ADVERTISEMENT

ರಾಮನಗರ: ರೈತರಿಗೆ 100 ಗೋವುಗಳ ದಾನ

ಬಿಜೆಪಿ– ಶೀ ಫಾರ್ ಸೊಸೈಟಿಯಿಂದ ನೈಸರ್ಗಿಕ ಕೃಷಿ ಶಿಬಿರ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 7:02 IST
Last Updated 5 ಜೂನ್ 2023, 7:02 IST
ರಾಮನಗರದಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ಹಾಗೂ ಶೀ ಫಾರ್ ಸೊಸೈಟಿ ಪರಿಸರ ದಿನಾಚರಣೆ ಅಂಗವಾಗಿ, ಹಮ್ಮಿಕೊಂಡಿದ್ದ ಗೋವು ದಾನ ಕಾರ್ಯಕ್ರಮದಲ್ಲಿ ದೇಸಿ ತಳಿಯ ಹಸುವಿಗೆ ಗಣ್ಯರು ಪೂಜೆ ಸಲ್ಲಿಸಿದರು
ರಾಮನಗರದಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ಹಾಗೂ ಶೀ ಫಾರ್ ಸೊಸೈಟಿ ಪರಿಸರ ದಿನಾಚರಣೆ ಅಂಗವಾಗಿ, ಹಮ್ಮಿಕೊಂಡಿದ್ದ ಗೋವು ದಾನ ಕಾರ್ಯಕ್ರಮದಲ್ಲಿ ದೇಸಿ ತಳಿಯ ಹಸುವಿಗೆ ಗಣ್ಯರು ಪೂಜೆ ಸಲ್ಲಿಸಿದರು   

ರಾಮನಗರ: ಬಿಜೆಪಿ ರೈತ ಮೋರ್ಚಾ ಹಾಗೂ ಮಹಿಳಾ ಬೈಕರ್‌ಗಳ ಸ್ವಯಂ ಸೇವಾ ಸಂಘಟನೆ ಶೀ ಫಾರ್ ಸೊಸೈಟಿ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ, ಜಿಲ್ಲೆಯ ರೈತರಿಗೆ 100 ದೇಸಿ ತಳಿಯ ಹಸುಗಳನ್ನು ವಿತರಿಸಲಾಯಿತು.

ನಗರದ ಆರ್.ವಿ.ಸಿ.ಎಸ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಪ್ರಾದೇಶಿಕ ಗೋತಳಿಗಳ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ನೈಸರ್ಗಿಕ ಕೃಷಿ ಶಿಬಿರ ಹಾಗೂ ರೈತರಿಗೆ ದೇಸಿ ಗೋವುಗಳ ವಿತರಣೆ ಕಾರ್ಯಕ್ರಮವು ಇಂತಹದ್ದೊಂದು ವಿಶಿಷ್ಟ ದಾನಕ್ಕೆ ಸಾಕ್ಷಿಯಾಯಿತು. 

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬಂಟ್ವಾಳ, ಪುತ್ತೂರು, ಕಡಬ ತಾಲ್ಲಕುಗಳಿಂದ ತಂದಿದ್ದ ಮಲೆನಾಡು ಗಿಡ್ಡ, ಗೀರ್ ಸೇರಿದಂತೆ ದೇಸಿ ತಳಿಯ ತಲಾ ಒಂದು ಹಸು ಹಾಗೂ ಎತ್ತನ್ನು ರೈತರು ದಾನವಾಗಿ ಪಡೆದರು.

ADVERTISEMENT

ಬಿಜೆಪಿ ರೈತ ಮೋರ್ಚಾದ ದಕ್ಷಿಣ ವಿಭಾಗದ ಕಾರ್ಯದರ್ಶಿ ವಿ.ಎಂ. ವಿದ್ಯಾ ಮಾತನಾಡಿ, ‘ಜನರಲ್ಲಿ ನೈಸರ್ಗಿಕ ಕೃಷಿ ಕುರಿತು ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಲು ಉತ್ಪಾದನೆ ಜೊತೆಗೆ, ಹಸಿರು ರಕ್ಷಣೆಗೆ ಒತ್ತು ನೀಡಲಾಗುತ್ತಿದೆ’ ಎಂದರು.

ಶೀ ಫಾರ್ ಸೊಸೈಟಿ ಸಂಘಟನೆ ಸಂಸ್ಥಾಪಕಿ ಹರ್ಷಿಣಿ ವೆಂಕಟೇಶ್, ‘ನಮ್ಮ ಸಂಘಟನೆ ಪರಿಸರ ದಿನಾಚರಣೆ ಅಂಗವಾಗಿ ಪ್ರತಿವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ಸಲ ದೇಸಿ ಹಸುಗಳನ್ನು ರೈತ ಕುಟುಂಬಕ್ಕೆ ವಿತರಿಸಿ, ಗೋತಳಿಗಳ ಸಂವರ್ಧನೆಗೆ ಒತ್ತು ನೀಡಲಾಗಿದೆ’ ಎಂದ ಹೇಳಿದರು.

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕುರಿತು ಮಾತನಾಡಿದ ಬಿ.ಆರ್. ಪ್ರಸನ್ನಮೂರ್ತಿ, ‘ಮಲೆನಾಡು ತಳಿಯ ಗೋವು ನೀಡುವ ಹಾಲು ಮನುಷ್ಯನ ರೋಗ ನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ. ರೈತರು ದೇಸಿ ಹಸುಗಳ ಸಾಕಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕೇಶ್ ಗೌಡ, ಮುಖಂಡರಾದ ಹುಲುವಾಡಿ ದೇವರಾಜ್, ರುದ್ರದೇವರು, ಶೀ ಸಂಘಟನೆಯ ಶಾಲಿನಿ ದೀಪಕ್, ಕವಿತಾ ಪ್ರಭಾಕರ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.