್ತದೆ. ಜೊತೆಗೆ ವಾಹನಗಳ ಟೈಯರ್‌ಗಳು ರಾಗಿಯ ಮೇಲೆ ಹೋಗುವುದರಿಂದ ಎಲ್ಲಾ ರೀತಿಯ ಕಸದ ಅಂಶಗಳು ರಾಗಿಯಲ್ಲಿ ಬೆರೆಯುತ್ತದೆ. ಇದರಿಂದಾಗಿ ರಾಗಿ ಸಂಪೂರ್ಣ ವಿಷವಾಗುತ್ತದೆ. ಆ ರಾಗಿಯನ್ನು ತಿನ್ನುವ ಜನರು ಸಹ ರೋಗಕ್ಕೆ ತುತ್ತಾಗುತ್ತಾರೆಂದು ಜನರ ಅಭಿಪ್ರಾಯವಾಗಿದೆ.

‘ರಾಗಿ ಒಕ್ಕಣೆ ಮಾಡದಂತೆ ಈಗಾಗಲೇ ಜನರಿಗೆ ತಿಳಿ ಹೇಳಿದ್ದರೂ ಕೂಡ ರೈತ ವರ್ಗದ ಹಲವು ಮಂದಿ ರಸ್ತೆಗಳಲ್ಲೇ ಒಕ್ಕಣೆ ಮಾಡುತ್ತಿದ್ದಾರೆ. ಇದು ವಾಹನ ಸವಾರರಿಗೆ ಮಾತ್ರವಲ್ಲದೆ, ರಾಗಿ ಸೇವಿಸುವ ಮಂದಿಗೂ ಅಪಾಯ ತಂದೊಡ್ಡುತ್ತಿದ್ದಾರೆ’ ಎಂದು ಪ್ರಜ್ಞಾವಂತ ಗ್ರಾಮ ವಾಸಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.